ಅಮ್ಮನ ಮನೆ ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದವರು ರಾಘವೇಂದ್ರ ರಾಜಕುಮಾರ್. ಇಲ್ಲಿ ವಿಶೇಷ ಏನಪ್ಪ ಅಂದರೆ, ರಾಘಣ್ಣ ಅವರು ಬಾಲಿವುಡ್ ನಟ ಜಾನ್ ಅಬ್ರಾಹಂ ಹಾಗೂ ಅನಿಲ್ ಕಪೂರ್ ಅವರನ್ನು ಭೇಟಿ ಮಾಡಿದ್ದಾರೆ. ಹೀಗಾಗಿ ರಾಘಣ್ಣ ಅವರು ಬಾಲಿವುಡ್ ನತ್ತ ಚಿತ್ತ ನೆಟ್ಟಿದ್ದಾರೆಯೋ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಕಾಣಿಸಿತ್ತು.
ಆದರೆ ಇದೀಗ ಅದಕ್ಕೆಲ್ಲ ರಾಘಣ್ಣನೇ ಉತ್ತರಿಸಿದ್ದಾರೆ. ಹೌದು, ರಾಘಣ್ಣ ದ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಇದು ನಡೆಯುತ್ತಿರೋದು
ಹೈದರಾಬಾದ್ ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ. ಈ ಸಿನಿಮಾ ಶೂಟಿಂಗ್ ಪಕ್ಕದಲ್ಲೇ ಜಾನ್ ಅಬ್ರಾಹಂ ಹಾಗೂ ಅನಿಲ್ ಕಪೂರ್ ಅವರ ಸಿನಿಮಾ ಚಿತ್ರೀಕರಣವೂ ನಡೆಯುತ್ತಿದೆ.
ಬಿಡುವಿನ ವೇಳೆಯಲ್ಲಿ ರಾಘಣ್ಣ ಅವರು ಜಿಮ್ಗೆ ಹೋಗಿದ್ದಾಗ, ಜಾನ್ ಅಬ್ರಾಹಂ ಹಾಗೂ ಅನಿಲ್ ಕಪೂರ್ ಸಹ ಅದೇ ಜಿಮ್ ನಲ್ಲಿದ್ದರು. ಹೀಗಾಗಿ ಔಪಚಾರಿಕವಾಗಿ ಒಂದು ಭೇಟಿ ನಡೆದಿದೆ, ಉಭಯ ಕುಶಲೋಪಹರಿ ನಡೆಸಿದ್ದಾರೆ. ಆ ಕ್ಷಣವನ್ನು ನನಗೆ ಎಂದಿಗೂ ಮರೆಯೋಕೆ ಸಾಧ್ಯವಿಲ್ಲ ಎಂದು ರಾಘಣ್ಣ ಹೇಳಿದ್ದಾರೆ.