ಕಮಲ್ ಹಾಸನ್ ರಾಜಕೀಯ ಪಾದಾರ್ಪಣೆ ಮತ್ತು ಭವಿಷ್ಯ!

Sunayana

60ರ ದಶಕದಲ್ಲಿ ಹುಟ್ಟಿಕೊಂಡ ಹಿಂದಿ ಭಾಷೆ ವಿರೋಧಿ ಹೋರಾಟದ ಕಾರಣಕ್ಕೆ, ತಮಿಳುನಾಡು ಎಂದರೆ ಕಣ್ಮುಂದೆ ಬರುವುದೇ ಅವರ ಭಾಷೆ ಮತ್ತು ಪ್ರಾದೇಶಿಕ ಸ್ವಾಭಿಮಾನ. ಕರ್ನಾಟಕದಲ್ಲಿ ಕಾಣಸಿಗದ, ಚಿತ್ರರಂಗದ ಜನಪ್ರಿಯತೆ ರಾಜಕೀಯ ಅಧಿಕಾರವಾಗಿ ಬದಲಾಗುವ ಅನನ್ಯ ಪರಂಪರೆಯೂ ಗೊತ್ತಿರುವಂತಹದ್ದೇ. ನಟನೊಬ್ಬ ಮುಖ್ಯಮಂತ್ರಿ ಪದವಿಗೆ ಏರಿದ ಉದಾಹರಣೆಗಳೂ ಇಲ್ಲಿ ಸಿಗುತ್ತವೆ.


ಎಂಜಿಆರ್, ಕರುಣಾನಿಧಿ, ಜಯಲಲಿತಾ ತರಹದ ಜನಪ್ರಿಯ ನಟ ನಟಿಯರುವ ಇಲ್ಲಿ ಜನಾಧಿಕಾರದ ಉನ್ನತ ಹುದ್ದೆಗೇರಿದ್ದಾರೆ. ಇದೀಗ ಹೀಗೊಂದು ಪಟ್ಟಿಯಲ್ಲಿ ಸ್ಥಾನಪಡೆದುಕೊಳ್ಳಲು ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ ನಟ ಕಮಲ್ ಹಾಸನ್.


ದಕ್ಷಿಣ ಭಾರತದ ಖ್ಯಾತ ಕಮಲ್ ಹಾಸನ್ ಈ ಹಿಂದೆಯೇ ರಾಜಕೀಯಕ್ಕೆ ಬರುವುದಾಗಿ ಘೋಷಿಸಿದ್ದರು. ಫೆ.21ರಂದು ಅಧಿಕೃತವಾಗಿ ಹೊಸ ಪಕ್ಷವೊಂದನ್ನು ಘೋಷಣೆ ಮಾಡಿದ್ದಾರೆ. ಅದಕ್ಕೆ ‘ಮಕ್ಕಳ್ ನೀದಿ ಮಯ್ಯಂ’ ಎಂದು ಹೆಸರಿಟ್ಟಿದ್ದಾರೆ. ಈ ಹೆಸರಿನ ಅರ್ಥವಿಷ್ಟೇ ‘ಜನಕ್ಕಾಗಿ ನ್ಯಾಯ ಕೇಂದ್ರ’. ಆದರೆ ಪಕ್ಷ ಉದ್ಘಾಟನೆಗೂ ಮುನ್ನವೇ ಕಮಲ್ ಹಾಸನ್ ಅವರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ರಾಮೇಶ್ವರದಲ್ಲಿರುವ ಮನೆಗೆ ಭೇಟಿ ನೀಡಿ, ಕಲಾಂ ಅವರ ಹಿರಿಯ ಸಹೋದರ ಮೊಹಮ್ಮದ್ ಮೀರನ್ ಮರೈಕಯಾರಿಂದ ಆಶೀರ್ವಾದ ಪಡೆದರು.ಜೊತೆಗೆ, “ಅಬ್ದುಲ್ ಕಲಾಂ ಜೀ ನನ್ನ ಪಾಲಿಗೆ ಪ್ರಮುಖ ವ್ಯಕ್ತಿ. ದೇಶಭಕ್ತಿ ಮತ್ತು ಮಹತ್ವಾಕಾಂಕ್ಷೆಗಳ ಕಾರಣದಿಂದ ಅವರಿಂದ ಆಕರ್ಷಿತನಾಗಿದ್ದೇನೆ,” ಎನ್ನುವ ಮೂಲಕ ದೇಶದ ಅಪರೂಪದ ವಿಜ್ಞಾನಿ, ಮಾಜಿ ರಾಷ್ಟ್ರಪತಿಗಳನ್ನು ಕಮಲ್ ಹಾಸನ್ ನೆನೆದಿದ್ದಾರೆ.


ಈ ಮದ್ಯೆ ಕಲಾಂ ಅವರು ಓದಿದ ಶಾಲೆಗೆ ಕಮಲ್ ಹೋಗಲು ಪ್ರಯತ್ನ ಪಟ್ಟರಾದರೂ, “ಇದೊಂದು ರಾಜಕೀಯ ಕಾರ್ಯಕ್ರಮವಾದುದ್ದರಿಂದ ಅನುಮತಿ ನೀಡಲು ಸಾಧ್ಯವಿಲ್ಲ,” ಎಂದು ಪ್ರವೇಶ ನೀಡಲು ನಿರಾಕರಿಸಲಾಯಿತು.ಹೊಸ ಪಕ್ಷ ಘೋಷಣೆ ಮಾಡಿದ ಕಮಲ್ ಹಾಸನ್, ನಮ್ಮದು ಎಡವೂ ಅಲ್ಲದ, ಬಲವೂ ಅಲ್ಲದ ಮಧ್ಯಮ ಅಲೋಚನೆಯನ್ನು ಹೊಂದಿರುವ ಪಕ್ಷ ಎಂದಿದ್ದಾರೆ. ಅದಕ್ಕಾಗಿಯೇ ಪಕ್ಷದ ಹೆಸರಿನಲ್ಲಿ ‘ಸೆಂಟರ್’ ಎಂಬ ಪದ ಬಳಕೆ ಮಾಡಿದ್ದೇವೆ ಎಂದು ಚಟಾಕಿಯನ್ನೂ ಹಾರಿಸಿದ್ದಾರೆ. ರಾಜಕೀಯದಲ್ಲಿ ಎಡ-ಬಲ-ಮಧ್ಯಮ ಆಲೋಚನೆಗಳ ಆಚೆಗೆ ಮತಗಳನ್ನು ಸೆಳೆಯಲು ಬೇಕಿರುವುದು ಆಕರ್ಷಕ ವ್ಯಕ್ತಿತ್ವಗಳು. ಅದು ಕಮಲ್ ಅವರಿಗೆ ಸಿನೆಮಾ ರಂಗದ ಜನಪ್ರಿಯತೆ ನೀಡಿದೆ.


ಅವರ ಹೊಸ ಪಕ್ಷ, ದ್ರಾವಿಡ ಚಳವಳಿಯ ಮೂಸೆಯಿಂದ ಹೊರಬರುವ ಹಾದಿಯಲ್ಲಿರುವ ರಾಜ್ಯದ ರಾಜಕೀಯದಲ್ಲಿ ಹೊಸ ಪರ್ಯಾಯ ಸೃಷ್ಟಿಸಬಲ್ಲದಾ? ಅದನ್ನು ಇಷ್ಟು ಬೇಗ ತೀರ್ಮಾನಿಸುವುದು ಅವಸರವಾಗುತ್ತದೆ. ಆದರೆ, ರಾಜಕೀಯದ ಅಖಾಡಕ್ಕೆ ಇಳಿಯುವ ಮೂಲಕ ಸಾರ್ವಜನಿಕ ಹಕ್ಕು ಬಾಧ್ಯತೆಯನ್ನು ಮೈಮೇಲೆ ಎಳೆದುಕೊಂಡಿರುವ ಕಮಲ್ ಹಾಸನ್ ಹಿನ್ನೆಲೆ ಏನಿದೆ ಎಂಬುದನ್ನು ನೋಡಬೇಕಾದ ಸಮಯ ಇದು.ಹೀಗಾಗಿಯೇ, ‘ಸಮಾಚಾರ’ ದಶಾವತಾರವನ್ನು ಎತ್ತಿದ್ದ ಕಮಲ್ ಹಾಸನ್ ವ್ಯಕ್ತಿಚಿತ್ರವನ್ನು ಇಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದೆ.



ಆವತ್ತು 13ನೇ ಜೂನ್ 2008.

ಕಮಲ್ ಹಾಸನ್ ಅಭಿನಯದ ಚಿತ್ರವೊಂದು ಭಾರತ ಸೇರಿದಂತೆ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಇದು ಪ್ರೇಕ್ಷಕರ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ಕೋಟ್ಯಾಂತರ ರೂ. ಹಣ ಸುರಿದು ಬಹುಭಾಷೆಗಳಲ್ಲಿ ನಿರ್ಮಿಸಿದ ಚಿತ್ರದ ಹೆಸರು ‘ದಶಾವತಾರಂ’. ಹೆಸರೇ ಹೇಳುವಂತೆ ಹತ್ತು ಅವತಾರಗಳು. ಈ ಹತ್ತು ಅವತಾರಳ ವಿವಿಧ ಪಾತ್ರಗಳನ್ನು ಅಚ್ಚುಕಟ್ಟಾಗಿ ಅಭಿನಯಿಸಿದವರು ಕಮಲ್ ಹಾಸನ್. ಈ ಮೂಲಕ ಅವರು ತಮ್ಮ ಗುರು ಶಿವಾಜಿ ಗಣೇಶನ್ ಅವರ ದಾಖಲೆಯನ್ನು ಮುರಿದು ಬಿಟ್ಟರು. ‘ನವರಾತ್ರಿ’ ಎಂಬ ಸಿನಿಮಾದಲ್ಲಿ ಶಿವಾಜಿ ಗಣೇಶನ್ ಒಂಭತ್ತು ಪಾತ್ರಗಳನ್ನು ಮಾಡಿದ್ದು ಅಲ್ಲಿಯವರೆಗೂ ದಾಖಲೆಯಾಗಿತ್ತು. ಶಿಷ್ಯ ಗುರುವನ್ನು ಮೀರಿಸಿದ್ದು ಈಗ ಇತಿಹಾಸ.


ಈ ಸಿನೆಮಾದ ಮೇಕಿಂಗ್ ಸಮಯದಲ್ಲಿ ಸ್ವತಃ ಕಮಲ್ ಹಾಸನ್ ಅವರಿಗೆ, “ನಿನಗೇನು ಹುಚ್ಚಾ?” ಎಂಬ ಪ್ರಶ್ನೆ ಎದುರಾಗಿತ್ತು. ಈ ರೀತಿ ಕಮಲ್‌ ಅವರನ್ನು ಕೇಳಿದ್ದು ಬೇರೆ ಯಾರೂ ಅಲ್ಲ; ದಶಾವತಾರಂ ಚಿತ್ರಕ್ಕೆ ಸ್ಪೆಷಲ್ ಎಫೆಕ್ಟ್ ನೀಡಲು ಹಾಲಿವುಡ್‌ನಿಂದ ಬಂದಿದ್ದ ಬ್ರಿಯಾನ್ ಜೆನ್ನಿಂಗ್ಸ್. ಆದರೆ ನಂತರದಲ್ಲಿ ಅವರೇ ಕಮಲ್ ಹಾಸನ್ ಅಭಿನಯಕ್ಕೆ ಮಾರು ಹೋದರು. ತಮ್ಮ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುತ್ತಿದ್ದ ಕಮಲ್ ಹಾಸನ್ ಅಭಿನಯ ಕಂಡು “ಈ ಚಿತ್ರಕ್ಕೆ ನಾನು ಕೆಲಸ ಮಾಡಿದ್ದು ಒಳ್ಳೆಯದೇ ಆಯಿತು,” ಎಂದು ಹೇಳಿದ್ದರು.


ಕಮಲ್ ಹಾಸನ್ ಹುಟ್ಟಿದ್ದು 1954ರ ನವೆಂಬರ್ 7 ರಂದು. ತಮಿಳುನಾಡಿನ ರಾಮ್‌ನಾಡ್ ಜಿಲ್ಲೆಯ ಪರಮಕುಡಿಯಲ್ಲಿ ಜನಿಸಿದರು. ಇವರ ತಂದೆ ಹೆಸರು ಡಿ. ಶ್ರೀನಿವಾಸನ್. ತಾಯಿ ರಾಜಲಕ್ಷ್ಮಿ. ತಂದೆ ವಕೀಲರಷ್ಟೇ ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗಾಂಧಿವಾದಿಯೂ ಆಗಿದ್ದರು. ಹಿಂದೂ-ಮುಸ್ಲಿಂ ಧರ್ಮಗಳ ಭ್ರಾತೃತ್ವವನ್ನು ಬಯಸಿದ್ದ ಅವರು ತಮ್ಮ ಮಗನಿಗೆ ಕಮಲ್-ಹಾಸನ್ ಎಂದೇ ನಾಮಕರಣ ಮಾಡಿದರು. ಶುದ್ಧ ತಮಿಳು ಅಯ್ಯಂಗಾರ್ ಕುಟುಂಬದಲ್ಲಿ ಕಮಲ್ ಹಾಸನ್ ಬೆಳೆದರು.


ಕಮಲ್ ಹಾಸನ್ ಮೂರು ಜನ ಸಹೋದರರಲ್ಲಿ ಕಿರಿಯವರು. ಉಳಿದವರು ಚಾರುಹಾಸನ್ ಮತ್ತು ಚಂದ್ರಹಾಸನ್. ಚಾರುಹಾಸನ್ ಅವರು ಕೂಡ, ಕಮಲ್ ಹಾಸನ್‌ರಂತೆ ರಾಷ್ಟೀಯ ಚಲನಚಿತ್ರ ಪ್ರಶಸ್ತಿ -ವಿಜೇತ ನಟರು. ಕನ್ನಡದ ಹೆಸರಾಂತ ಚಿತ್ರ ‘ತಬರನ ಕಥೆ’ಯಲ್ಲಿ ಪಾತ್ರ ಮಾಡಿದ್ದರು. ಆದರೆ ಅವರು ಇತ್ತೀಚೆಗೆ ಚಲನಚಿತ್ರರಂಗದಿಂದ ದೂರ ಉಳಿದಿದ್ದಾರೆ. ಚಾರು ಹಾಸನ್ ಮಗಳೇ ಸುಹಾಸಿನಿ. ಇವರು ಖ್ಯಾತ ನಿರ್ದೇಶಕ ಮಣಿ ರತ್ನಮ್‌ರನ್ನು ವಿವಾಹವಾಗಿದ್ದಾರೆ.ಕಮಲ್ ಹಾಸನ್ ಅವರ ವೃತ್ತಿ ಜೀವನದ ಬಗ್ಗೆ ಹಲವಾರು ಪ್ರಸಂಶೆಗಳು ಹಾಗೂ ಹೊಗಳಿಕೆಗಳು ಇದ್ದರೂ, ವಯಕ್ತಿಕ ಜೀವನದ ಬಗ್ಗೆ ಅನೇಕ ವಿಮರ್ಶೆ ಮತ್ತು ಟೀಕೆಯ ಮಾತುಗಳನ್ನು ಕಮಲ್ ಹಾಸನ್ ಎದುರಿಸಿದ್ದಾರೆ.


ಅವರು ತಮ್ಮ ವೃತ್ತಿ ಜೀವನದ ಆರಂಭದಲ್ಲಿ, ಕೆಲವು ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಹೆಸರಾಗಿದ್ದ ನಟಿ ಶ್ರೀವಿದ್ಯಾರೊಂದಿಗೆ ಅಭಿನಯಿಸಿದ್ದರು. ತೆರೆ ಆಚೆಗೂ ಇಬ್ಬರು ಪ್ರೇಮಿಸಿದ್ದರು. ವಿಶೇಷವೆಂದರೆ, ಮಲಯಾಳಂ ನಿರ್ದೇಶಕ ರೆಂಜಿತ್ 2008ರಲ್ಲಿ ಬಿಡುಗಡೆಯಾದ ತಮ್ಮ ‘ತಿರಕ್ಕಥಾ’ ಚಿತ್ರದಲ್ಲಿ ಕಮಲ್ ಹಾಸನ್-ಶ್ರಿವಿದ್ಯಾ ಪ್ರೇಮ ಕಥೆಯನ್ನು ನಿರೂಪಿಸಿದ್ದಾರೆ. ಆದರೆ ಶ್ರೀವಿದ್ಯಾ ಕೊನೆಯ ದಿನಗಳಲ್ಲಿ ಹಾಸಿಗೆ ಹಿಡಿದು 2006ರಲ್ಲಿ ನಿಧನ ಹೊಂದಿದರು.ಬಹುಶಃ ಕಮಲ್ ಹಾಸನ್ ತಮಗೆ ಸ್ತ್ರೀ ಜೊತೆಗಾರ್ತಿಯಲ್ಲಿದೇ ಬದುಕಲಾರರೇನೋ ಎಂಬುದು ಅವರ ಮುಂದಿನ ಬದುಕಿನ ಹಾದಿ ಎತ್ತಿ ತೋರಿಸುತ್ತದೆ. ಯಾಕೆಂದರೆ ಕಮಲ್ ಹಾಸನ್, ತಮ್ಮ 24ನೇ ವಯಸ್ಸಿನಲ್ಲಿ ತಮಗಿಂತಲೂ ಹಿರಿಯರಾಗಿದ್ದ ನೃತ್ಯಗಾರ್ತಿ ವಾಣಿ


ಗಣಪತಿಯವರನ್ನು 1978ರಲ್ಲಿ ವಿವಾಹವಾದರು. ಇವರು ಬಾಳಸಂಗಾತಿಯಷ್ಟೇ ಅಲ್ಲದೇ, ಕಮಲ್ ಹಾಸನ್ ಅವರಿಗೆ ಕಾಸ್ಟ್ಯೂಮ್ ವಿನ್ಯಾಸಗಾರ್ತಿಯೂ ಆದರು. ಆದರೆ ಇವರಿಬ್ಬರ ಮದ್ಯದ ದಾಂಪತ್ಯ ಕೊನೆಯವರೆಗೂ ಉಳಿಯಲಿಲ್ಲ. ಸುಮಾರು ಹತ್ತು ವರ್ಷಗಳ ಕಾಲ ಜೊತೆಯಲ್ಲಿದ್ದ ವಾಣಿ, ಕಮಲ್ ಹಾಸನ್ ತಮ್ಮ ಸಹ ನಟಿ ಸಾರಿಕಾ ಜೊತೆಯಲ್ಲಿ ಡೇಟಿಂಗ್ ಮಾಡುವುದು ತಿಳಿದು ಕೊನೆಗೆ ಬೇರೆಯಾದರು.


ನಂತರ ಸಾಗರಿಕಾಳೊಂದಿಗೆ ‘ಲಿವಿಂಗ್ ಟುಗೇದರ್’ ಆರಂಭಿಸಿದರು. ಆ ನಂತರದಲ್ಲಿ ಚಲನಚಿತ್ರಗಳಲ್ಲಿ ನಟಿಸುವುದನ್ನು ಸಾಗರಿಕಾ ಕೈಬಿಟ್ಟರು. ವಾಣಿಯಂತೆ ಕಮಲ್ ಹಾಸನ್ ಅವರ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ವಹಿಸಿಕೊಂಡರು. ‘ಹೇ ರಾಮ್’ ಚಿತ್ರದಲ್ಲಿ ವಸ್ತ್ರ ವಿನ್ಯಾಸವನ್ನು ಅವರೇ ಮಾಡಿದ್ದಾರೆ. ಕಮಲ್ ಹಾಸನ್ ಅವರಿಗೆ ಸಾಗರಿಕಾ ಜೊತೆಗಿನ ‘ಲಿವಿಂಗ್ ಟುಗೆದರ್‌’ ಫಲವಾಗಿ 1986ರಲ್ಲಿಯೇ ಶೃತಿ ಹಾಸನ್ ಹುಟ್ಟುತ್ತಾರೆ.


ಶೃತಿ ಜನನದ ನಂತರ ಕಮಲ್ ಹಾಸನ್-ಸಾಗರಿಕಾ ಮದುವೆಯಾಗುತ್ತಾರೆ. ಮದುವೆಯ ನಂತರ 1991ರಲ್ಲಿ ಅಕ್ಷರ ಹಾಸನ್ ಜನಿಸಿದರು. ಶೃತಿ ಈಗಾಗಲೇ ನಾಯಕನಟಿಯಾಗಿ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.ಇರಲಿ, ಈಗ ಕಮಲ್ ಹಾಸನ್ ಅವರ ವಿಷಯಕ್ಕೆ ಬರೋಣ. ಕಮಲ್ ಹಾಸನ್ ಅವರು ಚಿತ್ರಂಗದಲ್ಲಿ ಹೆಸರು ಮಾಡುತ್ತಿದ್ದರಿಂದ ಅವರಿಗೆ ಹೊಸ ಹೊಸ ನಟಿಯರ ಪರಿಚಯ ಸಹಜವಾಗಿಯೇ ಆಗುತ್ತಿತ್ತು. ಇದರಲ್ಲಿ ಕಮಲ್ ಹಾಸನ್ ಅವರಿಗೆ ತುಂಬ ಹತ್ತಿರ ಬಂದವರೆಂದರೆ ಸಿಮ್ರಾನ್. ಸಿಮ್ರಾನ್ ಅವರು ಕಮಲ್ ಹಾಸನ್ ಅವರಿಗಿಂತ 24 ವರ್ಷಗಳಷ್ಟು ಚಿಕ್ಕವರು. ಇವರು ಕಮಲ್ ಹಾಸನ್ ಜೊತೆಯಲ್ಲಿ ಪಮ್ಮಲ್ ಕೆ ಸಂಬಂಧಂ ಮತ್ತು ಪಂಚತಂತಿರಮ್ ಗಳಲ್ಲಿ ಅಭಿನಯಿಸಿದರು. ಈ ಸಂದರ್ಭದಲ್ಲಿ ಇಬ್ಬರ ಮಧ್ಯ ಸಲುಗೆ ಬೆಳೆಯಿತು.


ಕಮಲ್ ಹಾಸನ್ ಮತ್ತು ಸಿಮ್ರನ್ ಮದ್ಯದ ಸಂಬಂಧ ಮತ್ತಷ್ಟು ಹತ್ತಿರವಾಗುತ್ತಿರುವುದು ಸಾಗರಿಕಾ ತಿಳಿದು, ಪತಿಯ ವಿರುದ್ಧ ತಿರುಗಿ ಬೀಳುತ್ತಾರೆ. ಇದರ ಫಲವಾಗಿಯೇ 2002ರಲ್ಲಿ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿ, 2004ರಲ್ಲಿ ಇಬ್ಬರೂ ಬೇರೆ ಬೇರೆಯಾದರು. ಆದರೆ ಸಿಮ್ರಾನ್ ಕೂಡ 2004ರಲ್ಲಿಯೇ ತನ್ನ ಬಾಲ್ಯ ಸ್ನೇಹಿತನನ್ನು ವಿವಾಹವಾಗುವ ಮೂಲಕ ಕಮಲ್ ಹಾಸನ್ ಸಂಬಂಧಕ್ಕೆ ಅಂತ್ಯ ಹಾಡಿದರು. ಆದರೆ ಕೊನೆಗೆ 2005ರಿಂದ ಕಮಲ್ ಹಾಸನ್ ತಮ್ಮ 80ರ ದಶಕದಲ್ಲಿ ತಮ್ಮ ಜೊತೆಗೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ನಟಿ ಗೌತಮಿ ತಡಿಮಲ್ಲಾ ಅವರ ಜೊತೆ ವಾಸಿಸಲು ಆರಂಭಿಸಿದರು. ಜೊತೆಗೆ, ಗೌತಮಿ ಸ್ತನ ಕ್ಯಾನ್ಸರ್‌ನಿಂದ ಬಳಸುತ್ತಿರುವ ಸಂದರ್ಭದಲ್ಲಿ ಎಲ್ಲ ರೀತಿಯ ಸಹಾಯವನ್ನೂ ಮಾಡಿದರು. ಇವಿಷ್ಟು ಕಮಲ್ ಹಾಸನ್ ಅವರ ವೈಯಕ್ತಿಕ ಬದುಕಿನ ಕತೆಗಳು.


ಚಿತ್ರರಂಗದ ಸಾಧನೆಗಳು:


ಕಮಲ್ ಹಾಸನ್ ಚಲನಚಿತ್ರದಲ್ಲಿ ಅಭಿನಯ ಪ್ರಾರಂಭಿಸಿದ್ದು 4ನೇ ವಯಸ್ಸಿನಲ್ಲಿಯೇ. ಭೀಮ್ ಸಿಂಗ್ ನಿರ್ದೇಶನದ ಕಳತ್ತೂರ್ ಕಣ್ಣಮ್ಮ ಇವರ ಮೊದಲ ಚಿತ್ರ . ಅನುಭವಿ ತಮಿಳು ನಟ ಜೆಮಿನಿ ಗಣೇಶನ್ ಜೊತೆಯಲ್ಲಿ ಕಮಲ್ ಹಾಸನ್ ಅಭಿನಯಿಸಿದ ಪಾತ್ರಕ್ಕೆ ಉತ್ತಮ ಬಾಲನಟ ಎಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದರು. ಜೊತೆಗೆ ಬಾಲನಟನಾಗಿಯೇ ಶಿವಾಜಿ ಗಣೇಶನ್ ಮತ್ತು ಎಮ್. ಜಿ.ರಾಮಚಂದ್ರನ್ ಅವರಂತಹ ದಿಗ್ಗಜ ನಟರೊಂದಿಗೆ ಅಭಿನಯಿಸಿದರು.


ಆನಂತರ 9 ವರ್ಷಗಳವರೆಗೆ ಚಿತ್ರರಂಗದಿಂದಲೇ ದೂರ ಉಳಿದರು.ಆದರೆ ಈ ಅವಧಿಯಲ್ಲಿ ಅವರು ಅಭಿನಯಕ್ಕೆ ಬೇಕಾದ ಅಗತ್ಯ ಪಟ್ಟುಗಳನ್ನು ಕಲಿತರು. ವಿದ್ಯಾಬ್ಯಾಸ ಮಾಡುತ್ತಲೇ, ಕರಾಟೆ ಮತ್ತು ಭರತ ನಾಟ್ಯವನ್ನು ಕಲಿತು ಅದರಲ್ಲಿ ಪರಿಣಿತಿ ಸಾಧಿಸಿದರು. ಇದೆಲ್ಲ ಆದ ನಂತರ ಮರಳಿ ಚಿತ್ರರಂಗಕ್ಕೆ ಬಂದಿದ್ದು 1972ರಲ್ಲಿ. ಆವತ್ತಿಗೆ ತುಂಬ ಕಡಿಮೆ ಬಜೆಟ್‌ನಲ್ಲಿ ತಮಿಳು ಚಿತ್ರಗಳನ್ನು ನಿರ್ಮಿಸಲಾಗುತ್ತಿತ್ತು. ಅಂತಹ ಚಿತ್ರಗಳಲ್ಲಿ ಕಮಲ್ ಹಾಸನ್ ಅಭಿನಯಿಸಿದರು. ಅಲ್ಲಿಂದ ಅವರ ಎರಡನೇ ಇನಿಂಗ್ಸ್ ಶುರುವಾಯಿತು.


ಅನೇಕ ಚಲನಚಿತ್ರಗಳಲ್ಲಿ ಸಹನಟನಾಗಿ ಅಭಿನಯಿಸಲು ಪ್ರಾರಂಭಿಸಿದರು. ಹೀಗೆ ಅವರು ಸಹನಟನಾಗಿ ಅಭಿನಯಿಸಿದ ಕೊನೆಯ ಚಲನಚಿತ್ರವೇ ‘ನಾನ್ ಅವನಿಲ್ಲಾಯ್’. ನಂತರ ಅವರು ಎರಡು ಸಂದರ್ಭಗಳನ್ನು ಹೊರತುಪಡಿಸಿದರೆ ಸೋಲಿನೆಡೆಗೆ ತಿರುಗಿ ನೋಡುವ ಪ್ರಸಂಗವೇ ಬರಲಿಲ್ಲ. ಮುಂದೆ ಅವರದ್ದು ಯಶಸ್ಸಿನ ಕತೆಗಳೇ.19970 ಮತ್ತು 80ರ ಮದ್ಯಭಾಗ ಕಮಲ್ ಅವರ ವೃತ್ತಿಜೀವನದ ಅತ್ಯಂತ ಪ್ರಮುಖ ಘಟ್ಟ. ಈ ಕಾಲಘಟ್ಟದಲ್ಲಿ ಹತ್ತು ಹಲವು ಪ್ರಶಸ್ತಿಗಳನ್ನು ಕಮಲ್ ಹಾಸನ್ ಪಡೆದುಕೊಂಡರು. 1974ರಲ್ಲಿ ಅಭಿನಯಿಸಿದ ಮಲಯಾಳಂ ಚಿತ್ರ ‘ಕನ್ಯಾಕುಮಾರಿ’ ಚಿತ್ರದಲ್ಲಿನ ನಟನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಕಮಲ್ ಪಡೆದುಕೊಂಡರು. ಇದೇ ಅವರಿಗೆ ಬಂದ ಮೊದಲ ಫಿಲ್ಮಫೇರ್ ಪ್ರಶಸ್ತಿ.


ಇದಾದ ನಂತರ ಅವರ ನಟನಾ ಸಾಮರ್ಥ್ಯಕ್ಕೆ ಮತ್ತಷ್ಟು ಪುರಸ್ಕಾರಗಳು ತಾವಾಗಿಯೇ ಅರಸಿಕೊಂಡು ಬಂದವು. ಉತ್ತಮ ತಮಿಳು ನಟ ಪ್ರಶಸ್ತಿಗಳನ್ನೊಳಗೊಂಡು ಆರು ಪ್ರಾದೇಶಿಕ ಉತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಅವರು ಗಳಿಸಿದರು.ಅದು ವಯಸ್ಸಿನ ಅಂತರದ ಸಂಬಂಧಗಳ ಕಥೆಯ ಚಿತ್ರ. ಹೆಸರು ಅಪೂರ್ವ ರಾಗಂಗಳ್‌. ಇದರ ನಿರ್ದೇಶಕ ಕೆ.ಬಾಲಚಂದರ್. ಈ ಚಿತ್ರದಲ್ಲಿ ಕಮಲ್ ಹಾಸನ್ ಅಭಿನಯ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡಿತ್ತು.


1970-80 ಅವಧಿಯಲ್ಲಿ ಇದೇ ನಿರ್ದೇಶಕರ ಹೆಚ್ಚಿನ ಚಿತ್ರಗಳಲ್ಲಿ ಕಮಲ್ ಅಭಿನಯಿಸಿದರು. ಅವು ಸಾಮಾಜಿಕ ವಿಷಯಗಳನ್ನಾದರಿಸಿದ ಚಿತ್ರಗಳು ಎಂಬುದು ಗಮನಾರ್ಹ. ಕೆ.ಬಾಲಚಂದರ್ 1977ರಲ್ಲಿ ನಿರ್ಮಿಸಿದ ಅವರ್‌ಗಳ್ ಚಿತ್ರಕ್ಕಾಗಿ ಕಮಲ್ ‘ಉತ್ತಮ ತಮಿಳು ನಟ’ ಫಿಲ್ಮಫೇರ್ ಪ್ರಶಸ್ತಿ ಪಡೆದಿದ್ದಾರೆ. ಇದಾದ ನಂತರ, ಊರು ಊಧಪ್ಪು ಕಣ್ ಸಿಮಿತ್ತುಗಿರಧು ಎಂಬ ಚಿತ್ರವು ಎರಡನೆಯ ಬಾರಿಗೆ ಅವರಿಗೆ ಉತ್ತಮ ನಟ ಪ್ರಶಸ್ತಿಯನ್ನು ತಂದು ಕೊಟ್ಟಿತು. 16 ವಯತಿನಿಲೆ ಚಿತ್ರಕ್ಕೆ ಮೂರನೆಯ ಬಾರಿಗೆ ಉತ್ತಮ ನಟ ಪ್ರಶಸ್ತಿ ಬಂತು. ಈ ಚಿತ್ರದಲ್ಲಿ ಮಾನಸಿಕ ಖಾಯಿಲೆಯುಳ್ಳ ಒಬ್ಬ ಹಳ್ಳಿಯವನ ಪಾತ್ರದಲ್ಲಿ ಕಮಲ್ ಅಭಿನಯಿಸಿದ್ದರು. ಮತ್ತೊಂದು ವಿಶೇಷವೆಂದರೆ ರಜನಿಕಾಂತ್ ಮತ್ತು ಶ್ರೀದೇವಿ ಇಬ್ಬರೂ ಚಿತ್ರದ ತಾರಾಗಣದಲ್ಲಿದ್ದರು. ಇನ್ನು ಸಿಗಪ್ಪು ರೊಜಕಲ್ ಚಿತ್ರದಲ್ಲಿನ ಮಾನಸಿಕ ತೊಂದರೆಯುಳ್ಳ ಹಾಗೂ ಲೈಂಗಿಕ ವಿಕೃತ ವ್ಯಕ್ತಿಯ ಪಾತ್ರದ ನೆಗಟಿವ್ ರೋಲ್‌ಗಾಗಿ ನಾಲ್ಕನೆಯ ಬಾರಿಗೆ ಕಮಲ್ ಹಾಸನ್ ಫಿಲ್ಮಫೇರ್ ಉತ್ತಮ ನಟ ಪ್ರಶಸ್ತಿ ಪಡೆದರು.


ನಟನೆಯಲ್ಲಿ ಪಳಗುತ್ತಲೇ ಸಾಗಿದ ಅವರು, ತಮ್ಮ ನೂರನೇ ಚಲನಚಿತ್ರವನ್ನು ಪೂರೈಸಲು ಹೆಚ್ಚು ಸಮಯವನ್ನೇನೂ ಹಿಡಿಯಲಿಲ್ಲ. ಅವರ 100ನೇ ಚಲನಚಿತ್ರದ ಹೆಸರು ‘ರಾಜಾ ಪಾರ್ವಾಯ್’. ಇದು ಬಿಡುಗಡೆಯಾಗಿದ್ದು 1981ರಲ್ಲಿ. ಈ ಚಿತ್ರದೊಂದಿಗೆ ಅವರು ಚಿತ್ರ ನಿರ್ಮಾಣಕ್ಕೆ ಕೈಹಾಕಿದರು. ಈ ಚಿತ್ರವು ಚಿತ್ರರಂಗದಲ್ಲಿ ಅಷ್ಟೇನೂ ಹೆಸರು ಮಾಡದಿದ್ದರೂ, ಕಮಲ್ ನಿರ್ವಹಿಸಿದ ವಯೋಲಿನ್ ನುಡಿಸುವ ಕುರುಡನ ಪಾತ್ರ ಫಿಲ್ಮಫೇರ್ ಪ್ರಶಸ್ತಿ ತಂದುಕೊಟ್ಟಿತು.


1983ರಲ್ಲಿ ಕೆ.ವಿಶ್ವನಾಥ್ ಅವರ ‘ಸಾಗರ ಸಂಗಮಂ’ ಎಂಬ ತೆಲುಗು ಚಿತ್ರದಲ್ಲಿ ಕಮಲ್ ಹಾಸನ್ ಅಭಿನಯಿಸಿದರು. ಚಿತ್ರದ ನಾಯಕಿ ಜಯಪ್ರದಾ. ಇದು ಇವರಿಬ್ಬರ ವೃತ್ತಿಜೀವನದ ಮೈಲಿಗಲ್ಲು ಎಂದೇ ಹೇಳಲಾಗುತ್ತದೆ. ಈ ಚಿತ್ರಕ್ಕಾಗಿ ಅವರಿಗೆ ಎರಡನೇ ಬಾರಿಗೆ ಫಿಲ್ಮಫೇರ್‌ನ ಉತ್ತಮ ನಟ ಪ್ರಶಸ್ತಿ ಹಾಗೂ ಉತ್ತಮ ನಟ ಎಂದು ನಂದಿ ಅವಾರ್ಡ್ (ಪ್ರಶಸ್ತಿ) ಹೀಗೆ ಎರಡೂ ಪ್ರಶಸ್ತಿಗಳನ್ನು ಒಂದೇ ಚಿತ್ರಕ್ಕಾಗಿ ಪಡೆದರು. ಸ್ವಾತಿಮುತ್ಯಂ ಚಿತ್ರದಲ್ಲಿ ಕಮಲ್ ಹಾಸನ್ ಅಭಿನಯಿಸಿದ್ದರು. 1986 ರಲ್ಲಿ ಈ ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡಲ್ಪಡುವ ಅಕಾಡೆಮಿ ಅವಾರ್ಡ್ ಪ್ರಶಸ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಿತ್ತು.


ಭಾರತೀಯ ಚಲನಚಿತ್ರರಂಗದ ಇತಿಹಾಸದಲ್ಲಿಯೇ ಅತಿಹೆಚ್ಚು ಪ್ರಶಸ್ತಿಗಳನ್ನು ಪಡೆದವರು ಕಮಲ್ ಹಾಸನ್. ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಹೊಂದಿರುವ ದಾಖಲೆ ಇವರ ಹೆಸರಿನಲ್ಲಿಯೇ ಇದೆ. ಇದರಲ್ಲಿ ಮೂರು ಉತ್ತಮ ನಟ ಪ್ರಶಸ್ತಿ ಹಾಗೂ ಒಂದು ಬಾಲನಟ ಪ್ರಶಸ್ತಿಯೂ ಸೇರಿದೆ.ಇನ್ನು ಕಮಲ್ ಹಾಸನ್ ಗಳಿಸಿದ ಫಿಲ್ಮಫೇರ್ ಪ್ರಶಸ್ತಿಗಳ ಸಂಖ್ಯೆ ಬರೋಬ್ಬರಿ ಹತ್ತೊಂಬತ್ತು. ಇದೂ ಸಹ ದಾಖಲೆಯೇ. ತಮಿಳುನಾಡು ರಾಜ್ಯದ ಚಲನಚಿತ್ರ ಪ್ರಶಸ್ತಿಗಳನ್ನೂ ಕಮಲ್ ಹಾಸನ್ ಅವರಷ್ಟು ಪಡೆದವರು ಮತ್ತೊಬ್ಬರಿಲ್ಲ. ‘ದಶಾವತಾರಂ’ ಚಲನಚಿತ್ರಕ್ಕೆ ನಾಲ್ಕು ವಿವಿಧ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.


2014ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಇನ್ನೊಂದು ವಿಶೇಷವೇನು ಗೊತ್ತೇ? ಅವರು 200ರಲ್ಲಿ ಫಿಲ್ಮಫೇರ್ ಪ್ರಶಸ್ತಿ ಪಡೆದ ನಂತರ ಫಿಲ್ಮಫೇರ್ ಸಂಸ್ಥೆಗೆ, “ಇನ್ಮೇಲೆ ಪ್ರಶಸ್ತಿಗಳಿಂದ ನನಗೆ ವಿಮುಕ್ತಿ ನೀಡಿ,” ಎಂದು ಬರೆದಿದ್ದರು.ನಟನೆ ಹಾಗೂ ನಿರ್ದೇಶನದ ಜೊತೆಗೆ, ಚಿತ್ರಕಥೆಗಾರ, ಸಾಹಿತ್ಯ ರಚನೆಕಾರ, ಹಿನ್ನೆಲೆ ಗಾಯಕ ಮತ್ತು ನೃತ್ಯ ನಿರ್ದೇಶಕ ಹೀಗೆ ವಿವಿಧ ಪ್ರತಿಭೆಗಳನ್ನು ಕಮಲ್ ಹಾಸನ್ ಹೊಂದಿದ್ದಾರೆ. ಹೀಗೆ ಭಾರತೀಯ ಚಲನಚಿತ್ರರಂಗದಲ್ಲಿ ಕಮಲ್ ಹಾಸನ್ ತಮ್ಮದೇ ಛಾಪನ್ನು ಮೂಡಿಸಿದವರು. ಉತ್ತಮ ವಿದೇಶಿ ಚಿತ್ರಕ್ಕಾಗಿ ನೀಡುವ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾಗುವ ಚಿತ್ರಗಳಲ್ಲಿ ಹೆಚ್ಚಿನವು ಕಮಲ್ ಹಾಸನ್ ನಟಿಸಿದ ಚಿತ್ರಗಳಾಗಿರುವುದು ವಿಶೇಷವೇ ಸರಿ.


ಆವತ್ತಿನಿಂದಲೂ ಹಲವು ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುವ ಅಭಿನಯ ಮಾಡುತ್ತಲೇ ಬಂದಿದ್ದ ಕಮಲ್ ಹಾಸನ್, ಈಗ ಚಲನಚಿತ್ರ ರಂಗಕ್ಕೆ ವಿದಾಯ ಹೇಳಿ, ರಾಜಕೀಯಕ್ಕೆ ರಂಗಕ್ಕೆ ಬಂದು ನಿಂತಿದ್ದಾರೆ. ಒಂದು ಕಾಲದಲ್ಲಿ ಪ್ರಶಸ್ತಿಗಳಿಂದ ಮುಕ್ತಿ ಕೊಡಿ ಅಂದಿದ್ದ ನಟ, ಇಂದು ರಾಜಕೀಯ ರಂಗದಲ್ಲಿ ಮತಯಾಚನೆಗೆ ಇಳಿದಿದ್ದಾರೆ. ಅದು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೆ ಎಂಬುದಕ್ಕೆ ಕಾಯಲೇಬೇಕಿದೆ.



Find Out More:

Related Articles: