ಮೈಸೂರು: ಸಮ್ಮಿಶ್ರ ಸರ್ಕಾರ ಉರುಳಿಸಿದ ಅತೃಪ್ತ ಅನರ್ಹ ಶಾಸಕರ ಬೇಡಿಕೆಗಳು ದಿನಕಳೆದಂತೆ ಹೆಚ್ಚುತ್ತಿವೆ. ದಿನಕ್ಕೊಂದು ಹೊಸ ರೀತಿಯ ಬೇಡಿಕೆಗಳನ್ನು ಹಿಡುತ್ತಿದ್ತಾರೆ. ರಾಜ್ಯವನ್ನೇ ಹೊಡೆಯಲು ಮುಂದಾಗಿರುವುದು ವಿಷಾದನೀಯ. ಕಳೆದೊಂದು ತಿಂಗಳ ಹಿಂದೆ ವಿಜಯನಗರ ಕ್ಷೇತ್ರದ ಮಾಜಿ ಶಾಸಕ ಆನಂದ್ ಸಿಂಗ್ ಹೊಸಪೇಟೆ ಪ್ರತ್ಯೇಕ ಜಿಲ್ಲೆ ಮಾಡಬೇಕೆಂದು ಆಗ್ರಿಹಿಸಿದ್ದರು. ಇದೀಗ ಮೈಸೂರನ್ನು ಹೊಡೆದು ಹೊಸ ಜಿಲ್ಲೆ ಮಾಡಬೇಕೆಂದು ಹುಣಸೂರು ಮಾಜಿ ಶಾಸಕ ಹೆಚ್. ವಿಶ್ವನಾಥ್ ಆಗ್ರಹಿಸಿದ್ದಾರೆ.
ಹೊಸ ಜಿಲ್ಲೆಗೆ ಹೊಸ ಹೆಸರು ಇಡುವಂತೆ ಸರ್ಕಾರಕ್ಕೆ ಒತ್ತಾಯಿಸಿರುವ ಮತ್ತೊಬ್ಬ ಅತೃಪ್ತ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಮೈಸೂರನ್ನು ಇಬ್ಭಾಗ ಮಾಡಬೇಕೆಂದು ಸರ್ಕಾರದ ಮುಂದೆ ಬೇಡಿಕೆಯಿಟ್ಟಿದ್ದಾರೆ. ಹುಣಸೂರು ತಾಲ್ಲೂಕನ್ನು ಜಿಲ್ಲೆಯಾಗಿ ಘೋಷಿಸಬೇಕೆಂದು ಆಗ್ರಹಿಸಿರುವ ಅವರು, ಹೊಸ ಜಿಲ್ಲೆಗೆ ಡಿ. ದೇವರಾಜ ಅರಸ್ ಜಿಲ್ಲೆ ಎಂದು ಹೆಸರಿಡಬೇಕೆಂದು ಮನವಿ ಮಾಡಿದ್ದಾರೆ. ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಹೆಚ್.ಡಿ. ಕೋಟೆ ಜೊತೆ ಹೊಸ ತಾಲ್ಲೂಕು ಸರಗೂರು ಹಾಗೂ ಸಾಲಿಗ್ರಾಮ ಸೇರಿಸಿ ಒಂದು ಜಿಲ್ಲೆ ಮಾಡಿ ಎಂದು ಮೈಸೂರಿನಲ್ಲಿ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಆಗ್ರಹ ಮಾಡಿದ್ದಾರೆ. ಈ ಪ್ರಸ್ತಾವನೆಯನ್ನ ಸರ್ಕಾರದ ಮುಂದೆ ಇಡುತ್ತೇವೆ.
ಪ್ರತ್ಯೇಕ ಜಿಲ್ಲೆಗೆ ಒಂದು ಹೋರಾಟ ಸಮಿತಿ ರಚಿಸಿ ಹೋರಾಟ ಮಾಡುತ್ತೇವೆ. ಡಿ. ದೇವರಾಜ ಅರಸ್ ಹೆಸರು ಅಜರಾಮರವಾಗಿ ಉಳಿಯಬೇಕು. ರಾಜ್ಯ, ದೇಶಕ್ಕೆ ಅವರ ಕೊಡುಗೆ ಅಪಾರ. ಹುಣಸೂರು ಜಿಲ್ಲೆಯಾದರೆ ಅವರ ಹೆಸರಿಡುವುದರಿಂದ ಅರಸು ಅವರ ಗೌರವ ಇನ್ನಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ 4 ತಾಲ್ಲೂಕುಗಳನ್ನ ದೇವರಾಜ ಅರಸು ಜಿಲ್ಲೆಗೆ ಸೇರಿಸಿ. ಹುಣಸೂರನ್ನೇ ಕೇಂದ್ರವಾಗಿಟ್ಟುಕೊಂಡು ಒಂದು ಜಿಲ್ಲೆಯನ್ನಾಗಿ ಘೋಷಣೆ ಮಾಡಿ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳು ಒಪ್ಪುವ ವಿಶ್ವಾಸ ಇದೆ. ದೇವರಾಜ ಅರಸು ಅವರನ್ನು ವಿರೋಧಿಸುವ ಜನರು ಯಾರೂ ಇಲ್ಲ.ಅವರಿಗೆ ಸಲ್ಲುವ ಗೌರವದ ಪ್ರತೀಕ. ಇದರಿಂದ ಪ್ರವಾಸೋದ್ಯಮವೂ ಅಭಿವೃದ್ದಿಯಾಗಲಿದೆ. ಉಪಚುನಾವಣೆಗೂ ಪ್ರತ್ಯೇಕ ಜಿಲ್ಲೆಗೆ ಸಂಬಂಧ ಇಲ್ಲ. ಬಳ್ಳಾರಿ ವಿಚಾರಕ್ಕೂ ನಮಗೂ ಸಂಬಂಧ ಇಲ್ಲ. ಆದರೆ, ಹುಣಸೂರು ತಾಲ್ಲೂಕು ಡಿ. ದೇವರಾಜ ಅರಸು ಜಿಲ್ಲೆಯಾಗಬೇಕು ಎಂದು ಹೇಳಿದ್ದಾರೆ.