ಮಾಸ್ ಡೈಲಾಗ್ಸ್, ಕನ್ನಡತನದ ಪರಿಯಿಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ರೊಮ್ಯಾಂಟಿಕ್ ಆ್ಯಕ್ಷನ್ ಸಿನಿಮಾ ಗೀತಾ ಮೊದಲ ವಾರವೇ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂಬುದು ಈ ವರದಿಯಿಂದಲೇ ತಿಳಿಯುತ್ತದೆ.
ಪರಭಾಷಾ ಸಿನಿಮಾಗಳ ಹಾವಳಿ ನಡುವೆಯೂ ಆ್ಯಂಗ್ರಿ ಯಂಗ್ಮ್ಯಾನ್ ಅವತಾರದಲ್ಲಿ ಪ್ರೀತಿಯ ಹುಡುಗ ಗಣೇಶ್ ಆರ್ಭಟಕ್ಕೆ ಅತ್ಯುತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ. 80ರ ದಶಕದ ಕನ್ನಡ ಹೋರಾಟಗಾರ ಮತ್ತು ರೊಮ್ಯಾಂಟಿಕ್ ಬಾಯ್, ಹೀಗೆ ಎರಡು ಶೇಡ್ಗಳಿರೋ ಎರಡು ವಿಭಿನ್ನ ಪಾತ್ರಗಳನ್ನ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರೋ ಸಿನಿಮಾ ಗೀತಾ. ಮೊದಲ ಪ್ರಯತ್ನದಲ್ಲೇ ನಿರ್ದೇಶಕ ವಿಜಯ್ ನಾಗೇಂದ್ರ, ಗೋಕಾಕ್ ಚಳುವಳಿಯ ಜೊತೆಗೆ ಒಂದು ಸೊಗಸಾದ ಲವ್ ಸ್ಟೋರಿ ಹೇಳಿ ಸಕ್ಸಸ್ ಕಂಡಿದ್ದಾರೆ. ಇದೀಗ ಗೀತಾ ಸಿನಿಮಾ ಎರಡನೇ ವಾರ ಭರ್ಜರಿ ಪ್ರದರ್ಶನ ಕಾಣ್ತಿದೆ.
ಮೂವರು ನಾಯಕಿಯರನ್ನೊಳಕೊಂಡ ಗೀತಾ ಚಿತ್ರದ ಮೊದಲ ವಾರದ ಕಲೆಕ್ಷನ್ ಜೋರಾಗಿಯೇ ಇದೆ. ಮೊದಲ ವಾರವೇ 5 ಕೋಟಿ ಕಲೆಕ್ಷನ್ ಮಾಡಿದ ಚಿತ್ರ ಸಖತ್ ಸದ್ದು ಮಾಡುತ್ತಿದೆ. ಸಯ್ಯದ್ ಸಲಾಂ ಮತ್ತು ಶಿಲ್ಪಾ ಗಣೇಶ್ ಜಂಟಿಯಾಗಿ ನಿರ್ಮಿಸಿರೋ ಗೀತಾ ಸಿನಿಮಾ ಮೊದಲ ವಾರವೇ 5 ಕೋಟಿ ಕಲೆಕ್ಷನ್ ಮಾಡಿ ಸೌಂಡ್ ಮಾಡ್ತಿದೆ. ಗಣೇಶ್ ಜೊತೆಗೆ ನಾಯಕಿಯರಾಗಿ ಶಾನ್ವಿ ಶ್ರೀವಾಸ್ತವ್, ಪಾರ್ವತಿ, ಪ್ರಯಾಗ ಮಾರ್ಟಿನ್ ನಟಿಸಿದ್ದು, ಡೈನಾಮಿಕ್ ದೇವರಾಜ್, ಸುಧಾರಾಣಿ, ರಂಗಾಯಣ ರಘು ಸೇರಿದಂತೆ ಅನುಭವಿ ಕಲಾವಿದರ ದಂಡು ಚಿತ್ರದಲ್ಲಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ, ಸಿನಿಮಾವನ್ನ ಗೆಲ್ಲಿಸಿದ ಪ್ರೇಕ್ಷಕರಿಗೆ ಚಿತ್ರತಂಡ ಧನ್ಯವಾದ ತಿಳಿಸಿತು. ತಮ್ಮ ಇಮೇಜನ್ನು ಬಿಡದೇ ಪ್ರಯೋಗಾತ್ಮಕ ಸಿನಿಮಾ ಮಾಡಿ ಗಣೇಶ್ ಸಕ್ಸಸ್ ಕಂಡಿದ್ದಾರೆ.
ತಮಗೆ ತಿಳಿಸದೇ ಚಿತ್ರದ ಹಾಡೊಂದನ್ನ ಚಿತ್ರತಂಡ ಕಟ್ ಮಾಡಿದೆ, ಅಂತ ನಟಿ ಶಾನ್ವಿ ಶ್ರೀವಾಸ್ತವ್ ಬೇಸರ ವ್ಯಕ್ತಪಡಿಸಿದ್ರು. ಸಿನಿಮಾ ಕಾಲಾವಧಿ ಜಾಸ್ತಿಯಾಗುತ್ತೆ ಅನ್ನೋ ಕಾರಣಕ್ಕೆ ಹಾಡನ್ನ ಕತ್ತರಿಸಲಾಯ್ತು ಅಂತ ಚಿತ್ರತಂಡ ಹೇಳಿದ್ದು, ಇದೀಗ ಶಾನ್ವಿ ಮತ್ತೆ ಪತ್ರ ಬರೆದು ಈ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.