ಬೆಂಗಳೂರು: ಎಐಸಿಸಿ ಯಿಂದ ವಿರೋಧ ಪಕ್ಷದ ನಾಯಕನಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡುತ್ತಿದ್ದಂತೆಯೇ ಸದನದಲ್ಲಿ ನೆರೆ ವಿಚಾರಕ್ಕಾಗಿ ಕಲಹ ನಡೆಯುವುದು ಪಕ್ಕಾ ಆಗಿತ್ತು. ಎಲ್ಲಾ ಊಹಿಸಿದ್ದಂತೆ ಆಯಿತು, ಆದರೆ ಈಶ್ವರಪ್ಪ ಸಿದ್ದು ವಾಕ್ಸಮರ ತಾರಕಕ್ಕೇರಿತ್ತು. ಬರ ಪರಿಹಾರ ವಿಚಾರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ನಡುವೆ ಕಾವೇರಿದ ವಾಕ್ಸಮರಕ್ಕೆ ಶುಕ್ರವಾರದ ಸದನ ಸಾಕ್ಷಿಯಾಯಿತು.
'ಹತ್ತು ಸಾವಿರ ಕೊಟ್ಟಿಲ್ವಾ, ಅದೇ ಜಾಸ್ತಿ ಎಂದು ಈಶ್ವರಪ್ಪ ಹೇಳುತ್ತಾರೆ" ಎನ್ನುವ ಸಿದ್ದರಾಮಯ್ಯನವರ ಮಾತಿಗೆ ಈಶ್ವರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 'ನೀವು ನನ್ನ ಹೆಸರನ್ನು ಹೇಳಿದ್ದೀರಾ, ಹಾಗಾಗಿ ಅದಕ್ಕೆ ನಾನು ಉತ್ತರ ಕೊಡಬೇಕು. ಕೂತ್ಕೊಳ್ರೀ ಒಂದು ನಿಮಿಷ" ಎಂದು ಈಶ್ವರಪ್ಪ ಮಾತಿಗಿಳಿದರು. "ನಿಮ್ಮದೇನು ಪ್ರಜಾಪ್ರಭುತ್ವ ವ್ಯವಸ್ಥೆನಾ, ಮಾನವೀಯತೆನಾ, ಇದು ರಾಕ್ಷಸೀ ಪ್ರವೃತ್ತಿ" ಎಂದು ಈಶ್ವರಪ್ಪ ಕಿಡಿಕಾರಿದರು. "ಇದ್ಯಾವುದೂ ನಾನು ಹೇಳಿದ ಹೇಳಿಕೆಯಲ್ಲ. ಎಲ್ಲಾ ಪತ್ರಿಕೆಗಳಲ್ಲಿ ಬಂದಿದೆ" ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
"ಎರಡು ತಿಂಗಳಿನಿಂದ ಗುದ್ದಾಡಿ, ಸೋನಿಯಾ ಗಾಂಧಿ ಮನೆಬಾಗಿಲಿಗೂ ಬರಲು ಅವಕಾಶ ನೀಡದಿದ್ದಾಗ, ವಿರೋಧ ಪಕ್ಷದ ನಾಯಕರಾದವರು ನೀವು. ನಾಚಿಕೆಯಾಗಬೇಕು ನಿಮಗೆ" ಎಂದು ಈಶ್ವರಪ್ಪ ಲೇವಡಿ ಮಾಡಿದರು. ಈಶ್ವರಪ್ಪನವರ ಈ ಹೇಳಿಕೆ, ಸದನದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು. "ಉಪಮುಖ್ಯಮಂತ್ರಿಯಾದವರು ನೀವು ಈಗ ಸಚಿವರಾಗಿದ್ದೀರಿ. ನಿಮ್ಮ ಮುಂದೆಯೇ ಬೇರೆ ಇಬ್ಬರು ಡಿಸಿಎಂ ಆದರು. ನಾಚಿಕೆ ನಿಮಗೆ ಆಗಬೇಕು. ನಾನಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿದೆ. ನನಗೆ ಹೇಳುವ ನಿಮಗೆ, ಮೋದಿ ಎದುರು ಹೋಗುವ ಧೈರ್ಯವಿದೆಯಾ" ಎಂದು ಸಿದ್ದರಾಮಯ್ಯ ಮತ್ತೇ ತಿರುಗೇಟು ನೀಡಿದರು.
"ನಿಮ್ಮ ನಾಯಕತ್ವದಲ್ಲಿ ಕಾಂಗ್ರೆಸ್ ಸರಕಾರ ಉರುಳಿತು. 78ಸ್ಥಾನಕ್ಕೆ ಪಕ್ಷವನ್ನು ಇಳಿಸಿದ್ರಿ. ಇನ್ನೇನು ಉಳಿದಿದೆ ನಿಮಗೆ, ಕೂತ್ಕೊಳ್ರೀ ಸುಮ್ಮನೆ" ಎಂದು ಈಶ್ವರಪ್ಪ ಸಿಟ್ಟಿನ ಮಾತನ್ನು ನುಡಿದರು.
ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, " ಅದು ನಮ್ಮ ಪಕ್ಷದ ಸಮಸ್ಯೆ, ನಿಮಗ್ಯಾಕ್ರೀ ಅದು. ನಮ್ಮ ಪಕ್ಷದ ತೀರ್ಮಾನ, ನೀವ್ಯಾರು ಅದನ್ನು ಕೇಳೋಕೆ" ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.