ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಠಾಧೀಶರು ಹೇಳಿದ್ದೇನು?

Soma shekhar
 
ಕಲಬುರಗಿ: ಪೌರತ್ವ ತಿದ್ದುಪಡಿಯ ವಿಚಾರವಾಗಿ ಕಳೆದ 10 ದಿನಗಳಿಂದ ರಾಷ್ಟ್ರವ್ಯಾಪಿ ಹಲವಾರು ಪ್ರಮುಖ ವಿಶ್ವವಿದ್ಯಾಲಯಗಳು, ಕಾಂಗ್ರೇಸ್ ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳು, ಪ್ರಮುಖ ನಾಯಕರು ಉಗ್ರ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಇದೀಗ ಕಲಬುರಗಿ ಜಿಲ್ಲೆಯ ವಿವಿಧ ಮಠಾಧೀಶರು ಪೌರತ್ವ ತಿದ್ದುಪಡಿಯ ಬಗ್ಗೆ ಏನೆಂದು ಪ್ರತಿಕ್ರಿಯಿಸಿ ದ್ದಾರೆ ಗೊತ್ತಾ! 
 
ನಗರದಲ್ಲಿ ಬುಧವಾರ ಕರೆದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಂದೋಲದ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ, ದೇಶದ ಸುರಕ್ಷತೆ, ಭದ್ರತೆ ಹಾಗೂ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿನ ಹಿಂದೂಗಳು ಸೇರಿ ಅಲ್ಪಸಂಖ್ಯಾತರ ಹಿತರಕ್ಷಣೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಸಹಕಾರಿಯಾಗಿದೆ. ಇಂತಹ ಕಾಯ್ದೆ ಜಾರಿಗೆ ತಂದ ಕೇಂದ್ರ ಸರ್ಕಾರ ಕ್ರಮ ಸ್ವಾಗತಾರ್ಹವಾಗಿದೆ, ಇದನ್ನು ಯಾವುದೇ ಕಾರಣಕ್ಕೂ ಹಿಂಪಡೆಯಬಾರದು ಎಂದಿದ್ದಾರೆ. 
 
ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರು ಮತಾಂಧ ಸಂಘಟನೆಗಳು. ವಿಶ್ವವಿದ್ಯಾಲಯಗಳಲ್ಲಿ‌ ವಿದ್ಯಾರ್ಥಿಗಳ ಪ್ರತಿಭಟನೆಗೆ ವಿರೋಧ ಪಕ್ಷಗಳ ಬೆಂಬಲ‌ ಇದೆ. ಗಲಭೆಗಳ ಹಿಂದೆ ಪಾಕಿಸ್ತಾನದ ಕುತಂತ್ರ ಅಡಗಿದೆ ಎಂದು ದೂರಿದರು. ಈ ದೇಶದ ಅನ್ನ, ನೀರು ಸೇವಿಸುವವರು ದೇಶದ ಸಂವಿಧಾನಕ್ಕೂ ಬದ್ಧರಾಗಿರಬೇಕು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅನಾಗರಿಕರಲ್ಲ.‌ ಹಿಂಸಾಚಾರಕ್ಕೆ ವಿದ್ಯಾರ್ಥಿಗಳು ಅವಕಾಶ ಮಾಡಿ ಕೊಡಬಾರದು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರಗಳು ನಡೆಯುತ್ತಿವೆ. ಇಂತಹ ಕೆಲಸ ಮತಾಂಧ ಸಂಘಟನೆಗಳು ‌ಮಾಡುತ್ತಲೇ ಬರುತ್ತಿವೆ, ಅದು ತಪ್ಪು ಎಂದು ಕಿಡಿಕಾರಿದ್ದಾರೆ. 
 
ಈ ಹಿಂದೆ ತ್ರಿವಳಿ ತಲಾಖ್ ರದ್ದು ‌ ಮತ್ತು ಅಯೋಧ್ಯೆ ವಿಚಾರದಲ್ಲಿ ಗಲಭೆ ಎಬ್ಬಿಸುವುದಕ್ಕೆ ಪ್ರಯತ್ನ ‌ಪಟ್ಟಿದ್ದರೂ, ಅದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಪೌರತ್ವ ಕಾಯ್ದೆ ವಿಚಾರವನ್ನು ಇಟ್ಟುಕೊಂಡು ಗಲಭೆ, ಹಿಂಸಾಚಾರಕ್ಕೆ ಮುಂದಾಗಿವೆ. ಮೋದಿ ಸರ್ಕಾರವನ್ನು ವಿರೋಧಿಸುವ ಭರದಲ್ಲಿ ವಿಪಕ್ಷಗಳು ಮತ್ತು ಮತಾಂಧ ವಿಶ್ವವಿದ್ಯಾಲಯಗಳು ಕುತಂತ್ರದಲ್ಲಿ ತೊಡಗಿವೆ. ಕಾಶ್ಮೀರದಲ್ಲಿ ನಡೆಯುತ್ತಿದ್ದ ಗಲಾಟೆಗಳನ್ನು ಈಗ ದೆಹಲಿಯಲ್ಲಿ ಮಾಡಲು ಹೊರಟಿವೆ. ಇದಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಮಣಿಯಬಾರದು ಎಂದು ಒತ್ತಾಯಿಸಿದರು. ಪೌರತ್ವ ಕಾಯ್ದೆ ಉಪಯುಕ್ತವಾಗಿದೆ ಜನರು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

Find Out More:

Related Articles: