1984ರಿಂದ ಚೂರಿ ಇರಿತದವರೆಗೆ : ಕರ್ನಾಟಕ ಲೋಕಾಯುಕ್ತ ಸಾಗಿ ಬಂದ ಹಾದಿ..
ಇಡೀ ದೇಶದಲ್ಲಿಯೇ ಭ್ರಷ್ಟಾಚಾರ ನಿಯಂತ್ರಣದ ವಿಚಾರಕ್ಕೆ ಬಂದರೆ ಒಂದು ಕಾಲದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ದೊಡ್ಡ ಮಟ್ಟದ ಹೆಸರು ಮಾಡಿತ್ತು. ಭ್ರಷ್ಟ ರಾಜಕಾರಣಿಗಳು, ಕೆಲವು ಅಧಿಕಾರಿಗಳು ಹಾಗೂ ಹಣವಂತ ಕುಳಗಳ ಅಪವಿತ್ರ ಮೈತ್ರಿಗೆ ಸಿಂಹಸ್ವಪ್ನವಾಗಿ ಕಾಡಿತ್ತು. ಈ ಮೂಲಕ ದೇಶದ ಇತರೆ ರಾಜ್ಯಗಳಿಗೂ ಮಾದರಿ ಎನಿಸಿತ್ತು. ಕೇವಲ ಆರು ವರ್ಷಗಳ ಹಿಂದೆ ಲೋಕಾಯುಕ್ತರು ನೀಡಿದ ಎರಡು ಗಣಿ ವರದಿಗಳು ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರವನ್ನು ಮತ್ತೊಂದು ಭಾರಿ ಅಯ್ಕೆಯಾಗದಂತೆ ತಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಅಂದು ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಹಾಗೂ ಸ್ವತಃ ಸಿದ್ದರಾಮಯ್ಯ ಲೋಕಾಯುಕ್ತರ ವರದಿಯನ್ನು ಬಳಸಿಕೊಂಡು ಆಡಳಿತ ಪಕ್ಷದ ವಿರುದ್ಧ ಅಕ್ಷರಶಃ ತೊಡೆತಟ್ಟಿದ್ದರು. ಅಧಿಕಾರಕ್ಕೆ ಬಂದ ಮೇಲೆ ಅದರ ಹಲ್ಲು ಕಿತ್ತು ಹಾಕಿತ್ತು. ಎಸಿಬಿ ರಚನೆಯ ಮೂಲಕ ರಾಜ್ಯದ ಭ್ರಷ್ಟಾಚಾರ ವಿರೋಧಿ ಹೋರಾಟದ ದಿಕ್ಕು ದೆಸೆಯನ್ನೇ ಬದಲಿಸಿತ್ತು. ಬುಧವಾರ ಇದೇ ಕಟ್ಟಡದಲ್ಲಿ ಲೋಕಾಯುಕ್ತರು ಚೂರಿ ಇರಿತಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಾಯುಕ್ತ ನಡೆದು ಬಂದ ಹಾದಿಯನ್ನು ಇಲ್ಲಿ ಕಟ್ಟಿ ಕೊಡುವ ಪ್ರಯತ್ನ ಮಾಡಲಾಗಿದೆ.
ಸಂಸ್ಥೆಯ ಹುಟ್ಟು:
ಕರ್ನಾಟಕದ ಲೋಕಾಯುಕ್ತ ಸಂಸ್ಥೆಯ ರೂವಾರಿ ಎಂದರೆ ರಾಜ್ಯದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಸ್ಥಾಪನೆಯಾಗಿದ್ದು 1984ರಲ್ಲಿ. ಇದಕ್ಕಿಂತಲೂ ಹಿಂದೆ ಅಂದರೆ 1966ರಲ್ಲಿಯೇ ‘ಆಡಳಿತಾತ್ಮಕ ಸುಧಾರಣಾ ಆಯೋಗ’ದ ವರದಿ ಲೋಕಾಯುಕ್ತ ಸಂಸ್ಥೆ ಸ್ಥಾಪಿಸಲು ಶಿಫಾರಸು ಮಾಡಿತ್ತು. ಆದ್ದರಿಂದ ಮಹಾರಾಷ್ಟ್ರವು 1971ರಲ್ಲಿ ಲೋಕಾಯುಕ್ತ ಸಂಸ್ಥೆ ಸ್ಥಾಪಿಸಿತು.
1983ರಲ್ಲಿ ತಾವು ನೀಡಿದ್ದ ಚುನಾವಣಾ ಪೂರ್ವ ಭರವಸೆಯಂತೆ ಕರ್ನಾಟಕದ ಅಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ರಾಮಕೃಷ್ಣ ಹೆಗಡೆ ವಿಧಾನಸಭೆಯಲ್ಲಿ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತ ಬಿಲ್ ಪರಿಚಯಿಸಿದರು. ಇದರ ಪ್ರತಿಫಲವಾಗಿ 1984ರಲ್ಲಿ ಕರ್ನಾಟಕ ಲೋಕಾಯುಕ್ತ ಕಾಯಿದೆಯೂ ಜಾರಿಗೆ ಬಂದು; ಲೋಕಾಯುಕ್ತ ಸಂಸ್ಥೆ ಜನ್ಮ ತಾಳಿತು.
ಸರಕಾರದಲ್ಲಿ ಭ್ರಷ್ಟಾಚಾರದ ಕುರಿತು ಸ್ವತಂತ್ರ ತನಿಖೆ ನಡೆಸಲು ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಸಂಬಂಧಿಸಿದ ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲು ಇದನ್ನು ಸ್ಥಾಪಿಸಲಾಯಿತು. ಈ ಮೂಲಕ ಸಾರ್ವಜನಿಕ ಜೀವನದಲ್ಲಿರುವ, ವಿಶೇಷವಾಗಿ ಸರಕಾರದಿಂದ ಸಂಬಳ, ಭತ್ಯೆ ಪಡೆಯುವವರ ವಿರುದ್ಧ ಭ್ರಷ್ಟಾಚಾರ ಕಾಯ್ದೆ ಅಡಿಯಲ್ಲಿ ದೂರುಗಳನ್ನು ದಾಖಲಿಸಲು ಅವಕಾಶ ಮಾಡಿಕೊಡಲಾಯಿತು.
ಲೋಕಾಯುಕ್ತರ ನೇಮಕ:
1984ರ ಕರ್ನಾಟಕ ಲೋಕಾಯುಕ್ತ ಖಾಯಿದೆ ಪ್ರಕಾರ, ಯಾರು ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯಾದೀಶರಾಗಿ ಸೇವೆ ಸಲ್ಲಿಸಿರುತ್ತಾರೋ ಅಥವಾ ರಾಜ್ಯದ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರುತ್ತಾರೆಯೋ ಅವರನ್ನು ‘ಲೋಕಾಯುಕ್ತ’ ಎಂದು ನೇಮಕ ಮಾಡಬೇಕು ಎಂದು ಹೇಳಲಾಯಿತು. ಆದರೆ 2015ರಲ್ಲಿ ಈ ಕಾಯಿದೆಯಲ್ಲಿ ಸ್ವಲ್ಪ ತಿದ್ದುಪಡಿ ತಂದರು. ಈ ತಿದ್ದುಪಡಿಯ ಪ್ರಕಾರ, 10 ವರ್ಷಗಳ ತನಕ ಯಾರು ಹೈಕೋರ್ಟ್ ನ್ಯಾಯಾದೀಶರಾಗಿ ಸೇವೆ ಸಲ್ಲಿಸಿರುತ್ತಾರೋ ಅವರನ್ನು
‘ಲೋಕಾಯುಕ್ತ’ರನ್ನಾಗಿ ಹಾಗೂ 5 ವರ್ಷಗಳ ಕಾಲ ಹೈಕೋರ್ಟ್ ನ್ಯಾಯಾದೀಶರಾಗಿ ಸೇವೆ ಸಲ್ಲಿಸಿದವರನ್ನು ‘ಉಪ ಲೋಕಾಯುಕ್ತ’ರಾಗಿ ನೇಮಿಸಬಹುದು ಎಂದು ಮಾನದಂಡಗಳನ್ನು ಬದಲಿಸಲಾಯಿತು.
ಲೋಕಾಯುಕ್ತರನ್ನು ಅಧಿಕೃತವಾಗಿ ನೇಮಕ ಮಾಡುವ ಅಧಿಕಾರ ರಾಜ್ಯಪಾಲರಿಗಿತ್ತು. ಆದರೆ ಅವರು ರಾಜ್ಯದ ಮುಖ್ಯಮಂತ್ರಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಶಾಸಕಾಂಗದ ಸಭಾಪತಿ, ಸ್ಪೀಕರ್, ಪ್ರತಿ ಪಕ್ಷದ ನಾಯಕ ಇವರೆಲ್ಲರೊಂದಿಗೆ ಸಮಾಲೋಚಿಸಿ ಈ ಕೆಲಸ ಮಾಡಬೇಕಾಗಿತ್ತು.
ಹುದ್ದೆ ನಿಭಾಯಿಸಿದವರು:
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಎ. ಡಿ. ಕೋಶಲ್ ಮೊದಲ ಲೋಕಾಯುಕ್ತರಾಗಿ ನೇಮಕಗೊಂಡರು. ಇವರು 1986ರ ಜನವರಿ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡರು. ನಂತರ 2001ರ ಜೂನ್ನಲ್ಲಿ ನ್ಯಾಯಮೂರ್ತಿ ಎನ್. ವೆಂಕಟಾಚಲಯ್ಯ ಲೋಕಾಯುಕ್ತರಾಗಿ ನೇಮಕಗೊಂಡರು. ಈ ಸಂದರ್ಭದಲ್ಲಿ ಅವರು ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾದರು. ಇಡೀ ದೇಶವೇ ಕರ್ನಾಟಕದ ಲೋಕಾಯುಕ್ತ ಸಂಸ್ಥೆಯ ಕಡೆಗೆ ತಿರುಗಿ ನೋಡುವಂತೆ ಅವರ ಹುದ್ದೆಯನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಿದರು. ಈ ಮೂಲಕ ಲೋಕಾಯುಕ್ತ ವೆಂಕಟಾಚಲಯ್ಯ ಎಂದು ರಾಜ್ಯದ ಮನೆಮಾತಾದರು. ಜತೆಗೆ ಲೋಕಾಯುಕ್ತವನ್ನೂ ಮನೆಮಾತಾಗಿಸಿದರು.
ಇವರ ಅಧಿಕಾರವಧಿಯ ನಂತರ 2006 ಆಗಸ್ಟ್ ತಿಂಗಳಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಇಷ್ಟೊತ್ತಿಗಾಗಲೇ ಲೋಕಾಯುಕ್ತರು ಎಂದರೆ ಹೀಗಿರಬೇಕು ಎಂಬ ಹೋಲಿಕೆ ಆರಂಭವಾಗಿತ್ತು. ಆಗ ಸಂತೋಷ್ ಹೆಗಡೆ, ತಾವು ಹಿಂದಿನ ಲೋಕಾಯುಕ್ತರಂತೆ ಆಸ್ಪತ್ರೆಗಳಿಗೆ ಭೇಟಿ ನೀಡುವುದಿಲ್ಲ ಎನ್ನುವ ಮೂಲಕ ವಿವಾದಕ್ಕೆ ಆಹಾರವಾದರು.
2010ರ ಜೂನ್ 23ರಂದು ಲೋಕಾಯುಕ್ತ ಸ್ಥಾನಕ್ಕೆ ಅವರು ರಾಜೀನಾಮೆ ನೀಡಲು ಯತ್ನಿಸಿದಾಗ ಬಿಜೆಪಿಯ ನಾಯಕ ಎಲ್.ಕೆ.ಅಡ್ವಾನಿ ಮನವೊಲಿಸಬೇಕಾಗಿ ಬಂತು. ಪರಿಣಾಮ ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಂಡ ಹೆಗ್ಡೆ, ಹುದ್ದೆಯಲ್ಲಿ ಮುಂದುವರಿಯಲು ಒಪ್ಪಿದರು. ಇವುಗಳ ನಡುವೆಯೇ, ಬಳ್ಳಾರಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಂತೋಷ ಹೆಗ್ಡೆ ನೀಡಿದ ತನಿಖಾ ವರದಿಗಳು ರಾಜ್ಯದ ರಾಜಕಾರಣವನ್ನೇ ಅಲ್ಲೋಲ ಕಲ್ಲೋಲ ಮಾಡಿದವು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಇದರಿಂದ ರಾಜೀನಾಮೆ ನೀಡಿ, ಜೈಲಿಗೆ ಹೋಗಬೇಕಾಯಿತು. ಅಲ್ಲದೇ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಮಾಡಿದ್ದ ಬಳ್ಳಾರಿಯ ಗಣಿ ದೊರೆ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಮತ್ತು ಸೋಮಶೇಖರ ರೆಡ್ಡಿಯವರ ರಾಜಕೀಯ ಜೀವನವನ್ನೇ ಇದು ನುಂಗಿ ಹಾಕಿತು. ಈ ಸಮಯದಲ್ಲಿ ಯು. ವಿ. ಸಿಂಗ್, ಮಧುಕರ್ ಶೆಟ್ಟಿ ತರಹದ ಪ್ರಾಮಾಣಿಕ ಅಧಿಕಾರಿಗಳೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯೊಂದರ ಘಟನೆ ಹೆಚ್ಚಲು ಕಾರಣರಾದರು.
ಈ ಹತ್ತು ವರ್ಷಗಳನ್ನು ನಾವು ಲೋಕಾಯುಕ್ತ ಸಂಸ್ಥೆಯ ‘ಸುವರ್ಣ ಯುಗ ಎಂದೇ ಕರೆಯಬಹುದು. ಅತ್ಯಂತ ಪ್ರಾಮಾಣಿಕವಾಗಿ ಕ್ರಿಯಾಶೀಲತೆಯಿಂದ ಜವಾಬ್ದಾರಿ ನಿಭಾಯಿಸಿದ ವೆಂಕಟಾಚಲ ಹಾಗೂ ಸಂತೋಷ ಹೆಗ್ಡೆ ಇಬ್ಬರೂ ಮನೆಮಾತಾಗಿ ದೇಶದ ಗಮನ ಸೆಳೆದರು. ಇದೊಂದು ಮಾದರಿ ಲೋಕಾಯುಕ್ತ ಸಂಸ್ಥೆ ಎಂಬ ಹೆಗ್ಗಳಿಕೆಯು ಕರ್ನಾಟಕ ರಾಜ್ಯದ ಪಾಲಾಯಿತು. ಭ್ರಷ್ಟ ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಬಹಿರಂಗ ಸಮರ ಸಾರಿ ಲೋಕಾಯುಕ್ತ ಸಂಸ್ಥೆಯ ಶಕ್ತಿಯನ್ನು ದೇಶಕ್ಕೆ
ತೋರಿಸಿದರು. ಆದರೆ ಇವರ ನಂತರ ಬಂದಂತ ಲೋಕಾಯುಕ್ತರು ಈ ಹುದ್ದೆಯನ್ನು ಅಷ್ಟೊಂದು ಪರಿಣಾಮಕಾರಿಯಾಗಿ ನಿರ್ವಹಿಸಲಿಲ್ಲ ಎಂಬುದು ಬೇರೆ ಮಾತು.
ಅಖಾಡದಿಂದ ಆಸ್ಪತ್ರೆಗೆ:
ಇಷ್ಟೆಲ್ಲಾ ಮೈಲುಗಲ್ಲುಗಳನ್ನು ಸ್ಥಾಪಿಸಿದ ಸಂಸ್ಥೆಯೊಂದು ನಿಧಾನವಾಗಿ ತನ್ನ ಶಾರ್ಪ್ನೆಸ್ ಕಳೆದುಕೊಳ್ಳಲು ಆರಂಭಿಸಿದ್ದು ನಂತರದ ದಿನಗಳಲ್ಲಿ. ಅಂದಿನ ಬಿಜೆಪಿ ಸರಕಾರದ ಸಮುಯದಲ್ಲಿಯೇ, 2011ರ ಆಗಸ್ಟ್ನಲ್ಲಿ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಆದರೆ ಬೆಂಗಳೂರಿನಲ್ಲಿ ಅವರಿರುವ ಮನೆ ಖರೀದಿಯ ಬಗ್ಗೆ ಗಂಬೀರ ಆರೋಪ ಕೇಳಿಬಂದು ಇದರಿಂದ ಮನನೊಂದ ಅವರು ಸ್ವತಃ ರಾಜೀನಾಮೆ ನೀಡಬೇಕಾಯಿತು. ಇದಾದ ನಂತರ ಎರಡು ವರ್ಷಗಳ ಕಾಲ ಲೋಕಾಯುಕ್ತ ಹುದ್ದೆಗೆ ಸೂಕ್ತ ಅಬ್ಯರ್ಥಿ ಇಲ್ಲ ಎಂದು ಬಿಜೆಪಿ ನೆವ ಹೇಳುತ್ತಲೇ ಬಂತು. 2 ವರ್ಷಗಳ ನಂತರ 2013ರ ಫೆಬ್ರುವರಿ 14ರಂದು ಲೋಕಾಯುಕ್ತರಾಗಿ ನ್ಯಾ. ಭಾಸ್ಕರ್ ರಾವ್ ಅಧಿಕಾರ ಸ್ವೀಕರಿಸಿದರು.
2015ರ ಮೇ ತಿಂಗಳಿನಲ್ಲಿ ನ್ಯಾ. ಭಾಸ್ಕರ್ ರಾವ್ ಪುತ್ರ ಹಾಗೂ ಆತನ ಸಹಚರರು ಲೋಕಾಯುಕ್ತ ಹೆಸರನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣ ಹೊರಬಿತ್ತು. ಆಗ ಲೋಕಾಯುಕ್ತ ಸಂಸ್ಥೆ ಭಾರೀ ವಿವಾದಕ್ಕೆ ಸಿಲುಕಿತು. ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ಬರುವ ದೂರುಗಳನ್ನು ಮುಚ್ಚಿ ಹಾಕಲು ಹಣ ವಸೂಲಿ ಮಾಡಲಾಗುತ್ತಿತ್ತು ಎನ್ನುವುದು ಸಂಸ್ಥೆಯ ಪ್ರಮುಖರ ವಿರುದ್ಧ ಆರೋಪ ಕೇಳಿ ಬಂದಿತ್ತು. ಅದರಲ್ಲಿ ಖುದ್ದು ಲೋಕಾಯುಕ್ತರೇ ಆರೋಪದ ಕೇಂದ್ರ ಬಿಂದುವಾಗಿದ್ದರು. ಅವರ ಮನೆಯಲ್ಲಿಯೇ ಕೆಲವರು ಹಣ ವಸೂಲಿಗೆ ಪ್ರಯತ್ನಿಸಿದ್ದರು, ಅವರ ಪುತ್ರ ಇದರಲ್ಲಿ ಶಾಮೀಲಾಗಿದ್ದರೆನ್ನುವ ಗಂಭೀರ ಆಪಾದನೆಯಿಂದ ಅವರು ರಾಜೀನಾಮೆ ನೀಡಬೇಕಾಯಿತು. ಹೀಗೆ ದುರ್ಬಲತೆಯ ಹಾದಿಯತ್ತ ಲೋಕಾಯುತ್ತ ಸಾಗಿತು.
ನಂತರ ಮತ್ತೆ ಎರಡು ವರ್ಷಗಳ ಕಾಲ ಲೋಕಾಯುಕ್ತ ಹುದ್ದೆಯನ್ನು ಖಾಲಿ ಉಳಿಸಲಾಯಿತು. ಈ ಸಂದರ್ಭದಲ್ಲಿ ಮೊದಲೇ ಅಂತರಾಳದಲ್ಲಿ ನೈತಿಕವಾಗಿ ಕುಸಿಯುತ್ತಿದ್ದ ಸಂಸ್ಥೆ, ಹೆಚ್ಚು ಕಡಿಮೆ ಮುಗಿದೇ ಹೋಯಿತು ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ ಕೊನೆಗೆ 2017ರ ಜನವರಿಯಲ್ಲಿ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ಲೋಕಾಯುಕ್ತರಾಗಿ ನೇಮಕಗೊಂಡರು. ಆವತ್ತು “ಲೋಕಾಯುಕ್ತದ ಮೇಲೆ ಜನ ಇಟ್ಟಿರುವ ವಿಶ್ವಾಸವನ್ನು ಉಳಿಸುವ ಜತೆಗೆ ಸಂಸ್ಥೆಯನ್ನು ಬಲವರ್ಧನೆ ಮಾಡಿ, ಆಡಳಿತದಲ್ಲಿ ಪಾರದರ್ಶಕತೆ ಮೂಡಿಸುವುದು ನನ್ನ ಆದ್ಯತೆಯಾಗಿದೆ. ಅಗತ್ಯ ಬಿದ್ದರೆ ಸರಕಾರದಿಂದ ಹೆಚ್ಚಿನ ಅಧಿಕಾರ ಕೋರುತ್ತೇನೆ,” ಅವರು ಹೇಳಿದ್ದರು. ಇಂದಿನವರೆಗೂ ಅವರೇ ಲೋಕಾಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಲೋಕಾಯುಕ್ತರಿಗೆ ಕಚೇರಿಯಲ್ಲಿಯೇ ಚೂರಿ ಇರಿತದ ಪ್ರಕರಣ ಈಗಾಗಲೇ ಸುದ್ದಿಕೇಂದ್ರದಲ್ಲಿದೆ. ಮಾಧ್ಯಮಗಳ ನೇರ ಪ್ರಸಾರದಲ್ಲಿ, ತಾವೇ ಆರೋಪಿಯನ್ನು ಎದುರಿಗೆ ಕೂರಿಸಿಕೊಂಡು ತನಿಖೆ ನಡೆಸುತ್ತಿರುವವರ ಹಾಗೆ ಮಾಹಿತಿ ಹೊರಬೀಳುತ್ತಿದೆ. ಘಟನೆ ನಡೆದಿದ್ದು ಹೇಗೆ? ಎಂಬುದು ಚರ್ಚೆಯ ವಸ್ತುವಾಗಿ ಹೋಗಿದೆ. 2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸುವ ಮೂಲಕ ಲೋಕಾಯುಕ್ತದ ಹಲ್ಲು ಕೀಳುವ ಪ್ರಯತ್ನ ಮಾಡಿದರು. ಭ್ರಷ್ಟಾಚಾರ ಖಾಯ್ದೆ 1988ರ ಪ್ರಕಾರ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಪ್ರಭಾವಿಗಳನ್ನೂ ಸ್ವತಂತ್ರವಾಗಿ ತನಿಖೆ ಮಾಡುವ ಅಧಿಕಾರ ಲೋಕಾಯುಕ್ತರಿಗಿತ್ತು. ಆದರೆ ಎಸಿಬಿ ಸಂಸ್ಥೆ ರಚಿಸುವ ಮೂಲಕ ಅದನ್ನು ಕಸಿದುಕೊಂಡರು.
ರಾಜಕೀಯ ದೊಂಬರಾಟಗಳ ಆಚೆಗೆ, ಲೋಕಾಯುಕ್ತದಂತಹ ಸಂಸ್ಥೆಯನ್ನು ಕನ್ನಡಿಗರು ಉಳಿಸಿಕೊಳ್ಳಬೇಕಿದೆ.