ಬಿಜೆಪಿ ಜೊತೆ ಜೆಡಿಎಸ್ ಒಳ ಒಪ್ಪಂದ, ಸಿದ್ದರಾಮಯ್ಯ ಹೊಸ ಬಾಂಬ್

somashekhar

ವಿಜಯಪುರ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬಿಡುತ್ತದೆ ಎಂದು ಬಿಜೆಪಿ ಜೊತೆಗೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.  ಕಾಂಗ್ರೆಸ್‌ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ರಚಿಸುವಾಗ ಖರ್ಗೆಗೆ ಸಿಎಂ ಸ್ಥಾನ ನೀಡಲು ನಾನು ವಿರೋಧಿಸಿರಲಿಲ್ಲ. ದೇವೇಗೌಡರು ಏಕೆ ಹಾಗೆ ಹೇಳುತ್ತಿದ್ದಾರೋ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರದ ಬಗ್ಗೆ ಒಪ್ಪಂದ ಮಾಡಿಕೊಳ್ಳುವಾಗ ನಾನು ಆ ಸಭೆಯಲ್ಲಿ ಇರಲಿಲ್ಲ. 

ನಮ್ಮ ಹೈಕಮಾಂಡ್‌ ಸೂಚನೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಜೊತೆ ಸರ್ಕಾರ ರಚನೆಗೆ ಒಪ್ಪಿದ್ದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ 15 ಸ್ಥಾನ ಗೆಲ್ಲುತ್ತದೆ ಎಂದು ನಾನು ಹೇಳಿಲ್ಲ, 12 ಸ್ಥಾನ ಗೆಲ್ಲುವುದಾಗಿ ಹೇಳಿದ್ದೇನೆ. ಆದರೆ, ದೇವೇಗೌಡರು ಏಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಬಿಜೆಪಿ ಜತೆ ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿರುವ ಶಂಕೆ ಇದೆ ಎಂದು ವಿವರಿಸಿದ್ದಾರೆ. 

ಉಪ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪಟ್ಟಿ ಮಾಡಿದ್ದು, ಬಾಕಿ ಉಳಿದಿರುವ 7 ಕ್ಷೇತ್ರಗಳಿಗೆ ಶೀಘ್ರದಲ್ಲಿಯೇ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಯಾವುದೇ ಮುಖಂಡರೊಂದಿಗೆ ಮನಸ್ತಾಪ ಉಂಟಾಗಿಲ್ಲ. ಮಾಧ್ಯಮಗಳಲ್ಲಿ ಬಂದ ಸುದ್ದಿ ಶುದ್ಧ ಸುಳ್ಳು. ನಾವು “ಆಪರೇಷನ್‌ ಹಸ್ತ’ ಮಾಡಲ್ಲ. ಸಚಿವ ಸಿ.ಟಿ.ರವಿಯವರು ಮೊದಲು ಬಿಜೆಪಿ ಬಿಟ್ಟು ಬರುವವರನ್ನು ತಡೆಯಲಿ. ಬಿಜೆಪಿ ಬಳಿ ದುಡ್ಡಿದೆ, ಹೀಗಾಗಿ, ಅನೈತಿಕ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. 

“ನಾನು ರಾಜ್ಯಾದ್ಯಂತ ಪ್ರವಾಸ ಮಾಡುವಾಗ ಜನರೇ ರಾಜ್ಯದ ಬಿಜೆಪಿ ಸರ್ಕಾರದ ಬಗ್ಗೆ ಟೀಕಿಸುತ್ತಿರುವುದು ಕಂಡು ಬರುತ್ತಿದೆ. ಯಾವ ನಿಬಂಧನೆ ಇಲ್ಲದೇ ರೈತರು ಮಾಡಿದ 50 ಸಾವಿರ ರೂ.ವರೆಗಿನ ಸಹಕಾರಿ ಸಾಲ ಮನ್ನಾ ಮಾಡಿದ್ದೀರಿ. ಹೀಗಾಗಿ, ಮತ್ತೆ ಕಾಂಗ್ರೆಸ್‌ ಗೆದ್ದು ನೀವು ಸಿಎಂ ಆಗಬೇಕು ಎನ್ನುತ್ತಿದ್ದಾರೆ’ ಎಂದರು.
ಆದರೂ, ಬಿಜೆಪಿ ವಾಮಮಾರ್ಗದಲ್ಲಿ ಅಧಿಕಾರಕ್ಕೇರಿದೆ ಎಂದು ಆರೋಪಿಸಿದರು. ಯಡಿಯೂರಪ್ಪ ಹೇಳುತ್ತಾರಷ್ಟೇ ಕೆಲಸ ಮಾಡಿ ತೋರಿಸುವುದಿಲ್ಲ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. 

Find Out More:

Related Articles: