ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವದ ವೈಭವ ಶುರು

somashekhar
ಮೈಸೂರು: ವಿಜಯದಶಮಿ ಎಂದರೆ ನಮಗೆಲ್ಲಾ ನೆನಪಾಗೋದು ನಾಡಹಬ್ಬ ದಸರಾ. ಅದರಲ್ಲೂ ಜಂಬೂ ಸವಾರಿ. ಇದನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ನಿನ್ನೆಯಷ್ಟೇ ಅಮಾವಾಸ್ಯೆ ಮುಗಿದಿದ್ದು, ಪ್ರಸ್ತುತ ಇಂದಿನಿಂದ  ಹತ್ತು ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ಷರಶಃ ಧಾರ್ಮಿಕ, ಪಾರಂಪರಿಕ, ಸಾಂಸ್ಕೃತಿಕ ಹಾಗೂ ಮನರಂಜನೆ ಪೂರಿತ ವಾತಾವರಣ ನಿರ್ಮಾಣವಾಗಲಿದೆ. ಏಕೆಂದರೆ ಇದೆಲ್ಲಾ ದಸರಾದ ವೈಭವ. 

ಮೈಸೂರು ದಸರಾ ಮಹೋತ್ಸವ ವಿಶ್ವವನ್ನೇ ತನ್ನತ್ತ ಸೆಳೆದುಕೊಂಡು ತನ್ನ ವೈವಿಧ್ಯಮಯವಾದ ಆಚರಣೆಗಳನ್ನು ಜಗತ್ತಿಗೆ ತೋರ್ಪಡಿಸುತ್ತದೆ. ಭಾನುವಾರದಿಂದ ಮೈಸೂರಿನಲ್ಲಿ ದಸರಾ ಮೆರಗು ತುಂಬಿ ತುಳುಕಲಿದೆ. ಈ ಮೆರುಗಿಗೆ ಸಾಹಿತಿ ಎಸ್.ಎಲ್ ಭೈರಪ್ಪ ಅವರು ಇಂದು ಬೆಳಗ್ಗೆ 9.39ರ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿ ಬೆಟ್ಟದಲ್ಲಿ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಚರಣೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

ದಸರಾ ಉದ್ಘಾಟನಾ ಕಾರ್ಯಕ್ರಮ ಭಾನುವಾರ ಚಾಮುಂಡಿ ಬೆಟ್ಟದಲ್ಲಿ ಜರುಗಲಿದ್ದು, ಈಗಾಗಲೇ ಜಿಲ್ಲಾಡಳಿತ  ಸಂಪೂರ್ಣ ಸಿದ್ಧತೆ ನಡೆಸಿದೆ. ಪ್ರಸ್ತುತ ಈ ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಸಂಪುಟದ ಸಚಿವರು, ಸಂಸದರು, ಶಾಸಕರು ಸೇರಿದಂತೆ ಇತರ ಗಣ್ಯರು ಭಾಗವಹಿಸಿ, ಚಾಮುಂಡೇಶ್ವರಿ ತಾಯಿಯ ಆರ್ಶೀವಾದ ಪಡೆಯಲಿದ್ದಾರೆ. 

ಒಂದು ಕಡೆ ಭಾನುವಾರ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ದೊರೆತರೆ, ಇತ್ತ ಮೈಸೂರು ಅಂಬ ವಿಲಾಸ ಅರಮನೆಯಲ್ಲಿ ಯದುವಂಶದ ಅರಸ ಯದುವೀರ ಕೃಷ್ಣದತ್ತ ಒಡೆಯರ್ ಅವರು ಖಾಸಗಿ ದರ್ಬಾರನ್ನು ಪ್ರಾರಂಭಿಸಲಿದ್ದಾರೆ. ಇಷ್ಟೇ ಅಲ್ಲದೆ  ಅರಮನೆಯಲ್ಲಿ ಹಲವು ಪೂಜಾ ಕೈಂಕರ್ಯಗಳು ಸಹ ನಡೆಯಲಿವೆ. ಮತ್ತೊಂದು ಕಡೆ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ನಗರಾದ್ಯಂತ 10 ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಿಗೂ ಸಹ ಆಯಾ ಸ್ಥಳಗಳಲ್ಲಿ ವಿವಿಧ ಗಣ್ಯರಿಂದ ಚಾಲನೆ ನೀಡಲಾಗುತ್ತದೆ.

ಇಂದಿನಿಂದ ಮುಂದಿನ ಹತ್ತು ದಿನಗಳ ಸಾಂಸ್ಕೃತಿಕ ನಗರಿ ಮಲ್ಲಿಗೆ ಬೀಡು ಮೈಸೂರು ಮಧುವಣಗಿತ್ತಿಯಂತೆ ಅಲಂಕಾರಗೊಂಡು, ತನ್ನ ಸಂಸ್ಕೃತಿಯನ್ನು ಬಿತ್ತರಿಸುವ ಮೂಲಕ ಜನರಿಗೆ ಧಾರ್ಮಿಕ, ಪಾರಂಪರೆಯ ಜೊತೆಗೆ ಮನರಂಜನೆಯ ಬೆಳಕನ್ನೂ ಸಹ ಚೆಲ್ಲಲಿದೆ. ದಸರಾ ವೈಭವ ವೀಕ್ಷಿಸಲು ಮೈಸೂರು ಜನರು ಹಾಗೂ ಪ್ರವಾಸಿಗರು ಉತ್ಸುಕತೆಯಿಂದ ಕಾಯುತ್ತಿದ್ದಾರೆ.


Find Out More:

Related Articles: