ಕೋವಿಡ್ ನಿಯಂತ್ರಿಸಲು ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ: ಈ ಮಾರ್ಗಸೂಚಿಯಲ್ಲಿ ತಿಳಿಸಿರುವುದಾದರೂ ಏನು..?
ಕೋವಿಡ್-19 ನಿಯಂತ್ರಣಕ್ಕಾಗಿ ಒಂದು ವಾರಗಳ ಕಾಲ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಲಾಕ್ಡೌನ್ ಹೇರಿತ್ತು. ಇಂದಿಗೆ ಒಂದು ವಾರಗಳ ಕಾಲದ ಲಾಕ್ಡೌನ್ ಅವಧಿ ಮುಕ್ತಾಯವಾಗಿದೆ. ನಾಳೆಯಿಂದ ಲಾಕ್ಡೌನ್ ತೆರವಾಗಲಿದೆ. ಸದ್ಯ ಲಾಕ್ಡೌನ್ ತೆರವಾದರೂ ಸಹ ಜನರ ಮುಕ್ತ ಸಂಚಾರಕ್ಕೆ, ಬೇಜಾಬಿಟ್ಟಿ ವರ್ತನೆಗೆ ಸರ್ಕಾರ ಅವಕಾಶ ನೀಡಿಲ್ಲ. ಈ ಸಂಬಂಧ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ ಇಡೀ ರಾತ್ರಿ ಕರ್ಫ್ಯೂ, ಭಾನುವಾರ ಲಾಕ್ಡೌನ್ ಮುಂದುರಿಸಿದೆ. ಈ ಮಾರ್ಗ ಸೂಚಿಯಲ್ಲಿ ಇರುವ ಮಾರ್ಗಗಳೇನು..?
ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್, ಈ ಗೈಡ್ಲೈನ್ಸ್ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ಧಾರೆ. ಸರ್ಕಾರದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕೊರೋನಾ ವೈರಸ್ ತಹಬದಿಗೆ ತರಲು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಹೇಳಿದ್ಧಾರೆ.
ಈ ಮುನ್ನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜ್ಯವನ್ನುದ್ದೇಶಿಸಿ ಭಾಷಣ ಮಾಡಿದರು. ಸಂಜೆ 5 ಗಂಟೆಗೆ ಸಾಮಾಜಿಕ ಜಾಲತಾಣದಲ್ಲಿ ಆನ್ಲೈನ್ ಮೂಲಕ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತಾಡಿದ ಯಡಿಯೂರಪ್ಪರ ಭಾಷಣ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಲೈವ್ನಲ್ಲಿ ಪ್ರಸಾರವಾಯ್ತು.
ಶಾಸಕರು, ಸಚಿವರು, ವೈದ್ಯರು, ಪೊಲೀಸರು ಸೇರಿದಂತೆ ಆಶಾ ಕಾರ್ಯಕರ್ತರು ಹಗಲು ರಾತ್ರಿಯೆನ್ನದೇ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಇವರು ತಮ್ಮ ಪ್ರಾಣದ ಹಂಗು ತೊರೆದು ನಮಗಾಗಿ ಕೆಲಸ ಮಾಡಬೇಕಾದರೇ ನಾವು ಸರ್ಕಾರದ ಕೋವಿಡ್-19 ರೂಲ್ಸ್ ಮಾಡಲು ಸಾಧ್ಯವಿಲ್ಲವೇ. ನಾವು ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕೆಲಸ ಮಾಡಲೇಬೇಕು ಎಂದರು.
ಕೋವಿಡ್-19 ನಿಯಂತ್ರಣಕ್ಕೆ ತಜ್ಞರು ನೀಡಿದ 5T ಸ್ಟ್ರಾಟಜಿ ಬಹಳ ಮುಖ್ಯವಾದದ್ದು. 5T ಎಂದರೇ ಟ್ರೇಸ್, ಟ್ರ್ಯಾಕ್, ಟೆಸ್ಟ್, ಟ್ರೀಟ್ ಅಂಡ್ ಟೆಕ್ನಾಲಜಿ ಎಂದರ್ಥ. ಇದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು. ನಾವು ಇದರಲ್ಲಿ ಮುಂಚೂಣಿಯಲ್ಲಿದ್ದೇವೆ. ಎಲ್ಲರೂ ಇದನ್ನು ಪಾಲಿಸಿದರೇ ಕೊರೋನಾ ನಿಯಂತ್ರಣ ಮಾಡಬಹುದು ಎಂದು ಹೇಳಿದರು.
ಹಾಗೆಯೇ ಬಿಬಿಎಂಪಿ, ಸರ್ಕಾರ ಎಲ್ಲರೂ ಕೊರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದೇವೆ. ಇದಕ್ಕಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 11 ಸಾವಿರ ಬೆಡ್ ವ್ಯವಸ್ಥೆ ಮಾಡಲಾಗಿದೆ. ಹೊರ ರಾಜ್ಯದಿಂದ ಬರುವ ಎಲ್ಲರ ಮೇಲೆಯೂ ನಿಗಾ ಇಡಲಾಗುತ್ತಿದೆ ಎಂದು ತಿಳಿಸಿದರು.
ನಾಳೆಯಿಂದ ಬೆಂಗಳೂರಿನಲ್ಲಿ ಲಾಕ್ಡೌನ್ ಇರುವುದಿಲ್ಲ. ಸರ್ಕಾರಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಬಹಳ ಮುಖ್ಯ. ಹಾಗಾಗಿ ಬೆಂಗಳೂರಿನಲ್ಲಿ ನಾಳೆಯಿಂದ ಯಾವುದೇ ಲಾಕ್ಡೌನ್ ಇಲ್ಲ ಎಂದು ಸ್ಪಷ್ಟಪಡಿಸಿದರು.