ಬೆಂಗಳೂರು: ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಯಡಿಯೂರಪ್ಪ ನವರೇ ಇತ್ತೀಚೆಗಷ್ಟೇ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಹೇಳಿಕೆ ನೀಡಿದ್ದರು. ಇದೀಗ ತೆರಿಗೆ ವಂಚನೆ ಆಗುತ್ತಿರುವ ಕುರಿತು ಹೊಸದೊಂದು ಐಡಿಯಾ ಕೊಟ್ಟಿದ್ದಾರಂತೆ. ಇದರಿಂದ ಭಾರೀ ಪ್ರಮಾಣದ ಆದಾಯ ತೆರಿಗೆ ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆಂದು ತಿಳಿಸಿದ್ದಾರೆ. ಹಾಗಾದರೆ ಏನದು ಐಡಿಯಾ.
ಕರ್ನಾಟಕದಲ್ಲಿ ಆದಾಯ ತೆರಿಗೆ ಸಂಗ್ರಹ ಬೆಳವಣಿಗೆ ದರ ಶೇ.10.3ರಷ್ಟಿದ್ದು, ಈವರೆಗೆ ವಾರ್ಷಿಕ ಗುರಿಯ ಶೇ.56.3ತೆರಿಗೆ ಸಂಗ್ರಹವಾಗಿದೆ. ತೆರಿಗೆ ವಂಚನೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಜತೆಗೆ ಹೆಚ್ಚು ತೆರಿಗೆ ಆದಾಯ ಸಂಗ್ರಹಕ್ಕೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಗೃಹ ಕಚೇರಿ “ಕೃಷ್ಣಾ’ದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಜಿಎಸ್ಟಿ ಹಾಗೂ ಇತರೆ ತೆರಿಗೆ ಸಂಗ್ರಹ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿ, ವಾಣಿಜ್ಯ ತೆರಿಗೆ ಮೂಲದಿಂದ ಪ್ರಸಕ್ತ ವರ್ಷದಲ್ಲಿ 76,046ಕೋಟಿ ರೂ. ತೆರಿಗೆ ಸಂಗ್ರಹ ಗುರಿಯಿದ್ದು, ಈವರೆಗೆ 42,823ಕೋಟಿ ರೂ. ಸಂಗ್ರಹವಾಗಿದೆ. ಒಟ್ಟಾರೆ ತೆರಿಗೆ ಸಂಗ್ರಹ ಬೆಳವಣಿಗೆ ದರ ಶೇ.10.3ರಷ್ಟಿದ್ದು, ವಾರ್ಷಿಕ ಗುರಿಯ ಶೇ.56.3ತೆರಿಗೆ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.
ಜಿಎಸ್ಟಿ ಮೂಲ ಒಂದರಿಂದಲೇ 33,060ಕೋಟಿ ರೂ. ಸಂಗ್ರಹವಾಗಿದ್ದು, ಜಿಎಸ್ಟಿ ಬೆಳವಣಿಗೆ ದರ ಶೇ.12.2ರಷ್ಟಿದೆ ಎಂದರು. ಇದೇ ವೇಳೆ ಅಧಿಕಾರಿಗಳು, ರಾಜ್ಯದಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ 9592 ವ್ಯಾಪಾರ- ವಹಿವಾಟು ಸಂಸ್ಥೆಗಳಲ್ಲಿ ಪರಿಶೀಲನೆ ನಡೆಸಿ 465.3 ಕೋಟಿ ರೂ. ಸಂಗ್ರಹಿಸಲಾಗಿದೆ. ತೆರಿಗೆಯನ್ನು ಸರಿಯಾಗಿ ಪಾವತಿಸದ 74,598ನೋಂದಣಿ ರದ್ದುಪಡಿಸಲಾಗಿದೆ. 1,08,315 ಆಡಿಟ್ ಪ್ರಕರಣಗಳಲ್ಲಿ 833.07 ಕೋಟಿ ರೂ. ಸಂಗ್ರಹ ಮಾಡಲಾಗಿದೆ.
ವರ್ತಕರ ನೋಂದಣಿಗೆ ಸಂಬಂಧಪಟ್ಟಂತೆ 8942 ತಪಾಸಣೆ ಕೈಗೊಳ್ಳಲಾಗಿದ್ದು, 463 ನಕಲಿ ನೋಂದಣಿ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಪ್ರಕರಣ ಸಂಬಂಧ 9 ಮಂದಿಯನ್ನು ಬಂಧಿಸಲಾಗಿದೆ. ದೇಶದಲ್ಲಿ ಜಿಎಸ್ಟಿ ಸಂಗ್ರಹದ ಒಟ್ಟು ಸರಾಸರಿಗಿಂತ ಕರ್ನಾಟಕದ ತೆರಿಗೆ ಸಂಗ್ರಹ ಸರಾಸರಿ ಅಧಿಕವಾಗಿದೆ. ದೇಶದ ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ರಾಜ್ಯದ ಕೊಡುಗೆ ಶೇ.9.55ರಷ್ಟಿದ್ದು, ಎರಡನೇ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.