ಅಲ್ಲಿ ಮಹೇಶ್ ಬಾಬು; ಇಲ್ಲಿ ಶಿವರಾಜ್ ಕುಮಾರ್..!
ಮಹೇಶ್ ಬಾಬು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್. ಮಹೇಶ್ ಬಾಬು ಅಭಿನಯದ ಮಹರ್ಷಿ ಚಿತ್ರ ಕಳೆದ ವಾರವಷ್ಟೇ ಬಿಡುಗಡೆ ಆಗಿದೆ. ಈ ಸಿನಿಮಾ ತೆಲುಗು ರಾಜ್ಯಗಳಾಚೆಗೂ ಸದ್ದು ಮಾಡುತ್ತಿದೆ. ಮಹರ್ಷಿ ಸಿನಿಮಾದಲ್ಲಿ ‘ವೀಕೆಂಡ್ ಫಾರ್ಮಿಂಗ್' ಅನ್ನೋ ಪರಿಕಲ್ಪನೆಗೆ ಜನರು ಫೀದಾ ಆಗಿದ್ದಾರೆ.
ಹೌದು, ವಾರದ ಕೊನೆಯಲ್ಲಿ ಪಾರ್ಟಿ, ಪಬ್ ಅಂತ ಸುತ್ತುವ ಬದಲು ವ್ಯವಸಾಯ ಮಾಡಿ, ಶಾಲೆಯಲ್ಲಿ ಕೃಷಿ ಬಗ್ಗೆಯೇ ಒಂದು ವಿಷಯ ಹೇಳಿಕೊಡಿ ಅನ್ನೋ ಸಂದೇಶಈ ಚಿತ್ರದಲ್ಲಿದೆ. ಇದು ನಿಜಕ್ಕೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಮಹೇಶ್ ಬಾಬು ವಿಶೇಷ ಏನಂದ್ರೆ, ಅವರು ಜನಸಾಮಾನ್ಯರ, ಹಳ್ಳಿಗಳ ಅಭಿವೃದ್ದಿ ಬಗ್ಗೆ ವಿಶೇಷ ಕಾಳಜಿ ವಹಿಸುವ ಚಿತ್ರಕಥೆಗಳನ್ನೇ ಹೆಚ್ಚಾಗಿ ಆಯ್ದುಕೊಳ್ಳುತ್ತಾರೆ.
ಈ ಮಹರ್ಷಿ ಚಿತ್ರದ ಕಥೆಯ ಪರಿಕಲ್ಪನೆಯಲ್ಲಿಯೇ ಕನ್ನಡದಲ್ಲಿಯೂ ಈ ಹಿಂದೆಯೇ ಒಂದು ಚಿತ್ರ ತೆರೆ ಕಂಡಿತ್ತು. ಅದರ ಹೆಸರು ಬಂಗಾರ ಸನ್ ಆಫ್ ಬಂಗಾರದ ಮನುಷ್ಯ. ಹೌದು, ರೈತರ ಬಗ್ಗೆ, ರೈತರ ಸಮಸ್ಯೆಗಳಿಗೆ ನೀಡುವ ಪರಿಹಾರ ಮಾರ್ಗದ ಬಗ್ಗೆ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸಿದ್ದರು. ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ನಾಯಕನಟನಾಗಿ ಮಿಂಚಿದ್ದರು.
ಚಿತ್ರದ ಸಂಕ್ಷಿಪ್ತ ಕತೆ ಅಂದರೆ, ರೈತರ ಜಮೀನಿನ ಮೇಲೆ ಕಾರ್ಪೋರೇಟ್ ಕಣ್ಣು ಬೀಳುತ್ತದೆ. ರೈತರ ಜಮೀನು ವಶಪಡಿಸಿಕೊಂಡು ಕಾರ್ಪೊರೇಟ್ ಕಂಪನಿಗಳು ತಮ್ಮ ಪ್ರಾಜೆಕ್ಟ್ ಮಾಡೋಕೆ ಮುಂದಾಗುತ್ತವೆ. ಈ ಅನ್ಯಾಯದ ವಿರುದ್ಧ ನಾಯಕ ಹೋರಾಡುತ್ತಾನೆ. ಇದೇ ಚಿತ್ರದ ಎಳೆಯನ್ನು ಎರಡೂ ಚಿತ್ರಗಳಲ್ಲಿಯೂ ಅಂದರೆ, ಮಹರ್ಷಿ ಮತ್ತು ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರಗಳಲ್ಲಿ ನೀವು ಕಾಣಬಹುದು.