ಕೊರೋನಾರೋಗಿಗಳು ಆಸ್ಪತ್ರೆಯಲ್ಲಿ ಈ ಮೂಲಕವೂ ದೂರುಗಳನ್ನು ಅಧಿಕಾರಿಗಳಿಗೆ ತಿಳಿಸಬಹುದು..!!

Soma shekhar

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಲೇ ಇದ್ದು ಪ್ರತಿನಿತ್ಯ ಸಾವಿರಾರು ಕೇಸ್ ಗಳು ಬೆಂಗಳೂರಿನಲ್ಲೆ ದಾಖಲಾಗುತ್ತಿದೆ. ಇದರಿಂದ  ಕೊರೋನಾಗೆಂದು ನಿಗದಿ ಪಡಿಸಿದ್ದ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಹೆಚ್ಚಾಗುತ್ತಿದೆ. ಇದರಿಂದ ಅದೆಷ್ಟೋ ರೋಗಿಗಳು ಚಿಕಿತ್ಸೆ ಸಿಗದೆ ಪ್ರಾಣ ಬಿಟ್ಟ ಉದಾಹರಣೆಗಳೂ ಕೂಡ ಇದೆ. ಇದರ ಜೊತೆಗೆ ಆಸ್ಪತ್ರೆಗಳಲ್ಲೂ ಕೂಡ ಸಾಕಷ್ಟು ತೊಂದರೆಯನ್ನು ರೋಗಿಗಳು ಅನುಭವಿಸುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಹೇಳಿಕೊಳ್ಳಲು ಅಧಿಕಾರಿಗಳನ್ನು ಕಾಯುವ ಅವಶ್ಯಕತೆ ಇತ್ತು ಇನ್ನು ಮುಂದೆ ಸಮಸ್ಯೆಗಳನ್ನು ತಿಳಿಸಲು ಅಧಿಕಾರಿಗಳನ್ನು ಕಾಯುವ ಅವಶ್ಯಕತೆ ಇಲ್ಲ. ಬದಲಿಗೆ  ವಾಟ್ಸಾಪ್ ಮೂಲಕ ದೂರನ್ನು ನೀಡಬಹುದು ಎಂದು ತಿಳಿಸಲಾಗಿದೆ.

 

ಹೌದು ಚಿಕಿತ್ಸೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಎದುರಿಸುತ್ತಿರುವ ಕೊರೋನಾ ಸೋಂಕಿತ ವ್ಯಕ್ತಿಗಳು ದೂರು ನೀಡಲು ಆಸ್ಪತ್ರೆ ಅಧಿಕಾರಿಗಳ ಬರುವಿಕೆಗಾಗಿ ಕಾಯುವಂತಿಲ್ಲ. ಶೀಘ್ರದಲ್ಲೇ ವಾಟ್ಸ್'ಅಪ್ ಮೂಲಕ ದೂರು ನೀಡುವ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಿದೆ.

ಸೋಂಕಿತ ವ್ಯಕ್ತಿಗಳು ದೂರು ನೀಡಲು ವಿಕ್ಟೋರಿಯಾ, ಬೌರಿಂಗ್ ಹಾಗೂ ರಾಜೀವ್ ಗಾಂಧಿ ಆಸ್ಪತ್ರೆಗಳು ವಾಟ್ಸ್'ಅಪ್ ಸಂಖ್ಯೆಯೊಂದನ್ನು ಮೀಸಲಿರಿಸಲಿದ್ದು, ಈ ಮೂಲಕ ಸೋಂಕಿತ ವ್ಯಕ್ತಿಗಳು ವೈದ್ಯರು ಹಾಗೂ ಅಧಿಕಾರಿಗಳಿಗೆ ದೂರು ನೀಡಬಹುದಾಗಿದೆ.

ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ನಿನ್ನೆಯಷ್ಟೇ ಸಭೆ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ನಿರ್ಧಾರ ಕೈಗೊಂಡಿದ್ದಾರೆ.

 

ಕೆಲ ದಿನಗಳ ಹಿಂದಷ್ಟೇ ಸುಧಾಕರ್ ಅವರು ಮೂರು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಹಲವು ಸೋಂಕಿತರು ದೂರುಗಳನ್ನು ನೀಡಿದ್ದಾರೆ. ವಾರ್ಡ್ ಗಳ ಪರಿಸ್ಥಿತಿ ಪರಿಶೀಲನೆಗೆ ಅಧಿಕಾರಿಗಳು ಎಲ್ಲೆಡೆ ಓಡಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ದೂರು ನೀಡಲು ವಾಟ್ಸ್‌ಅಪ್ ಸಂಖ್ಯೆಯನ್ನು ಮೀಸಲಿರಿಸಲಿದ್ದು, ಗ್ರೂಪ್ ನ್ನು ಆಸ್ಪತ್ರೆಯ ಅಧೀಕ್ಷಕರು, ನೋಡಲ್ ಅಧಿಕಾರಿಗಳು ಹಾಗೂ ಸಂಬಂಧ ಸಚಿವರು ಪರಿಶೀಲನೆ ನಡೆಸಲಿದ್ದಾರೆಂದು ಹೇಳಿದ್ದಾರೆ.

 

ಸ್ವಚ್ಛಗೊಳಿಸುವವರು ಹಾಗೂ ಸಿಬ್ಬಂದಿಗಳೇ ವಾರ್ಡ್'ಗಳ ಒಳ ಹೋಗಲು ಹೆದರುತ್ತಿದ್ದಾರೆ. ಇನ್ನು ಸೋಂಕಿತ ವ್ಯಕ್ತಿಗಳಿಗೆ ಯಾವ ರೀತಿ ಚಿಕಿತ್ಸೆ ನೀಡುತ್ತಿದ್ದಾರೋ ಎಂಬ ಸಂಶಯಗಳು ಜನರಲ್ಲಿ ಮೂಡುತ್ತಿವೆ. ಸಿಸಿಟಿವಿ ಗಳ ಮೂಲಕ ಪ್ರತೀ ವಾರ್ಡ್'ಗಳ ಚಲನವಲನಗಳನ್ನು ಗಮನಿಸಲಾಗುತ್ತಿದೆ. ವಾಟ್ಸ್ ಆಪ್ ಮೂಲಕ ಸೋಂಕಿತ ವ್ಯಕ್ತಿಗಳ ಅಭಿಪ್ರಾಯ ಹಾಗೂ ದೂರುಗಳನ್ನು ಸಂಗ್ರಹಿಸಲು ವೇದಿಕೆ ನಿರ್ಮಾಣ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಸೋಂಕಿತ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು ವಾಟ್ಸ್'ಅಪ್ ಗ್ರೂಪ್'ಗೆ ಸೇರ್ಪಡೆಗೊಳಿಸಲಾಗುತ್ತದೆ. ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆಯೇ ತೆಗೆದುಹಾಕಲಾಗುತ್ತದೆ.

ಸೋಂಕಿತ ವ್ಯಕ್ತಿಗಳ ಕುಟುಂಬ ಸದಸ್ಯರೂ ಕೂಡ ಈ ಮೂಲಕ ದೂರು ನೀಡಬಹುದು. ದೂರುಗಳು ಬರುತ್ತಿದ್ದಂತೆಯೇ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

 

Find Out More:

Related Articles: