ಸ್ಯಾಂಡಲ್ ವುಡ್’ನಲ್ಲಿ ಹೊಸ ಇತಿಹಾಸ ಬರೆಯುತ್ತಿರುವ ಕುರುಕ್ಷೇತ್ರ
ಸ್ಯಾಂಡಲ್ ವುಡ್ ಇದೇ ಮೊದಲ ಬಾರಿಗೆ ನೂರು ಕೋಟಿ ಬಜೆಟ್ ಸಿನೆಮಾ ಒಂದಕ್ಕೆ ಸಾಕ್ಷಿಯಾಗುತ್ತಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಸಲ ನೂರು ಕೋಟಿ ರೂ. ಮೀರಿದ ಚಲನಚಿತ್ರವೊಂದು ನಿರ್ಮಾಣವಾಗುತ್ತಿದೆ.
ರಾಕ್ ಲೈನ್ ವೆಂಕಟೇಶ್ ಬ್ಯಾನರ್ ಅಡಿಯಲ್ಲಿ ಮುನಿರತ್ನ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮಹಾಭಾರತದಲ್ಲಿ ಬರುವ ‘ಕುರುಕ್ಷೇತ್ರ’ ಯುದ್ಧವೇ ಈ ನೂರು ಕೋಟಿ ಬಜೆಟ್ ಸಿನೆಮಾದ ಕಥಾವಸ್ತು.
ರನ್ನನ ಗದಾಯುದ್ಧವನ್ನು ಆಧರಿಸಿ ಚಿತ್ರಕಥೆ ಹೆಣೆಯಲಾಗಿದ್ದು, ದುರ್ಯೋಧನ ಇದರ ನಾಯಕನಾಗಿದ್ದಾನೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಅನ್ನುವ ಕಾರಣಕ್ಕೂ ‘ಕುರುಕ್ಷೇತ್ರ’ ಮಹತ್ವ ಪಡೆದಿದೆ.
ಲೋಕಸಭಾ ಚುನಾವಣೆ, ಹಿಂದಿ ಭಾಷೆಯಲ್ಲಿ ರಿಲೀಸ್ ಮಾಡಲು ಪ್ರಮಾಣ ಪತ್ರ ದೊರೆಯುವಲ್ಲಿ ವಿಳಂಬ ಇವೇ ಮೊದಲಾದ ಕಾರಣಗಳಿಂದ ತೆರೆಗೆ ಬರಲು ವಿಳಂಬ ಕಂಡಿದ್ದ ‘ಕುರುಕ್ಷೇತ್ರ’, ಕೊನೆಗೂ ಅಗಸ್ಟ್ 9ರಂದು,
ವರಮಹಾಲಕ್ಷ್ಮಿ ಹಬ್ಬದ ದಿನ ರಿಲೀಸ್ ಆಗುತ್ತಿದೆ.
ಈಗಾಗಲೇ ಬಹುಭಾಷೆ, ಬಹುತಾರಾಗಣ ಮತ್ತು ಅದ್ದೂರಿ ಬಜೆಟ್ ಕಾರಣಕ್ಕಾಗಿ ಸುದ್ದಿಯಲ್ಲಿರುವ ‘ಕುರುಕ್ಷೇತ್ರ’ ಸಿನೆಮಾ ಕನ್ನಡ ಚಿತ್ರರಂಗದಲ್ಲಿ ಹೊಸತೊಂದು ಮೈಲಿಗಲ್ಲು ನೆಡಲಿದೆ.
2ಡಿ – 3ಡಿ ತಂತ್ರಜ್ಞಾನ, ಗ್ರಾಫಿಕ್ಸ್, ವೈಭವದ ಸೆಟ್’ಗಳು, ಮೇಕಿಂಗ್ ಮೊದಲಾದ ಕಾರಣಗಳಿಂದ ಚಿತ್ರರಸಿಕರನ್ನು ಕಾತರಿಸುವಂತೆ ಮಾಡಿರುವ ಈ ಸಿನೆಮಾ, ಗಳಿಕೆಯ ದೃಷ್ಟಿಯಿಂದಲೂ ಸ್ಯಾಂಡಲ್ ವುಡ್ ನಲ್ಲಿ
ಇತಿಹಾಸ ನಿರ್ಮಿಸುವ ನಿರೀಕ್ಷೆ ಇದೆ | ಚೇತನಾ ತೀರ್ಥಹಳ್ಳಿ
ಎರಡು ವರ್ಷ ಸುಮಾರಿನಿಂದ ಕನ್ನಡಿಗರು ಕಾತರಿಸಿ ಕಾಯುತ್ತಿರುವ ‘ಕುರುಕ್ಷೇತ್ರ’ ಕೊನೆಗೂ ಬಿಡುಗಡೆಯಾಗುತ್ತಿದೆ. ಆಗಸ್ಟ್ 9, ವರಮಹಾಲಕ್ಷ್ಮಿ ಹಬ್ಬದ ಶುಭ ದಿನದಂದು ಈ ಸಿನೆಮಾ ತೆರೆ ಕಾಣಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರ ಎನ್ನುವ ಹೆಗ್ಗಳಿಕೆಯ ಜೊತೆಗೆ, ಬಹುತಾರಾಗಣ, ಬಹುಭಾಷಾ ಚಲನಚಿತ್ರವೆಂಬ ಗರಿಮೆಯೂ ಇದಕ್ಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದಲ್ಲಿ ನೂರು ಕೋಟಿ ರೂ. ಬಜೆಟ್ ದಾಟಿದ ಸಿನೆಮಾ ಎನ್ನುವ ದಾಖಲೆಯನ್ನೂ ಇದು ಬರೆಯಲಿದೆ.
ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ’ಕ್ಕೆ ಕನ್ನಡದ ಯಶಸ್ವಿ ನಿರ್ದೇಶಕ ನಾಗಣ್ಣ ಆಕ್ಷನ್ – ಕಟ್ ಹೇಳಿದ್ದಾರೆ. ಈ ಚಿತ್ರ ರಾಕ್ ಲೈನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದೆ.
ಅಂದುಕೊಂಡಂತೆ ನಡೆದಿದ್ದರೆ ಜುಲೈ ತಿಂಗಳಲ್ಲೇ ಕುರುಕ್ಷೇತ್ರ ರಿಲೀಸ್ ಆಗಬೇಕಿತ್ತು. ಆದರೆ ಎಲ್ಲ ಭಾಷೆಗಳಲ್ಲೂ ಏಕಕಾಲಕ್ಕೆ ರಿಲೀಸ್ ಮಾಡಬೇಕೆನ್ನುವ ನಿರ್ಮಾಪಕರ ನಿರ್ಧಾರ ಕುರುಕ್ಷೇತ್ರ ತೆರೆಗೆ ಬರಲು ವಿಳಂಬವಾಯಿತು. ಅದೇನೇ ಇದ್ದರೂ, ‘ವರಮಹಾಲಕ್ಷ್ಮಿ’ ಹಬ್ಬದಂದು ಈ ಅದ್ದೂರಿ ಬಜೆಟ್ ಸಿನೆಮಾ ರಿಲೀಸ್ ಆಗುತ್ತಿರುವುದು ಚಿತ್ರರಸಿಕರ ಪಾಲಿಗೆ ಮರೆಯಲಾಗದ ಉಡುಗೊರೆ.
ಸ್ಯಾಂಡಲ್’ವುಡ್ ನಲ್ಲಿ ಇದೇ ಮೊದಲು !
ಕನ್ನಡದಲ್ಲಿ ಈವರೆಗೆ ಹದಿನೆಂಟರಿಂದ ಇಪ್ಪತ್ತು ಕೋಟಿ ಬಜೆಟ್ ಸಿನೆಮಾಗಳನ್ನೆ ದೊಡ್ಡ ಬಜೆಟ್ ಸಿನೆಮಾ ಎಂದು ಕರೆಯಲಾಗುತ್ತಿತ್ತು. ಕಳೆದ ವರ್ಷ ತೆರೆಕಂಡ ಬಹುಭಾಷಾ ಚಲನಚಿತ್ರ ಕೆಜಿಎಫ್, 60ರಿಂದ 80 ಕೋಟಿ ಬಜೆಟ್’ನಲ್ಲಿ ನಿರ್ಮಾಣಗೊಂಡು ಜನರ ಹುಬ್ಬೇರುವಂತೆ ಮಾಡಿತ್ತು. ಈಗ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸ್ಯಾಂಡಲ್’ವುಡ್ ನಲ್ಲೂ ನೂರು ಕೋಟಿ ಬಜೆಟ್ ಸಿನೆಮಾ ನಿರ್ಮಾಣ ಸಾಧ್ಯ ಎಂದು ಸಾಬೀತು ಮಾಡಿದೆ. ಕುರುಕ್ಷೇತ್ರ ಸಿನೆಮಾದೊಟ್ಟಿಗೇ ರಿಲೀಸ್ ಆಗಲಿರುವ ಸುದೀಪ್ ಅಭಿನಯದ ‘ಪೈಲ್ವಾನ್’ ಬಜೆಟ್ 50 ಕೋಟಿ ಮೀರಿಲ್ಲ. ಹೀಗಾಗಿ ಕುರುಕ್ಷೇತ್ರ ಎಲ್ಲ ರೀತಿಯಿಂದಲೂ ನಂಬರ್ ಒನ್ ಸ್ಥಾನದಲ್ಲಿ ನಿಲ್ಲಲಿದೆ.
ಟ್ರೇಲರ್ ಬಿಡುಗಡೆಯಾಗುವ ತನಕ ಕುರುಕ್ಷೇತ್ರ ಬಜೆಟ್ ಈವರೆಗಿನ ಸ್ಯಾಂಡಲ್’ವುಡ್ ದಾಖಲೆ ಮುರಿಯಲಿದೆ ಎಂದು ತಿಳಿದಿತ್ತೇ ಹೊರತು, ಅದು ನೂರು ಕೋಟಿ ಮುಟ್ಟಲಿದೆ ಎಂಬ ಅಂದಾಜಿರಲಿಲ್ಲ. ಚಿತ್ರರಸಿಕರ ಕುತೂಹಲ ತಣಿಸಲೆಂದೇ ಚಿತ್ರ ತಂಡ ಸಿನೆಮಾ ಟ್ರೇಲರ್’ನಲ್ಲಿ ಬಜೆಟ್ ನೂರು ಕೊಟಿ ಎಂದು ಮೊದಲ ಬಾರಿಗೆ ಬಹಿರಂಗಗೊಳಿಸಿದೆ. ಆದರೆ ಟ್ರೇಲರ್ ಮತ್ತು ಸ್ಟಿಲ್’ಗಳಲ್ಲಿ ಚಿತ್ರದ ಅದ್ದೂರಿತನ, ವೈಭವಗಳನ್ನು ಕಂಡವರು ಸಿನೆಮಾ ವೆಚ್ಚ ನೂರು ಕೋಟಿಯನ್ನೂ ಮೀರಿದೆಯೆಂದು ಅಂದಾಜಿಸುತ್ತಿದ್ದಾರೆ. ಈ ಊಹಾಪೋಹಕ್ಕೆ ಇಂಬು ಕೊಡುವಂತೆ ಗೂಗಲ್ ಕುರುಕ್ಷೇತ್ರದ ಬಜೆಟ್ ಅನ್ನು 150 ಕೋಟಿ ಎಂದು ತೋರಿಸುತ್ತಿದೆ.
ಅದೇನೇ ಇದ್ದರೂ ‘ಕುರುಕ್ಷೇತ್ರ’ ಸ್ಯಾಂಡಲ್’ವುಡ್ ಈವರೆಗೆ ಕಂಡುಕೇಳಿರದ ಶ್ರೀಮಂತಿಕೆಯನ್ನು ತೆರೆಯ ಮೇಲೆ ಕಾಣಿಸಿ ಹೊಸ ದಾಖಲೆಯಂತೂ ಬರೆಯಲಿದೆ.
ತಂತ್ರಜ್ಞಾನ, ಬಹುತಾರಾಗಣಕ್ಕೆ ಅಧಿಕ ವೆಚ್ಚ
'ಕುರುಕ್ಷೇತ್ರ' ಬಜೆಟ್ ನೂರು ಕೋಟಿ ಮೀರಲು ಕಾರಣಗಳಿವೆ. ಮುಖ್ಯವಾಗಿ ಇದು ಒಂದು ಪೌರಾಣಿಕ ಸಿನೆಮಾ. ಸೆಟ್ ಮತ್ತು ಕಾಸ್ಟ್ಯೂಮ್ ದೊಡ್ಡ ಪಾಲನ್ನು ಬೇಡುತ್ತವೆ. ಜೊತೆಗೆ ಇತರ ಭಾಷೆಗಳ ಖ್ಯಾತ ಕಲಾವಿದರು ಈ ಸಿನೆಮಾದಲ್ಲಿ ನಟಿಸುತ್ತಿದ್ದು, ಅವರ ಸಂಭಾವನೆಯ ಮೊತ್ತವೂ ಗಣನೀಯವಾಗಿಯೇ ಇದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ, ಕಲಾವಿದರ ಓಡಾಟದ ಖರ್ಚು, ನೂರಾರು ಸಂಖ್ಯೆಯ ಸಹ / ಕಿರಿಯ ಕಲಾವಿದರ ನಿರ್ವಹಣೆ ಕೂಡ ವೆಚ್ಚದ ಹೆಚ್ಚಳಕ್ಕೆ ಕಾರಣ. ಈ ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಫಿಕ್ಸ್, 2D ಮತ್ತು 3D ಎಫೆಕ್ಟ್ ತಂತ್ರಗಾರಿಕೆ ಸಿನೆಮಾದ ಬಜೆಟ್ ಹೆಚ್ಚಲು ಕಾರಣವಾಗಿವೆ.
ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ – ಈ ಐದೂ ಭಾಷೆಗಳ ಪೋಸ್ಟರ್, ಟ್ರೇಲರ್’ಗಳು, ಆಡಿಯೋ ರಿಲೀಸ್ ಸೇರಿದಂತೆ ಹಲವು ಬಗೆಯ ಪ್ರಚಾರಗಳಿಗೇ ಕೋಟ್ಯಂತರ ರುಪಾಯಿ ವ್ಯಯಿಸಿರುವ ಅಂದಾಜಿದೆ. ಆರಂಭದಲ್ಲಿ ‘ಕುರುಕ್ಷೇತ್ರ’ವನ್ನು ವಿದೇಶೀ ಭಾಷೆಗಳೂ ಸೇರಿದಂತೆ 15 ಭಾಷೆಗಳಲ್ಲಿ ಮಾಡುವ ಯೋಜನೆಯಿತ್ತು. ಅದರಂತೆ ನಡೆದಿದ್ದರೆ ಒಟ್ಟು ನಿರ್ಮಾಣ ವೆಚ್ಚ 200 ಕೋಟಿ ತಲುಪುತ್ತಿತ್ತು ಎಂದು ಹೇಳಲಾಗುತ್ತಿದೆ.
ಇನ್ನು ಈ ಸಿನೆಮಾದ ತಾರಾಗಣವೂ ಕಡಿಮೆಯದಲ್ಲ. ಮುನಿರತ್ನರ ‘ಕುರುಕ್ಷೇತ್ರ’ದಲ್ಲಿ ದುರ್ಯೋಧನನೇ ನಾಯಕ. ಈ ಪಾತ್ರ ನಿರ್ವಹಿಸಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್. ರವಿಚೇತನ್ ದುಶ್ಯಾಸನನಾಗಿ, ಆರ್ಮುಗ ರವಿಶಂಕರ್ ಶಕುನಿಯಾಗಿ, ಶಶಿಕುಮಾರ್ ಧರ್ಮರಾಯನಾಗಿ, ರವಿಚಂದ್ರನ್ ಕೃಷ್ಣನಾಗಿ, ಬಾಲಿವುಡ್’ನ ಡ್ಯಾನಿಶ್ ಅಖ್ತರ್ ಸೈಫ್
ಬಲಭೀಮನಾಗಿ, ಸೋನು ಸೂದ್ ಅರ್ಜುನನಾಗಿ, ಅರ್ಜುನ್ ಸರ್ಜಾ ಕರ್ಣನಾಗಿ, ನಿಖಿಲ್ ಕುಮಾರಸ್ವಾಮಿ ಅಭಿಮನ್ಯುವಾಗಿ, ಶ್ರೀನಿವಾಸ್ ಮೂರ್ತಿ ದ್ರೋಣನಾಗಿ, ಯಶಸ್ ಸೂರ್ಯ ಮತ್ತು ಚಂದನ್ ನಕುಲ - ಸಹದೇವರಾಗಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದ ದಿಗ್ಗಜ ದಿವಂಗತ ಅಂಬರೀಷ್ ‘ಕುರುಕ್ಷೇತ್ರ’ದ ಭೀಷ್ಮನಾಗಿ ನಟಿಸಿದ್ದು, ಅದರ ಡಬ್ಬಿಂಗ್ ಅನ್ನೂ ಮುಗಿಸಿದ್ದರು. ಈ ಸಿನೆಮಾ ಅಂಬರೀಷ್ ಅವರ ಕೊನೆಯ ಸಿನೆಮಾ ಎಂಬ ದಾಖಲೆಯನ್ನೂ ಹೊತ್ತಿದೆ.
ಅಂದಹಾಗೆ, ಕುರುಕ್ಷೇತ್ರದಲ್ಲಿ ನಟಿಸಿರುವ ನಾಯಕಿಯರೂ ಕಡಿಮೆಯೇನಿಲ್ಲ. ಸ್ನೇಹ ದ್ರೌಪದಿಯಾಗಿ, ಮೇಘನಾ ರಾಜ್ ಭಾನುಮತಿಯಾಗಿ, ಹರಿಪ್ರಿಯಾ ಮತ್ತು ಅದಿತಿ ಆರ್ಯ ಮಾಯಾ ಮತ್ತು ಉತ್ತರೆ ಪಾತ್ರಗಳಲ್ಲಿ ನಟಿಸಿದ್ದಾರೆ. ಕುಂತಿ ಪಾತ್ರದಲ್ಲಿ ಭಾರತಿ ವಿಷ್ಣುವರ್ಧನ್, ಗಾಂಧಾರಿಯಾಗಿ ಅನುಪಮಾ, ಸುಭದ್ರೆಯಾಗಿ ಪವಿತ್ರಾ ಲೋಕೇಶ್, ರುಕ್ಮಿಣಿಯಾಗಿ ಪ್ರಜ್ಞಾ ಜೈಸ್ವಾಲ್ ನಟಿಸಿದ್ದಾರೆ. ಈ ಎಲ್ಲರ ಪ್ರಸಾಧನ ಮತ್ತು ಸಂಭಾವನೆಗಳನ್ನು ಲೆಕ್ಕ ಹಾಕಿದರೆ, ಒಂದು ಸಾಮಾನ್ಯ ಬಜೆಟ್ ಸಿನೆಮಾವೇ ತಯಾರಾಗುತ್ತದೆ.
ಬಿಡುಗಡೆಗೆ ಮೊದಲೇ 20 ಕೋಟಿ ವಹಿವಾಟು!
ಕುರುಕ್ಷೇತ್ರ ಸಿನೆಮಾ ಅನೋನ್ಸ್ ಆದಾಗಿಂದಲೂ ಬಜೆಟ್ ಕುರಿತು ಒಂದಲ್ಲ ಒಂದು ರೀತಿ ಸದ್ದು ಮಾಡುತ್ತಲೇ ಇದೆ. ಖುದ್ದು ನಿರ್ಮಾಪಕ ಮುನಿರತ್ನ ಹೇಳಿಕೊಂಡಿರುವಂತೆ, ಬಿಡುಗಡೆಗೆ ಮೊದಲೇ 20 ಕೋಟಿ ರುಪಾಯಿ ವಹಿವಾಟು ನಡೆಸಿದೆ. ಅದು ಕೂಡ ಕೇವಲ ಟೀವಿ ರೈಟ್ಸ್‌ಹಾಗೂ ಆಡಿಯೋ ರೈಟ್ಸ್ ಮೂಲಕ!
ಹಿಂದಿ ಸ್ಯಾಟಿಲೈಟ್‌ಹಕ್ಕುಗಳನ್ನು 9.5 ಕೋಟಿಗೆ ಈಗಾಗಲೇ ಮಾರಲಾಗಿದೆ. ಕನ್ನಡದಲ್ಲಿ ಟೀವಿ ಹಕ್ಕುಗಳನ್ನು 9 ಕೋಟಿ ರುಪಾಯಿಗಳಿಗೆ ಕೊಡಲಾಗಿದೆ. ಲಹರಿ ಸಂಸ್ಥೆ ಆಡಿಯೋ ಹಕ್ಕುಗಳನ್ನು 1.5 ಕೋಟಿ ಕೊಟ್ಟು ತನ್ನದಾಗಿಸಿಕೊಂಡಿದೆ. ಹೀಗೆ ಬಿಡುಗಡೆಗೆ ಮುನ್ನವೇ ಕುರುಕ್ಷೇತ್ರ ಒಟ್ಟು 20 ಕೋಟಿ ಬ್ಯುಸಿನೆಸ್ ನಡೆಸಿದೆ.
ಕಾಂಟ್ರೊವರ್ಸಿಗೇನೂ ಕಡಿಮೆಯಿಲ್ಲ
ಇಷ್ಟೆಲ್ಲ ಹೆಚ್ಚುಗಾರಿಕೆ ಇರುವ ಕುರುಕ್ಷೇತ್ರ ಕಾಂಟ್ರೊವರ್ಸಿಯಲ್ಲೂ ಹಿಂದೆ ಬಿದ್ದಿಲ್ಲ. ಟ್ರೇಲರುಗಳಲ್ಲಿ ತಮ್ಮ ಡಿ ಬಾಸ್ ಅನ್ನು ಸರಿಯಾಗಿ ತೋರಿಸಿಲ್ಲ ಎಂದು ದರ್ಶನ್ ಅಭಿಮಾನಿಗಳು ಮುನಿಸಿಕೊಂಡಿದ್ದರು. ಜನತಾದಳ ಕಾರ್ಯಕರ್ತರು ಕುರುಕ್ಷೇತರ್ ಪ್ರಚಾರದ ಕಟೌಟ್ ಒಂದರಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ದೊಡ್ಡ ಗಾತ್ರದಲ್ಲಿ ಬಿಂಬಿಸಿದ್ದೂ ವಿವಾದ ಹುಟ್ಟುಹಾಕಿತ್ತು. ಇದು ಎಷ್ಟು ವಿಪರೀತಕ್ಕೆ ಹೋಯಿತೆಂದರೆ, ನಿಖಿಲ್ ಕುಮಾರಸ್ವಾಮಿ ಮುಂದಿನ ದಿನಗಳಲ್ಲಿ ಕುರುಕ್ಷೇತ್ರ ಪ್ರಚಾರದಿಂದ ದೂರವೇ ಉಳಿದರು.
ಇವುಗಳ ಜೊತೆಗೆ ಮೊದಲು ರಿಲೀಸ್ ಆದ ‘ಯಜಮಾನ’ ದರ್ಶನ್ ರ ಐವತ್ತನೇ ಚಿತ್ರವೋ, ಮೊದಲು ಅನೌನ್ಸ್ ಆದ ಕುರುಕ್ಷೇತ್ರ ಐವತ್ತನೇ ಚಿತ್ರವೋ ಅನ್ನುವುದೂ ಚರ್ಚೆಯ ವಿಷಯವಾಯಿತು.
ಈಗ ಕಿಚ್ಚ ಸುದೀಪ್ ಅವರ ಪೈಲ್ವಾನ್ ಕೂಡಾ ‘ಕುರುಕ್ಷೇತ್ರ’ ದಿನಾಂಕದಂದೇ ರಿಲೀಸ್ ಆಗಲಿದ್ದು, ಸ್ಯಾಂಡಲ್ ವುಡ್ ಸ್ಟಾರ್ ವಾರ್ ಗೆ ನಾಂದಿಯಾಗಬಹುದೆಂದು ಹೇಳಲಾಗುತ್ತಿದೆ.