
ಮೈತ್ರಿ ಸಂಪುಟ ವಿಸ್ತರಣೆಗೆ ಡೇಟ್ ಫೈನಲ್!
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇವತ್ತು ಬೀಳುತ್ತೋ ನಾಳೆ ಬೀಳುತ್ತೋ ಅನ್ನೋ ಆತಂಕದಿಂದಲೇ ನಡೆಯುತ್ತಿದೆ. ಸರ್ಕಾರ ಉಳಿಸಿಕೊಳ್ಳೋಕೆ ಪ್ರತಿದಿನ ಹರಸಾಹಸ ನಡೆಯುತ್ತಿವೆ. ಇದರ ಮಧ್ಯೆ ಇದೀಗ ಕೊನೆಗೂ ಸಂಪುಟ ವಿಸ್ತರಣೆ ಮಾಡಲು ದಿನಾಂಕವನ್ನು ಫೈನಲ್ ಮಾಡಿದೆ.
ಹೌದು, ಜೂನ್ 12 ರಂದು ಸಿಎಂ ಕುಮಾರಸ್ವಾಮಿ ಅವರು ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದರಲ್ಲಿ ಇಬ್ಬರು ಪಕ್ಷೇತರ ಶಾಸಕರು ಹಾಗೂ ಒಬ್ಬರು ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ನೀಡಲಾಗುತ್ತದೆ.
ರಾಣೇಬೆನ್ನೂರು ಶಾಸಕ ಆರ್ ಶಂಕರ್ ಮತ್ತು ಮುಳುಬಾಗಿಲು ಶಾಸಕ ನಾಗೇಶ್ ಅವರು ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಖಚಿತಪಟ್ಟಿದೆ. ಇದರ ಜೊತೆಗೆ ಕಾಂಗ್ರೆಸ್ ಕೋಟಾದಲ್ಲಿ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ನಡುವೆ, ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಅವರು ನನಗೆ ಸಚಿವ ಸ್ಥಾನ ಈಗ ಕೊಟ್ಟರೂ ಬೇಡ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.