ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕಳೆದ ಚುನಾವಣೆಯಲ್ಲಿ ಸಣ್ಣ ಅಂತರದಲ್ಲಿ ಕೈತಪ್ಪಿಹೋಗಿದ್ದ ಮೇಯರ್ ಪಟ್ಟವನ್ನು ಈ ಬಾರಿ ಗೆದ್ದೇ ತೀರಲು ಬಿಜೆಪಿ ಪಣತೊಟ್ಟಿದೆ. ಗೆಲುವಿಗಾಗಿ ಆಪರೇಷನ್ ಕಮಲಕ್ಕೂ ಕೈಹಾಕಿದೆ. ಮೇಯರ್ ಚುನಾವಣೆ ಗೆಲ್ಲುವ ಸಂಖ್ಯಾಬಲ ಹೊಂದಿಸಲು ಬಿಜೆಪಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಈ ಮೇಯರ್ ಅಭ್ಯರ್ಥಿ ಆಯ್ಕೆಯ ಕಗ್ಗಂಟು ಪಕ್ಷದ ಮುಂದಿದೆ. ಮೂಲಗಳ ಪ್ರಕಾರ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್. ಶ್ರೀನಿವಾಸ್ ಅವರನ್ನು ಮೇಯರ್ ಅಭ್ಯರ್ಥಿಯನ್ನಾಗಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಲ್. ಶ್ರೀನಿವಾಸ್ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಡಿಕೆಶಿ ಬಂಧನದ ವಿಚಾರದಲ್ಲಿ ಬಿಜೆಪಿಗೆ ಒಕ್ಕಲಿಗ ವಿರೋಧಿ ಹಣೆಪಟ್ಟಿ ತಗುಲಿದೆ. ಈ ಆರೋಪದಿಂದ ಮುಕ್ತವಾಗಲು ಹರಸಾಹಸ ಮಾಡುತ್ತಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದೇವನಹಳ್ಳಿ ಏರ್ಪೋರ್ಟ್ನಲ್ಲಿ ಕೆಂಪೇಗೌಡರ ಬೃಹತ್ ಪ್ರತಿಮೆ ನಿರ್ಮಾಣ ಮಾಡುವುದಾಗಿ ಇತ್ತೀಚೆಗೆ ಘೋಷಣೆ ಮಾಡಿದ್ದರು. ಈಗ ಇನ್ನೂ ಒಂದು ಹೆಜ್ಜೆ ಹೋಗಲು ನಿರ್ಧರಿಸಿರುವ ಯಡಿಯೂರಪ್ಪ ಅವರು ಒಕ್ಕಲಿಗ ಸಮುದಾಯದವರಿಗೆ ಬಿಬಿಎಂಪಿ ಮೇಯರ್ ಪಟ್ಟ ಕೊಡಿಸುವ ಪ್ರಯತ್ನ ಮಾಡಲಿದ್ದಾರೆನ್ನಲಾಗಿದೆ.
ಕಳೆದ 16 ವರ್ಷಗಳಿಂದಲೂ ಬೆಂಗಳೂರಿಗೆ ಒಕ್ಕಲಿಗ ಸಮುದಾಯದವರು ಮೇಯರ್ ಆಗಿದ್ದಿಲ್ಲ. ಒಂದು ವೇಳೆ, ಯಡಿಯೂರಪ್ಪ ಅವರು ಒಕ್ಕಲಿಗ ಅಭ್ಯರ್ಥಿಯೊಬ್ಬರನ್ನು ಮೇಯರ್ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದರೆ ಬೆಂಗಳೂರಿನ ಆ ಸಮುದಾಯದ ಅಸಮಾಧಾನವನ್ನು ತಣಿಸುವಲ್ಲಿ ಯಶಸ್ವಿಯಾಗುವ ಸಾಧ್ಯತೆ ಇದೆ. ಯಡಿಯೂರಪ್ಪ ಕೂಡ ಇದೇ ಲೆಕ್ಕಾಚಾರದಲ್ಲಿದ್ದಾರೆ. ಇನ್ನು, ಸೆ. 27ರಂದು ನಡೆಯಬೇಕಿದ್ದ ಮೇಯರ್ ಚುನಾವಣೆಯನ್ನು ಅ. 1ಕ್ಕೆ ಮುಂದೂಡಲಾಗಿದೆ. ಬಹುಮತಕ್ಕೆ ಬೇಕರುವ 129 ಮ್ಯಾಜಿಕ್ ನಂಬರ್ಗೆ ಬಿಜೆಪಿ ತುಸು ಸಮೀಪವಿದೆ.
ಪಕ್ಷೇತರರನ್ನು ಸೆಳೆದುಕೊಂಡು ಬೆಂಬಲ ಗಿಟ್ಟಿಸಿರುವ ಬಿಜೆಪಿಯು ಅನರ್ಹ ಶಾಸಕರ ಬೆಂಬಲಿಗ ಸದಸ್ಯರನ್ನು ಮತದಾನದಿಂದ ದೂರ ಇಟ್ಟು ಮೇಯರ್ ಪಟ್ಟ ಗಿಟ್ಟಿಸುವ ಯೋಜನೆ ಹಾಕಿ ಕೊಂಡಿದ್ದಾರೆ. ಪ್ರಸ್ತುತ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿರುವುದರಿಂದ ಗೆಲ್ಲಲು ಭರ್ಜರಿ ಪ್ಲಾನ್ ನಡೆಸಿದ್ದಾರೆ. ಈ ಬಾರಿ ಗೆಲ್ಲಲೇ ಬೇಕೆಂದು ಪಣ ತೋಟ್ಟಿದ್ದಾರೆ. ಮುಖ್ಯಮಂತ್ರಿ ಆಗಿರುವುದರಿಂದ ಚುನಾವಣೆಯ ಬಿಸಿಯು ಸಹ ಹೆಚ್ಚಾಗಿದೆ.