ಯಾದಗಿರಿ: ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಬ್ಬರು ಸೇರಿ ನಮ್ಮ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಕಾನೂನು ಮಾಡಿದರೆ ಅದು ಸಂವಿಧಾನದ ಮೂಲ ಆಶಯವನ್ನೇ ಉಲ್ಲಂಘಿಸಿದಂತೆ ಆಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ.
ನಗರದ ಶೇಹ್ನಾ ಲೇಔಟಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. 130 ಕೋಟಿ ಜನರಿಗೆ ಸಂಬಂಧಿಸಿದ ಸಂವಿಧಾನ ಇದು. ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಸಂವಿಧಾನವನ್ನು ದೇಶದ 130 ಕೋಟಿ ಜನ ಅನುಸರಿಸುತ್ತಿದ್ದಾರೆ. ಈ ಸಂವಿಧಾನವನ್ನೇ ಅಳಿಸಲು ಹೊರಟಿದೆ ಕೇಂದ್ರ ಸರ್ಕಾರ, ಅದನ್ನು ಖಂಡಿಸುತ್ತೇವೆ ಅದು ಸಾಧ್ಯವಾಗದ ಕಾರ್ಯ ಸಂವಿಧಾನವೇ ಅಂತಿಮ ಎಂದೂ ಖರ್ಗೆ ಕೇಂದ್ರದ ವಿರುದ್ಧ ಹರಿಹಾಯ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಟಿಫಿಕೇಟ್ ಕೇಳಿದ್ರೆ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಯಾಕೆಂದರೆ ಅವರ ಬಳಿ ಅವರ ಡಿಗ್ರಿ ಸರ್ಟಿಫಿಕೇಟ್ ಸಿಗುತ್ತಿಲ್ಲ. ಶಾ ಅವರ ಸರ್ಟಿಫಿಕೇಟ್ ಸಿಗಬಹುದು. ಯಾಕೆಂದರೆ ಅವರ ಕುಟುಂಬಸ್ಥರು ವ್ಯಾಪರಸ್ಥರು. ಅವರು ಸರ್ಟಿಫಿಕೇಟ್ ತೆಗಿಸಿರ್ತಾರೆ. ಆದರೆ, ಮೋದಿ ತಮ್ಮನ್ನ ತಾವು ಚಾಯ್ ವಾಲಾ ಅಂತಾರೆ. ಅವರ ಸರ್ಟಿಫಿಕೇಟ್ ಎಲ್ಲಿದಿಯೋ ಗೊತ್ತಿಲ್ಲ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.
ಸ್ವತಂತ್ರ ಬಂದ ವೇಳೆ ಶಾ, ಮೋದಿ ಇನ್ನು ಹುಟ್ಟಿರಲಿಲ್ಲ.ಅವರಿಗೇನು ಗೊತ್ತು ಅಜಾದಿ ಬಗ್ಗೆ? ಅಮೆರಿಕದಿಂದ ಇಂದು ದೆಹಲಿಗೆ ಕಾಕಾ ಟ್ರಂಪ್ ಬಂದಿದ್ದಾರೆ. ಸ್ಲಂ ಮರೆಮಾಚುವುದಕ್ಕಾಗಿ ತಡೆಗೋಡೆ ನಿರ್ಮಿಸಿದ್ದಾರೆ. ತಡೆ ಗೋಡೆ ನಿರ್ಮಿಸುವುದರಿಂದ ಬಡತನ ದೂರವಾಗುವುದಿಲ್ಲ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಕೊಡ್ತಿನಿ ಅಂತಾ ಹೇಳಿದ್ರು. ಆದರೆ, ಇದುವರೆಗೆ ಸಾಧ್ಯವಾಗಿಲ್ಲ, ಇವರ ಭರವಸೆ ಗಳೆಲ್ಲಾ ಸುಳ್ಳಾಗಿವೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ಜಿಡಿಪಿ 4.5 ಇತ್ತು ಈಗ 2.5 ಆಗಿದೆ. ಮೋದಿ, ಶಾ ವಿರುದ್ಧ ಮಾತನಾಡಿದವರನ್ನು ದೇಶ ದ್ರೋಹಿ ಅಂತಾರೆ. ಇವತ್ತಿನ ಟ್ರಂಪ್ ಭಾಷಣವನ್ನ ಮೋದಿ ಅವರೆ ಬರೆದುಕೊಟ್ಟಿರಬೇಕು ಎಂದು ಕೇಂದ್ರದ ವಿರುದ್ದ ಮಾತುಗಳನ್ನಾಡಿದರು.