ರಾಮ ಮಂದಿರ ನಿರ್ಮಾಣ ಆಗುವವರೆಗೂ ಶ್ರೀಗಳಿಗೆ ಏನು ಅಗುವುದಿಲ್ಲ

Soma shekhar
   
ಕರುನಾಡಿನ ಹಿರಿಯ ಹಾಗೂ ಖ್ಯಾತ ಸಂತರಾದ ಪೇಜಾವರ ಶ್ರೀಗಳ ಆರೋಗ್ಯ ಸುಧಾರಣೆಗೆ ರಾಜ್ಯದೆಲ್ಲೆಡೆ ಪ್ರಾರ್ಥನೆ , ಹೋಮ ಹವನಗಳು ನಡೆಯುತ್ತಲೇ ಇವೆ. ಇನ್ನೊಂದೆಡೆ ಶ್ರೀಗಳನ್ನು ಭೇಟಿ ಮಾಡಲು ನಾಡಿನಾದ್ಯಂತ ಇರೋ ಮಠಾಧೀಶರು , ಗಣ್ಯರು ಆಸ್ಪತ್ರೆಯತ್ತ ಧಾವಿಸಿ ಬರುತ್ತಿದ್ದಾರೆ. ಶನಿವಾರ  ಬೆಳಿಗ್ಗೆ 11ಕ್ಕೆ ಕೆ.ಎಂ.ಸಿ ಆಸ್ಪತ್ರೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದೆ. ಅದರ ಪ್ರಕಾರ ಶ್ರೀಗಳಿಗೆ ವೆಂಟಿಲೇಟರ್ ಮೂಲಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ. 
 
ಚಿಕಿತ್ಸೆಗೆ ಸ್ವಾಮೀಜಿ ಸ್ಪಂದನೆ ಮಾಡುತ್ತಿದ್ದಾರೆ. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೆ ಎಂದು ಪ್ರಕಟಣೆ ತಿಳಿಸಿದೆ. ಮೂರು ಗಂಟೆ ವೇಳೆಗೆ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಸ್ವಾಮೀಜಿಯ ಆರೋಗ್ಯ ವಿಚಾರಿಸಿದರು. ರಾಮಮಂದಿರ ಹೋರಾಟದಲ್ಲಿ ನಾನೂ ಕೂಡಾ ಶ್ರೀಗಳ ಜೊತೆ ಭಾಗವಹಿಸಿದ್ದೆ. ರಾಮಮಂದಿರ ನಿರ್ಮಾಣದವರೆಗೂ ಸ್ವಾಮೀಜಿ ಬದುಕಿರಬೇಕು ಎಂದು ಆಶಿಸಿದರು. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ರಾಮಮಂದಿರ ನಿರ್ಮಾಣ ಆಗುವವರೆಗೂ ಶ್ರೀಗಳಿಗೆ ಏನು ಆಗುವುದಿಲ್ಲ ಎಂದು ಹೇಳಿದರು. 
 
ಇನ್ನು ಸ್ವಾಮೀಜಿಗಳ ಶಿಷ್ಯೆ ನೀರಾ ರಾಡಿಯಾ ವೈದ್ಯರ ಜೊತೆ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ಸುಧಾರಣೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸಾಧ್ವಿ ಉಮಾಭಾರತಿ ಮತ್ತು ಅಮಿತ್ ಶಾ ಇಂದು ಕೆ.ಎಂ.ಸಿ ಆಸ್ಪತ್ರೆಗೆ ಭೇಟಿ ನೀಡುವ ಕಾರ್ಯಕ್ರಮವೂ ಇತ್ತು. ಆದರೆ ಮಂಗಳೂರಿನಲ್ಲಿ ಕರ್ಪ್ಯೂ ಹಿನ್ನೆಲೆಯಲ್ಲಿ ಇವರೆಲ್ಲರ ಭೇಟಿ ರದ್ದಾಗಿದೆ ಅಂತ ಶ್ರೀಗಳ ಆಪ್ತ ಕಾರ್ಯದರ್ಶಿ ಟಿ.ಪಿ ಅನಂತ್ ಹೇಳಿಕೆ ನೀಡಿದ್ದಾರೆ. ಸ್ವಾಮಿಗಳ ಆರೋಗ್ಯ ವಿಚಾರಿಸಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಾಮಾಜಿಕ ಜಾಲತಾಣಗಳ ಊಹಾಪೋಹಗಳ ಬಗ್ಗೆ ಗಮನಕೊಡದೆ ಶ್ರೀಗಳ ಆರೋಗ್ಯಕ್ಕೆ ಶುಭಹಾರೈಸುವಂತೆ ಕೋರಿದರು. ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬೊಮ್ಮಾಯಿ, ಉತ್ತರಾಧಿ ಮಠಾಧಿಶರು, ಭಂಡಾರ್ಕೇರಿ ಸ್ವಾಮಿಜಿ, ಸಂತೋಷ್ ಗುರೂಜಿ, ಯು.ಟಿ.ಖಾದರ್ ಸಹಿತ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿದ್ರು. ಅನೇಕ ಕಡೆ ಶ್ರೀಗಳ ಆರೋಗ್ಯ ಚೇತರಿಕೆಗೆ ಹೋಮ ಹವನಗಳು ನಡೆಯುತ್ತಲೇ ಇವೆ. ಚಿಕಿತ್ಸೆಗೆ ಸ್ವಾಮೀಜಿ ಸ್ಪಂದಿಸುತ್ತಿರುವ ರೀತಿ ಭಕ್ತರ ನೆಮ್ಮದಿಗೆ ಕಾರಣವಾಗಿದೆ. ಶೀಘ್ರದಲ್ಲೇ ಗುಣಮುಖರಾಗಲು ಭಕ್ತರು ಪೂಜೆ ನಡೆಸುತ್ತಿದ್ದಾರೆ.

Find Out More:

Related Articles: