ನೀರಿನ ಸಮಸ್ಯೆ ಕುರಿತು ಸಿಎಂ ನೀಡಿದ ಖಡಕ್ ಸೂಚನೆ ಏನು?
ಜಾನುವಾರುಗಳಿಗೆ ಮೇವು ಸರಬರಾಜನ್ನು ಖಾತರಿ ಪಡಿಸಲು ಹಾಗೂ ಕುಡಿಯುವ ನೀರು ಸರಬರಾಜು ಈ ಎರಡೂ ವಿಷಯಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಓಗಳು ಕಡ್ಡಾಯವಾಗಿ ಪ್ರತಿದಿನ ಗ್ರಾಮಗಳಿಗೆ ಭೇಟಿ ನೀಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಖಡಕ್ಕಾದ ಸೂಚನೆ ನೀಡಿದ್ದಾರೆ.
ಬರ ಪರಿಸ್ಥಿತಿ ಕುರಿತು ವೀಡಿಯೋ ಸಂವಾದದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದೆ. ಹೀಗೆ ಸಮಸ್ಯೆ ಇರುವ ಗ್ರಾಮಗಳಲ್ಲಿ ಪರಿಹಾರ ಒದಗಿಸಲು ಅಗತ್ಯ ತೀರ್ಮಾನ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಜಾನುವಾರುಗಳಿಗೆ ಹಾಗೂ ಜನರಿಗೆ ಕುಡಿಯುವ ನೀರು ಸರಬರಾಜು ಮತ್ತು ಮೇವಿನ ಸರಬರಾಜಿನಲ್ಲಿ ಯಾವುದೇ ಕೊರತೆ ಉಂಟಾಗದಂತೆ ಎಚ್ಚರ ವಹಿಸಲು ತಿಳಿಸಿದ್ದಾರೆ.
ಇನ್ನು ಅನೇಕ ಜಾನುವಾರುಗಳು ಕುಡಿಯೋಕೆ ನೀರಿಲ್ಲದೇ ಹಾಗೂ ತಿನ್ನೋಕೆ ಮೇವಿಲ್ಲದೇ ಸಾಯುತ್ತಿವೆ. ಹೀಗಾಗಿ ಮೇವು ಸಂಗ್ರಹಕ್ಕೆ ಮುಂಚಿತವಾಗಿಯೇ ಸಿದ್ಧತೆ ನಡೆಸುವಂತೆ ಈ ಹಿಂದೆಯೇ ಸೂಚಿಸಲಾಗಿತ್ತು ಅನ್ನೋದನ್ನು ಅವರು ನೆನಪಿಸಿದರು. ಅಷ್ಟೇ ಅಲ್ಲದೇ ಈ ಎಲ್ಲ ಕೆಲಸಗಳಲ್ಲಿ ಎಲ್ಲಿಯೂ ಲೋಪವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಜನರಿಗೆ ಕುಡಿಯುವ ನೀರಿನ ಸಮಸ್ಯೆ ಅಷ್ಟಿಷ್ಟಲ್ಲ. ಹೀಗಾಗಿ ಕುಡಿಯುವ ನೀರಿನ ಸರಬರಾಜು ಮಾಡುವ ಟ್ಯಾಂಕರ್‍ಗಳಿಗೆ ಏಪ್ರಿಲ್ ತಿಂಗಳವರೆಗಿನ ಬಾಕಿ ಬಿಲ್ ಪಾವತಿಯನ್ನು ಆದಷ್ಟು ಬೇಗನೆ ಮಾಡಲು ತಿಳಿಸಿದ್ದಾರೆ. ಜೊತೆಗೆ 15 ದಿನಗಳಿಗೊಮ್ಮೆ ನೀರಿನ ಬಿಲ್ ಪಾವತಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಅವಧಿ ಮುಗಿದ ನಂತರ ಬಿಲ್ ಸಲ್ಲಿಸಿದರೆ ಆಯಾ ಪಿಡಿಒ, ಇಓಗಳೇ ಹೊಣೆಗಾರರು. ಅಷ್ಟೇ ಅಲ್ಲ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳೋಕೆ ಹಿಂದೆ ಮುಂದೆ ನೋಡೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.