ಉಡುಪಿ: ಭಾನುವಾರ ಬೆಳಗ್ಗೆ ಎಲ್ಲೆಡೆ ಮೌನ ಆವರಿಸಿತ್ತು. ಭಕ್ತರ ಕಂಬನಿ. 80 ವರ್ಷಗಳ ಸನ್ಯಾಸತ್ವ, ಅವರ ಜೀವನಕ್ಕೆ ನೂರು ಅರ್ಥ. ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳ ಕಣ್ಮರೆ, ಭಕ್ತಗಣದಲ್ಲಿ ತಲ್ಲಣ ಮೂಡಿಸಿತು. ಕೆಲ ದಿನಗಳಿಂದ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳನ್ನು, ಭಾನುವಾರ ಬೆಳಗಿನ ಜಾವ ಉಡುಪಿ ಕೃಷ್ಣಮಠಕ್ಕೆ ಕರೆತರಲಾಯ್ತು. ಶ್ರೀಗಳ ಕೊನೆಯ ಆಸೆಯಂತೆ, ಶ್ರೀಮಠದಲ್ಲೇ ಅವರು ವಿಧಿವಶರಾದರು.
ಉಡುಪಿ ಮಠದ ಸಂಪ್ರದಾಯದಂತೆ ನಗಾರಿ ಬಾರಿಸಿ ವಿಶ್ವೇಶ ತೀರ್ಥ ಶ್ರೀಗಳು ಇನ್ನಿಲ್ಲ ಎಂದು ಘೋಷಿಸಲಾಯ್ತು. ಬಳಿಕ ಪೇಜಾವರ ಕಿರಿಯ ಶ್ರೀ ಹಾಗೂ ಶಿಷ್ಯರು, ತಮ್ಮ ಗುರುಗಳಿಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ಬಳಿಕ ಶ್ರೀಮಠದಿಂದ ಜಿಲ್ಲಾ ಕ್ರೀಡಾಂಗಣಕ್ಕೆ ಪೇಜಾವರ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು. ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ಪೊಲೀಸರು ಸಕಲ ಸರ್ಕಾರಿ ಗೌರವ ಅರ್ಪಿಸಿದರು. ಸಿಎಂ ಯಡಿಯೂರಪ್ಪ ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕ್ರೀಡಾಂಗಣದಲ್ಲಿಯೇ ಒಂದು ಗಂಟೆಗೂ ಹೆಚ್ಚು ಕಾಲ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಶ್ರೀಗಳ ಬ್ರಹ್ಮರಂಧ್ರಕ್ಕೆ ತೆಂಗಿನಕಾಯಿ ಇಡಲಾಯ್ತು.
ವಿಷ್ಣು ಸಾಲಿಗ್ರಾಮ, ಗಿಂಡಿ, ತುಳಸಿ ಮಾಲೆ, ಪೂಜಾ ಸಾಮಗ್ರಿ ಇಡಲಾಯ್ತು. ಬಳಿಕ ಸಾಸಿವೆ, ಉಪ್ಪು, ಹತ್ತಿಯನ್ನು ತುಂಬಿ ಗುಂಡಿಯನ್ನು ಮುಚ್ಚಲಾಯ್ತು. ಆ ನಂತರ ಬೇರೆ ಪುಣ್ಯ ಕ್ಷೇತ್ರಗಳಿಂದ ತಂದ ಮಣ್ಣನ್ನೂ ಕೂಡಾ ಹಾಕಲಾಯ್ತು. ಅಂತಿಮವಾಗಿ ಅದರ ಮೇಲೆ ಬೃಂದಾವನವನ್ನು ಇರಿಸಲಾಯ್ತು. ಈ ಬೃಂದಾವನದ ಮೇಲೆ ರಂದ್ರವಿರುವ ಪಾತ್ರೆ ಇಟ್ಟು ಅದರೊಳಗೆ ಸಾಲಿಗ್ರಾಮ ಇರಿಸಲಾಯ್ತು. ಪ್ರತಿ ದಿನ ಶ್ರೀಕೃಷ್ಣನ ಪೂಜೆ ಮಾಡಿದ ಬಳಿಕ ಪವಿತ್ರ ತೀರ್ಥವನ್ನು ಸಾಲಿಗ್ರಾಮಕ್ಕೆ ಸುರಿಯಲಾಯಿತು.
ಪೇಜಾವರ ಶ್ರೀಗಳ ಶಿಷ್ಯರಾದ ವಿದ್ಯಾಪೀಠದ ಪ್ರಾಧ್ಯಾಪಕ ಕೃಷ್ಣರಾಜ ಕುತ್ಪಾಡಿ ಅವರ ನೇತೃತ್ವದಲ್ಲಿ ಶ್ರೀಗಳ ವೃಂದಾವಸ್ಥ ಕಾರ್ಯ ನೆರವೇರಿತು. ಒಟ್ಟಿನಲ್ಲಿ ತಮ್ಮ ಪರಮಪ್ರಿಯ ದೇವರಾದ ಶ್ರೀಕೃಷ್ಣರ ಸನ್ನಿಧಾನದ ಪಕ್ಕದಲ್ಲೇ ಪೇಜಾವರ ಶ್ರೀಗಳು ವೃಂದಾವನಸ್ತರಾದರು. ಭಕ್ತರ ಕಂಬನಿ ಹೆಚ್ಚಾಗಿ ನೀರವ ಮೌನ ಆವರಿಸಿತು.