ಕಿಚ್ಚ ಸುದೀಪ್, ಸ್ಯಾಂಡಲ್ ವುಡ್ ನಲ್ಲಿ ಖ್ಯಾತ ನಟ. ಸುದೀಪ್ ಹಿಂದೆ ಡಬ್ಬಿಂಗ್ ವಿರೋಧಿಸಿದ್ದರು, ಈಗ ಅವರೇ ಡಬ್ಬಿಂಗ್ ಒಪ್ಪಿಕೊಂಡಂತಿದೆ. ಇದಕ್ಕೆ ಸೈರಾ ಚಿತ್ರ ಪುಷ್ಠಿಕೊಡುತ್ತದೆ. ಇದರ ಬಗ್ಗೆ ಈಗ ಅವರೇ ಕ್ಲಾರಿಟಿ ನೀಡಿದ್ದಾರೆ.
ಕಿಚ್ಚ ಸುದೀಪ್ ನಟಿಸಿದ್ದ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಕನ್ನಡಕ್ಕೆ ಡಬ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು, ಇದೀಗ ಮತ್ತೆ ಸುದೀಪ್ ಅಭಿನಯದ 'ದಬಾಂಗ್ 3' ಕನ್ನಡದಲ್ಲಿ ರಿಲೀಸ್ ಆಗಲು ಸಿದ್ಧತೆಗಳು ನಡೆದಿವೆ. ಈ ಮೊದಲು ಡಬ್ಬಿಂಗ್ ಸಿನಿಮಾ ವಿರೋಧಿ ಹೋರಾಟಗಳಲ್ಲಿ ಭಾಗವಹಿಸಿದ್ದ ನಟ ಸುದೀಪ್ ಈಗ ಬೇರೆ ಭಾಷೆಯ ಸಿನಿಮಾಗಳಿಗೆ ತಾವೇ ಡಬ್ ಮಾಡಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆ ಚರ್ಚೆಗಳಿಗೆ ಖುದ್ದು ಸುದೀಪ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಬಗ್ಗೆ ಆಡಿಕೊಳ್ಳುವವರಿಗೆ, ವಿವಾದ ಸೃಷ್ಟಿಸುವವರನ್ನು ನಿರ್ಲಕ್ಷ್ಯ ಮಾಡುವ ಮೂಲಕವೇ ಉತ್ತರ ನೀಡುವ ಕಿಚ್ಚ ಸುದೀಪ್ ಸದ್ಯಕ್ಕೆ 'ಪೈಲ್ವಾನ್' ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಇದರ ಜೊತೆಜೊತೆಗೇ ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ಬಾಸ್ ಸೀಸನ್ 7' ಕೂಡ ನಾಳೆಯಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕಿಚ್ಚ ಸುದೀಪ್ ಅನೇಕ ಸಂಗತಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
'ಆಗಿನ ಪರಿಸ್ಥಿತಿಯಲ್ಲಿ ಡಬ್ಬಿಂಗ್ ಅವಶ್ಯಕತೆಯಿಲ್ಲ ಎನಿಸಿತ್ತು. ಹೀಗಾಗಿ, ವಿರೋಧಿಸಿದ್ದೆ. ಆದರೀಗ ಕಾಲ ಬದಲಾಗಿದೆ. ದೊಡ್ಡ ಬಜೆಟ್ನ ಸಿನಿಮಾಗಳು ರಿಲೀಸ್ ಆದಾಗ ಅವು ಬೇರೆ ಭಾಷೆಗಳ ಜನರನ್ನೂ ತಲುಪಬೇಕು. ಬಾಹುಬಲಿ, ಕೆಜಿಎಫ್ ಸಿನಿಮಾಗಳು ಒಂದು ಭಾಷೆಗೆ ಸೀಮಿತವಾಗದೆ ಎಲ್ಲ ಭಾಷಿಗರನ್ನೂ ತಲುಪಿದ್ದು ಡಬ್ಬಿಂಗ್ ಮೂಲಕ' ಎಂದಿದ್ದಾರೆ. ಇಂದು ಚಿತ್ರರಂಗದಲ್ಲಿ ಸ್ಪರ್ಧೆಗಳು ಜಾಸ್ತಿಯಾಗಿದೆ. ಬೇರೆ ಭಾಷೆಯವರಿಗೂ ನಮ್ಮ ತಂತ್ರಜ್ಞರ, ಕಲಾವಿದರ ಪರಿಚಯವಾಗಬೇಕು. 5 ವರ್ಷದ ಹಿಂದೆ ಯಾವ ವಸ್ತುಗಳನ್ನೂ ಮನೆಗೆ ಡೆಲಿವರಿ ಕೊಡುತ್ತಿರಲಿಲ್ಲ. ನಾವೇ ಹೋಗಿ ಕೊಂಡು ತರುತ್ತಿದ್ದೆವು. ಆದರೀಗ ತಿನ್ನೋ ಆಹಾರದಿಂದ ತೊಡುವ ಬಟ್ಟೆ, ಚಪ್ಪಲಿವರೆಗೆ ಎಲ್ಲವೂ ಮನೆಬಾಗಿಲಿಗೆ ಡೆಲಿವರಿಯಾಗುತ್ತಿದೆ. ನಮಗಿದು ಬೇಡ ಎಂದರೆ ನಾವು ಹಿಂದುಳಿದು ಬಿಡುತ್ತೇವೆ. ಡಬ್ಬಿಂಗ್ ವಿಷಯದಲ್ಲೂ ಹೀಗೇ ಆಗಿರೋದೆಂದು ಸುದೀಪ್ ಹೇಳಿದ್ದಾರೆ.