ರಾಜ್ಯಪಾಲರನ್ನೂ ಭೇಟಿ ಮಾಡಲೆಬೇಕೆಂದ ರೈತರು. ಯಾಕೆ ಗೊತ್ತಾ!?

somashekhar
ಬೆಂಗಳೂರು: ದಿನ ಕಳೆದಂತೆ ರಾಜಧಾನಿ ಬೆಂಗಳೂರಿನಲ್ಲಿ ರೈತರ ಕೂಗು ಹೆಚ್ಚಾಗುತ್ತಿದೆ. ಆದರೂ ಸಹ ಕಣ್ಣಿದ್ದು ಕುರುಡ ರಂತೆ ಸರ್ಕಾರ ವರ್ತಿಸುತ್ತಿದೆ. ಮಹದಾಯಿ ಯೋಜನೆಯ ಅಧಿಸೂಚನೆ ಹೊರಡಿಸಲು ಆಗ್ರಹಿಸಿ ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ನಡೆಸುತ್ತಿರುವ ಹೋರಾಟ ಶನಿವಾರವೂ ಮುಂದುವರಿದಿದ್ದು ರಾಜ್ಯಪಾಲರ ಭೇಟಿಗೆ ಅವಕಾಶ ಕೊಡಿಸುವಂತೆ ಪಟ್ಟು ಹಿಡಿದಿದ್ದಾರೆ.

ರಾಜ್ಯಪಾಲರ ಜತೆ ಚರ್ಚಿಸಲು ಅವಕಾಶ ನೀಡದ ಕಾರಣ ಅಹೋರಾತ್ರಿ ಧರಣಿ ಮುಂದುವರಿಸಿರುವ ರೈತರ ಪ್ರತಿಭಟನೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ರೈತರು ನೀಡಿರುವ ಅಂತಿಮ ಗಡುವಿನ ಪ್ರಕಾರ ಡಿಸಿಎಂ ಕಾರಜೋಳ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿಯಾಗಿದ್ದಾರೆ. ಮನವಿ ಪತ್ರವನ್ನು ನಮಗೆ ಕೊಡಿ, ನಾವು ರಾಜ್ಯಪಾಲರಿಗೆ ತಲುಪಿಸುತ್ತೇವೆ ಎಂಬ ಡಿಸಿಎಂ ಕಾರಜೋಳ ಅವರ ಮನವಿಯನ್ನು ರೈತರು ನಿರಾಕರಿಸಿದ್ದು, ತಮಗೆ ಖುದ್ದು ಭೇಟಿ ಮಾಡಲು ಅವಕಾಶ ಮಾಡಿಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಅವರನ್ನು ನಾವು ಭೇಟಿಯಾಗಿಲೇ ಬೇಕು, ಅವರನ್ನು ಭೇಟಿಯಾಗಿಯೇ ನಾವು ಹೋಗುತ್ತೇವೆ ಎಂಬ ಪಟ್ಟು ಹಿಡಿದಿದ್ದಾರೆ. 

ರಾಜಧಾನಿ ಯಲ್ಲಿ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ ಮಹದಾಯಿಗಾಗಿ ರೈತರು ಧರಣಿಯನ್ನು ಮುಂದುವರಿಸಿದ್ದಾರೆ. ಮಹದಾಯಿ ವಿಚಾರದಲ್ಲಿ ರಾಷ್ಟ್ರಪತಿ, ರಾಜ್ಯ ಪಾಲರು ಮಧ್ಯಪ್ರವೇಶಿಸ ಬೇಕೆಂದು ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಡಿಸಿಎಂ ಗೋವಿಂದ ಕಾರಜೋಳ ಅವರು ಮನವೊಲಿಸಲು ನಡೆಸಿದ ಸಂಧಾನ ವಿಫಲವಾಗಿದೆ. ರಾಜ್ಯಪಾಲರ ಭೇಟಿಗೆ ಅವಕಾಶ ಕೊಡಿಸುವಂತೆ ರೈತರು ಪಟ್ಟು ಹಿಡಿದಾಗ, ಕಾರಜೋಳ ಅವರು ರಾಜ್ಯಪಾಲರ ಕಾರ್ಯದರ್ಶಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಆದರೆ ರಾಜ್ಯಪಾಲರ ಭವನದಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದನ್ನು ಗಮನಿಸಿದ ಗೋವಿಂದ ಕಾರಜೋಳ ಅವರು ಪ್ರತಿಭಟನಾ ಸ್ಥಳದಿಂದ ಹಿಂತಿರುಗಿದ್ದಾರೆ. 

ರೈತರ ಆಕ್ರೋಶಕ್ಕೆ ಇದೀಗ ಸರ್ಕಾರ ಗುರಿಯಾಗಿದೆ. ರೈತರು ನೀರಿಗಾಗಿ ಹಗಲೆನ್ನದೆ, ಇರುಳೆನ್ನದೇ ಮಳೆಯನ್ನದೇ  ಪ್ರತಿಭಟನೆ ನಡೆಸುತ್ತಿದ್ದಾರೆ.  ಆದರೆ ಸರ್ಕಾರ ಪ್ರತಿಕ್ರಿಯಿಸದಿರುವುದು ರೈತರು ಸರ್ಕಾರದ ವಿರುದ್ಧ ಫುಲ್ ಗರಂ ಆಗಿದ್ದಾರೆ. 


Find Out More:

Related Articles: