ಹೂಸ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕದ ಹೂಸ್ಟನ್ ನಲ್ಲಿ ಇಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯ ಬೃಹತ್ 'ಹೌಡಿ ಮೋದಿ' ಕಾರ್ಯಕ್ರಮಕ್ಕಾಗಿ ಭರ್ಜರಿ ಸಿದ್ಧತೆ ಪೂರ್ಣಗೊಂಡಿದ್ದು, ಮೋದಿ ಅವರನ್ನು ಸ್ವಾಗತಿಸಲು ಎಲ್ಲಾ ತಯಾರಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಭಾನುವಾರವಾದ ಇಂದು ಹೂಸ್ಟನ್ ನಲ್ಲಿ ಬೆಳಗ್ಗೆ 10-15ಕ್ಕೆ (ಭಾರತೀಯ ಕಾಲಮಾನ ರಾತ್ರಿ 8-30) ಹೌಡಿ ಮೋದಿ ಕಾರ್ಯಕ್ರಮ ನಡೆಯಲಿದೆ. ಹೂಸ್ಟನ್ ನ ಎ ಆರ್ ಜಿ ಫುಟ್ಬಾಲ್ ಸ್ಟೇಡಿಯಂನಲ್ಲಿ ಹೌಡಿ ಮೋದಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಏನಿದು ಎಂದು ಎಲ್ಲರ ಕುತೂಹಲ ಕೆರಳಿಸಿದೆ.
ಭಾನುವಾರ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸುಮಾರು 50 ಸಾವಿರಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಪಾಲ್ಗೊಳ್ಳಲಿದ್ದಾರೆ ಎಂಬುದು ತಿಳಿದು ಬಂದಿದೆ. ಅದ್ದೂರಿ ಸಮಾವೇಶಕ್ಕಾಗಿ 1,500 ಕಾರ್ಯಕರ್ತರು ತಯಾರಿ ನಡೆಸಿದ್ದರು.
3 ಗಂಟೆಗಳ ಕಾಲ ಕಾರ್ಯಕ್ರಮ:
ಹೂಸ್ಟನ್ ನಲ್ಲಿರುವ ಅತೀ ದೊಡ್ಡದಾದ ಎನ್ ಜಿ ಆರ್ ಮೈದಾನದಲ್ಲಿ ಭಾನುವಾರ ಬೆಳಗ್ಗೆ(ಅಮೆರಿಕ ಕಾಲಮಾನ) 6ಗಂಟೆಗೆ ಗೇಟ್ ಗಳನ್ನು ತೆರೆಯಲಾಗುತ್ತದೆ. ಸುಮಾರು 50 ಸಾವಿರ ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, 10-30ರವರೆಗೆ ಮುಂದುವರಿಯಲಿದೆ. ಈ ಕಾರ್ಯಕ್ರಮ ಹಿಂದಿ, ಇಂಗ್ಲಿಷ್ ಹಾಗೂ ಸ್ಪ್ಯಾನಿಶ್ ಭಾಷೆಗಳಲ್ಲಿ ನೇರ ಪ್ರಸಾರವಾಗಲಿದೆ ಎಂದು ವರದಿ ತಿಳಿಸಿದೆ. ಭಾರತೀಯ ಕಾಲಮಾನ ರಾತ್ರಿ 12-30ರವರೆಗೆ ಹೌಡಿ ಮೋದಿ ಕಾರ್ಯಕ್ರಮ ನಡೆಯಲಿದೆ ಎಂದು ವರದಿ ವಿವರಿಸಿದೆ.
ಸುಮಾರು ಮೂರು ಗಂಟೆಗಳ ಕಾಲ ನಡೆಯಲಿರುವ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಲಿದ್ದಾರೆ ಎಂದು ಈಗಾಗಲೇ ವೈಟ್ ಹೌಸ್ ತಿಳಿಸಿತ್ತು. ಏತನ್ಮಧ್ಯೆ ಹೂಸ್ಟನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಹೌಡಿ ಮೋದಿ ಕಾರ್ಯಕ್ರಮದ ಸಿದ್ಧತೆಗೆ ಶುಕ್ರವಾರ ಭಾರೀ ಮಳೆ ಅಡ್ಡಿಯಾಗಿತ್ತು. ವಿಪರೀತ ಗಾಳಿ ಮಳೆಗೆ ಸಾವು, ನೋವು ಸಂಭವಿಸಿತ್ತು. ಹೀಗಾಗಿ ಟೆಕ್ಸಾಸ್ ನ ಆಗ್ನೇಯ ಪ್ರಾಂತ್ಯದ 13 ಪ್ರದೇಶಗಳಲ್ಲಿ ಅಲ್ಲಿನ ಗವರ್ನರ್ ತುರ್ತುಪರಿಸ್ಥಿತಿ ಘೋಷಿಸಿದ್ದರು.