ಕೊರೋನಾಗೆ ಔಷಧಿ ಸಂಶೋಧಿಸಲು ಎಷ್ಟು ವರ್ಷ ಬೇಕಂತೆ ಗೊತ್ತಾ..?
ಹೌದು ಕೊರೊನಾವೈರಸ್ ಸೋಂಕಿತರ ಸಂಖ್ಯೆ ಪ್ರತಿನಿತ್ಯ ಲಕ್ಷದ ಗಡಿ ದಾಟುತ್ತಿದ್ದು, ಲಸಿಕೆ ಅದೆಂದು ಸಿಗುವುದೋ ಎಂಬ ನಿರೀಕ್ಷೆಯಲ್ಲಿ ಇಡೀ ಜಗತ್ತು ಎದುರು ನೋಡುತ್ತಿದೆ. ಕೊವಿಡ್-19 ಲಸಿಕೆ ಅಭಿವೃದ್ಧಿಪಡಿಸಲು 1.5 ವರ್ಷಗಳು ಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ತಿಳಿಸಿದ್ದಾರೆ.
ಕೊರೊನಾವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯಲು 17 ತಿಂಗಳು ಬೇಕಾಗುತ್ತಿದ್ದು, ಈ ಅವಧಿಯಲ್ಲಿ ಈಗಾಗಲೇ 6 ತಿಂಗಳು ಕಳೆದು ಹೋಗಿವೆ. ಭಾರತದಲ್ಲೇ ವಿವಿಧ ಕಂಪನಿಗಳಿಗೆ ಸೇರಿದ ಎಂಟು ಲಸಿಕೆಗಳು ಅಭಿವೃದ್ಧಿ ಹಂತದಲ್ಲಿವೆ ಎಂದರು.
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 26,47,664ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲೇ 57982 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಒಂದೇ ದಿನ ಮಹಾಮಾರಿಗೆ 941 ಜನರು ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆಯು 50,921ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 19,19,843 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 6,76,900 ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.
ವಿಶ್ವದ ಯಾವುದೇ ದೇಶದಲ್ಲಿ ಸಾಮಾನ್ಯವಾಗಿ ಒಂದು ಹೊಸ ಲಸಿಕೆಯನ್ನು ಅಭಿವೃದ್ಧಿಪಡಿಸುವುದಕ್ಕೆ ಕನಿಷ್ಠ 5 ರಿಂದ 10 ವರ್ಷಗಳ ಕಾಲಾವಧಿ ಬೇಕಾಗುತ್ತದೆ. ಆದರೆ ಕೊರೊನಾವೈರಸ್ ಸೋಂಕಿತನಂತಾ ಸಾಂಕ್ರಾಮಿಕ ಪಿಡುಗು ಎದುರಾದ ಸಂದರ್ಭಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿವಿಧ ಸಂಸ್ಥೆಗಳ ಜೊತೆಗೆ ಕೈಜೋಡಿಸುವ ಮೂಲಕ ಕ್ಷಿಪ್ರಗತಿಯಲ್ಲಿ ಲಸಿಕೆ ಅಭಿವೃದ್ಧಿಪಡಿಸಲು ಶ್ರಮಿಸಲಾಗುತ್ತಿದೆ. ಹೀಗಿದ್ದರೂ ಕೊರೊನಾವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯಲು ಕನಿಷ್ಠ ಒಂದೂವರೆ ವರ್ಷಗಳು ಬೇಕಾಗುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ತಿಳಿಸಿದರು.
ಕೊರೊನಾವೈರಸ್ ಸೋಂಕಿನಿಂದ ಪಾರಾಗುವುದಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯಕವಾಗಿದೆ. ಮಾಸ್ಕ್ ಧರಿಸದೇ ಸಾರ್ವಜನಿಕರ ಪ್ರದೇಶಗಳಲ್ಲಿ ಸಂಚರಿಸುವುದು ಸೂಕ್ತವಲ್ಲ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದರಿಂದ ಸೋಂಕು ತಗಲುವಿಕೆ ಪ್ರಮಾಣವನ್ನು ತಗ್ಗಿಸಲು ಸಾಧ್ಯವಾಗುತ್ತದೆ ಎಂದು ಡಾ.ಸೌಮ್ಯ ಸ್ವಾಮಿನಾಥನ್ ಸಲಹೆ ನೀಡಿದ್ದಾರೆ.