
ಗೊಬ್ಬರ ದರ ಇಳಿಸುವ ಮಾತನಾಡಿದ ಗೌಡ್ರು!
ಸದಾ ಹಸನ್ಮುಖಿ ಸದಾನಂದ ಗೌಡರು ಇದೀಗ ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ. ಹೌದು, ಹೀಗಾಗಿ ರೈತರಿಗೆ ಇನ್ನೂ ಕಡಿಮೆ ದರದಲ್ಲಿ ರಸಗೊಬ್ಬರ ಪೂರೈಕೆ ಮಾಡಬೇಕಾದ ಜವಾಬ್ದಾರಿ ನನ್ನ ಮೇಲಿದೆ ಎಂದು ಹೇಳಿದ್ದಾರೆ. ಅಲ್ಲದೇ ೨೦೨೨ ಕ್ಕೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ನನ್ನ ಮೇಲಿದೆ ಎಂದಿದ್ದಾರೆ.
ಸಚಿವ ಖಾತೆ ಸ್ವೀಕರಿಸಿದ ನಂತರ ಮಾತನಾಡಿದ ಅವರು, ರಸಗೊಬ್ಬರ ದರವನ್ನು ಇಳಿಕೆ ಮಾಡಬೇಕಿದ್ದು, ರಸಗೊಬ್ಬರ ಆಮದು ಕಡಿಮೆ ಮಾಡಿ ದೇಶದಲ್ಲಿ ಉತ್ಪಾದನೆ ಹೆಚ್ಚಾಗುವಂತೆ ಮಾಡಬೇಕಿದೆ ಎಂದು ತಿಳಿಸಿದರು. ಜೊತೆಗೆ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತೇನೆ ಎಂದರು.
ಮುಚ್ಚಿರುವ ರಸಗೊಬ್ಬರ ಕಾರ್ಖಾನೆಗಳ ಪುನಶ್ಚೇತನ, ಮಾಡಬೇಕಿದೆ. ಯೂರಿಯಾ ಕೊರತೆಯನ್ನು ಸರಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಕಳೆದ ಮೋದಿ ಸಂಪುಟದಲ್ಲಿ ದಿವಂಗತ ಅನಂತ್ ಕುಮಾರ ಅವರು ರಾಸಾಯನಿಕ ಹಾಗೂ ರಸಗೊಬ್ಬರ ಸಚಿವರಾಗಿದ್ದರು. ಇದೀಗ ಈ ಖಾತೆ ಸದಾನಂದ ಗೌಡ ಅವರಿಗೆ ನೀಡಲಾಗಿದೆ.