ಚಿದಂಬರಂ ಭೇಟಿಯಾದ ಸೋನಿಯಾ, ಮನಮೋಹನ್ ಸಿಂಗ್

frame ಚಿದಂಬರಂ ಭೇಟಿಯಾದ ಸೋನಿಯಾ, ಮನಮೋಹನ್ ಸಿಂಗ್

somashekhar
ನವದೆಹಲಿ: ಮಾಜಿ ಪ್ರಧಾನಮಂತ್ರಿ, ಆರ್ಥಿಕ ತಜ್ಞರಾದ ಮನಮೋಹನ್ ಸಿಂಗ್ ಹಾಗೂ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಿಹಾರ್ ಜೈಲಿಗೆ ಭೇಟಿ ನೀಡಿದ್ದು ಅಲ್ಲಿ  ಐ.ಎನ್.ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧಿಯಾಗಿರುವ ಮಾಜಿ ಕೇಂದ್ರ ಹಣಕಾಸು ಸಚಿವ ಚಿದಂಬರಂ ಅವರನ್ನು ಭೇಟಿಯಾಗಿ ಮಾತನಾಡಿದ್ದಾರೆ. 

ಆದರೆ ಅದೇ ಜೈಲಿನಲ್ಲಿರುವ ಕಾಂಗ್ರೆಸ್​ ನಾಯಕ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್​ ಹೈ ಕಮಾಂಡ್​ ಭೇಟಿಯಾಗದಿರುವುದು ಇನ್ನಿಲ್ಲದ ಸಂಶಯಗಳಿಗೆ ಅನುವು ಮಾಡಿಕೊಟ್ಟಿದೆ. ಒಂದು ವಾರದ ಹಿಂದೆಯಷ್ಟೇ ಕಾಂಗ್ರೆಸ್​ ನಾಯಕರಾದ ಗುಲಾಂ ನಬೀ ಅಜಾದ್​ ಮತ್ತು ಅಹಮದ್​ ಪಟೇಲ್​ ಮಾಜಿ ಹಣಕಾಸು ಸಚಿವ ಚಿಂದಂಬರಂ ಅವರನ್ನು ಭೇಟಿಯಾಗಿದ್ದರು.

2007ರಲ್ಲಿ ಐಎನ್​ಎಕ್ಸ್​​ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ವಿದೇಶ ನೇರ ಬಂಡವಾಳ ಸ್ವೀಕಾರಕ್ಕೆ ಹಣಕಾಸು ಸಚಿವಾಲಯ ಅನುಮತಿ ನೀಡಿತ್ತು. ಈ ಅನುಮತಿ ನೀಡಿದ 10 ವರ್ಷಗಳ ಬಳಿಕ ಅಂದರೆ 2017ರಲ್ಲಿ ಸಿಬಿಐ ಹಾಗೂ ಇಡಿ ಎರಡೂ ತನಿಖಾ ಸಂಸ್ಥೆಗಳು ಚಿದಂಬರಂ ವಿರುದ್ಧ ಪ್ರಕರಣ ದಾಖಲಿಸಿದ್ದವು. ಐಎನ್​ಎಕ್ಸ್​ ಮೀಡಿಯಾ ಹಗರಣವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್​ 21ರಂದು ಸಿಬಿಐ ಚಿದಂಬರಂ ಅವರನ್ನು ಬಂಧಿಸಿತ್ತು. ಬಳಿಕ ಸೆ. 5ರವರೆಗೂ ಚಿದಂಬರಂ ಸಿಬಿಐ ವಶದಲ್ಲಿದ್ದರು. ಸೆ.5ರಿಂದ ತಿಹಾರ್​ ಜೈಲಿನಲ್ಲಿರುವ ಚಿದಂಬರಂ ಇನ್ನು ಹತ್ತು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಬೇಕಿದೆ. 

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕ ಡಿಕೆ ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈಗ ಡಿಕೆಶಿ ಹಾಗೂ ಪಿ.ಚಿದಂಬರಂ ಇಬ್ಬರೂ ತಿಹಾರ್ ಜೈಲಿನಲ್ಲಿದ್ದಾರೆ. ಸೋನಿಯಾ ಡಿಕೆಶಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಹೈಕಮಾಂಡ್​ ಚಿದಂಬರಂ ಅವರನ್ನಷ್ಟೇ ಭೇಟಿಯಾಗಿದೆ. ಸೋನಿಯಾ ಗಾಂಧಿ ಚಿದಂಬರಂ ಭೇಟಿಗಷ್ಟೇ ಅವಕಾಶ ಕೇಳಿದ್ದರು. ಡಿಕೆಶಿ ಭೇಟಿಗೆ ಅನುಮತಿ ಕೇಳಿಲ್ಲ. ಹೀಗಾಗಿ ಜೈಲು ಅಧಿಕಾರಿಗಳಿಂದ ಚಿದು ಭೇಟಿಗಷ್ಟೇ ಅವಕಾಶ ನೀಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಕಾಂಗ್ರೆಸ್ ಹೈ ಕಮಾಂಡ್​ ಡಿಕೆಶಿ ಮೇಲೆ ಮುನಿಸಿಕೊಂಡಿದೆಯಾ ಎಂಬ ಅನುಮಾನ ಮೂಡಿಸಿದೆ.


Find Out More:

Related Articles:

Unable to Load More