ಬೆಂಗಳೂರು: ಈಗಾಗಲೇ ಹೆಚ್ಚಾದ ಮಳೆ ಮತ್ತು ನೀರಿನಿಂದ ತತ್ತರಿಸಿರುವ ರಾಜ್ಯಕ್ಕೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅದೇನೆಂದರೆ, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾದ ಪರಿಣಾಮದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇನ್ನೂ ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಾಮಾನ್ಯವಾಗಿ ಸೆಪ್ಟೆಂಬರ್ 1ರ ಬಳಿಕ ಮುಂಗಾರು ಕಡಿಮೆಯಾಗುತ್ತಿತ್ತು. ಆದರೆ ಸೆಪ್ಟೆಂಬರ್ 19 ಬಂದರೂ ಕೂಡ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗುತ್ತಿದೆ. ಆದ್ದರಿಂದ ಇನ್ನು ಭಾರೀ ಮಳೆಯಾಗುವ ಸಂಭವವಿದೆ. ನೆರೆ ರಾಜ್ಯವಾದ ಮಹಾರಾಷ್ಟ್ರದಲ್ಲಿ ಮತ್ತೆ ಭಾರೀ ಮಳೆ ಮುಂದುವರೆದಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾದರೆ ಅದು ಕರ್ನಾಟಕದ ಮೇಲೂ ದುಷ್ಪರಿಣಾಮ ಬೀರಲಿದೆ ಎನ್ನುವುದು ಇತ್ತೀಚಿನ ಪ್ರವಾಹವೇ ಉತ್ತರಿಸುತ್ತದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅತಿ ಜೋರು ಮಳೆಯಿಂದ ಸಂಚಾರ ಅಸ್ತವ್ಯಸ್ತವಾಗಿದೆ. ಒಂದು ಕಡೆ ಪ್ರವಾಹದಿಂದ ಬದುಕೇ ಬೀದಿಗೆ ಬಿದ್ದಿದೆ, ಇತ್ತ ಹೈದರಾಬಾದ್ ಕರ್ನಾಟಕದಲ್ಲಿ ಒಂದೆರಡು ದಿನದ ಮಟ್ಟಿಗೆ ಮಳೆರಾಯ ಮತ್ತೆ ಅಬ್ಬರಿಸೋ ಸಾಧ್ಯತೆ ಇದೆ. ಇವತ್ತು ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯತೆಗಳಿವೆ. ಮಹಾರಾಷ್ಟ್ರ ಮಳೆ ವಿರಾಮದ ನಂತರ ಮತ್ತೆ ಬಂದಿದೆ. ಪುಣೆ, ರಾಯ್‍ಗಢ್, ಮುಂಬೈ ಮತ್ತು ಸತಾರದಲ್ಲಿ ಇವತ್ತಿನ ಮಟ್ಟಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಬೀಡ್, ಔರಂಗಬಾದ್, ಪಾಲ್ಗಾರ್, ಥಾಣೆ, ರತ್ನಗಿರಿ, ಸಿಂಧುದುರ್ಗ ಜಿಲ್ಲೆಯಲ್ಲೂ ಭಾರೀ ಮಳೆ ಆಗುವ ನಿರೀಕ್ಷೆ ಇದೆ. ಕೊಯ್ನಾ ಜಲಾಶಯದ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾದರೆ ಮತ್ತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಪ್ರವಾಹ ಭೀತಿ ಎದುರಾಗಲಿದೆ. ಆದ್ದರಿಂದ ಜನರು ಶೀಘ್ರವಾಗಿ ಎಚ್ಚೆತ್ತುಕೊಳ್ಳಬೇಕಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ತಿನ್ನಲು ಅನ್ನ ವಿಲ್ಲದೆ ಗಂಜಿಯ ಮೊರೆಹೋಗಿದ್ದೇವೆ. ಆದ್ದರಿಂದ ಮತ್ತೇ ಪ್ರವಾಹ ಸ್ಥಿತಿ ನಿರ್ಮಾಣ ವಾದರೆ ಸರ್ಕಾರ ಯಾವ ರೀತಿ ಪ್ರತಿಕ್ರಿಸುತ್ತದೆ ಹಾಗೂ ಜನರಿಗೆ ಯಾವ ರೀತಿ ರಕ್ಷಣೆ ನೀಡುತ್ತದೆ ಎಂಬುದು ಕಾದುನೋಡ ಬೇಕಾಗಿದೆ.