Fact check: ಹೆಲಿಕ್ಯಾಪ್ಟರ್ ನಿಂದ ದುಡ್ಡು ಸುರಿಯುತ್ತಾರಾ ಮೋದಿ..?

Soma shekhar

ಇಂದಿನ  ಸ್ಪರ್ಧಾತ್ಮಕ ಯುಗದಲ್ಲಿ ಸಾಕಷ್ಟು ಸುದ್ದಿವಾಹಿನಿಗಳು ಸುದ್ದಿಯನ್ನು ನೀಡುವ ದಾವಂತದಲ್ಲಿ ತಾಮುಂದು ತಾಮುಂದು ಎಂದು ಮುಗಿ ಬೀಳುವುದು ಸರ್ವೇ ಸಾಮಾನ್ಯವಾಗಿದೆ.  ಟೆಲಿವಿಷನ್ ರೇಟಿಂಗ್ ಪಾಯಿಂಟ್ ಅನ್ನು ಹೆಚ್ಚಿಸಿಕೊಂಡು ಜಾಹಿರಾತು ಕಂಪನಿಗಳನ್ನು ಸೆಳೆಯುವುದು ಮೂಲ ಉದ್ದೇಶವಾಗಿರುವಾಗ  ಅತೀ ವೇಗವಾಗಿ ಕೆಲಸವನ್ನು ಮಾಡುವುದು ಅನಿವಾರ್ಯವಾಗಿರುವುದರಿಂದ  ಪ್ರೇಕ್ಷಕರಿಗೆ ಕ್ಷಣ ಕ್ಷಣಕ್ಕೂ ಹೊಚ್ಚ ಹೊಸ ವಿಷಯಗಳನ್ನು ನೀಡುವ ದಾವಂತದಲ್ಲಿ ಸುದ್ದಿಯ ಸತ್ಯಾ ಸತ್ಯತೆಯನ್ನು  ತಿಳಿದುಕೊಂಡು ಆನಂತರ ಪ್ರಸಾರ ಮಾಡುವುದು ಹೆಚ್ಚು ಸೂಕ್ತ ವೆನಿಸುತ್ತದೆ ಇಲ್ಲದಿದ್ದರೆ ಸುದ್ದಿ ವಾಹಿನಿಗಳು ನೀಡುವ ಸುದ್ದಿಗಳು ಸುಳ್ಳಾದರೆ ಭಾರೀ ಮುಖಭಂಗಕ್ಕೆ ಎಡೆಮಾಡಿಕೊಡುತ್ತದೆ. ಇಂತಹ ಒಂದು ಸನ್ನಿವೇಶವನ್ನು ಕನ್ನಡದ ಹೆಸರಾಂತ ಸುದ್ದಿವಾಹಿನಿಯೊಂದು ಅನುಭವಿಸುತ್ತಿದೆ.

 

ಹೌದು ಕನ್ನಡದ ಸುದ್ದಿವಾಹಿನಿಗಳಲ್ಲಿ ತುಂಬಾ ಜನಪ್ರಿಯವಾಗಿದ್ದ ಹೆಚ್‌ಆರ್ ರಂಗನಾಥ್ ನೇತೃತ್ವದಲ್ಲಿ ನಡೆಯುತ್ತಿದ್ದ ಪಬ್ಲಿಕ್ ಟಿವಿಯು ಜನರ ವಿಶ್ವಾಸವನ್ನು ಗಳಿಸಿದ್ದಂತಹ ಸುದ್ದಿವಾಹಿನಿಯಾಗಿ ಬಹಳ ಹೆಸರನ್ನು ಪಡೆದಿತ್ತು.  ಈ ಸುದ್ಧಿ ವಾಹಿನಿಯಲ್ಲಿ ಬರುವ ಹೆಚ್‌ಆರ್ ರಂಗನಾಥ್ ಅವರು ನಡೆಸಿಕೊಡುವ 9 ಗಂಟೆಯ ಬಿಗ್ ಬುಲೆಟಿನ್ ನೋಡಲು ಸಾಕಷ್ಟು ಜನರು ಕಾತರದಿಂದ ಕಾಯುವ ಜನರ ಸಂಖ್ಯೆ ದೊಡ್ಡದಿದೆ. ಇಷ್ಟೆಲ್ಲಾ ಜನಪ್ರಿಯತೆಯನ್ನು ಪಡೆದಿರುವ ಪಬ್ಲಿಕ್ ಟಿವಿ ಸುದ್ದಿಯನ್ನು ನೀಡುವ ಅವಸರದಲ್ಲಿ ಸುದ್ದಿಯ ಸಂಪೂರ್ಣವಾದ ವಿಷಯದ ಸತ್ಯಾ ಸತ್ಯತೆಯನ್ನು ಕಲೆಹಾಕದೆ ಸುಳ್ಳು ಸುದಿಯೊಂದನ್ನು ಪ್ರೇಕ್ಷಕರಿಗೆ ನೀಡಿದ್ದು ಈಗ ಪಬ್ಲಿಕ್ ಟಿವಿ ಭಾರೀ ಮುಖಭಂಗವನ್ನು ಅನುಭವಿಸುವಂತೆ ಮಾಡಿದೆ.

 

ಪಬ್ಲಿಕ್ ಟಿವಿಯಲ್ಲಿ ಏಪ್ರಿಲ್ 15  ರ ಬುಧವಾರ ರಾತ್ರಿ 8.30 ರ ಸಮಯದಲ್ಲಿ ಪಬ್ಲಿಕ್ ಟಿವಿಯಲ್ಲಿ “ಕೊರೊನಾ ಎಫೆಕ್ಟ್: ಹೆಲಿಕ್ಯಾಪ್ಟರ್ನಲ್ಲಿ ದುಡ್ಡು ಸುರೀತಾರಾ ಮೋದಿ!?, ಜನರಿಗೆ ಬಂಪರ್ ಗಿಫ್ಟ್ ಆಕಾಶದಿಂದ ಬೀಳಲಿದ್ಯಾ ಕಂತೆ ಕಂತೆ ನೋಟು, ಏನಿದು ಹೆಲಿಕ್ಯಾಪ್ಟರ್ ಮೋದಿ ಪ್ಲಾನ್? ಮೋದಿ ಬಳಿ ಸೂಪರ್ ಐಡಿಯಾ!, ಬಡ್ಡಿ ಇಲ್ಲ.. ಸಾಲ ಅಲ್ಲ.. ಹೆಲಿಕಾಪ್ಟರ್ನಿಂದ ಪ್ರತಿ ಊರಿಗೂ ದುಡ್ಡು ಎಂಬುದಾಗಿ ಪ್ರಸಾರ ಮಾಡಿತ್ತು.

 

ಹೆಲಿಕಾಪ್ಟರ್ನಿಂದ ದುಡ್ಡು ಸುರಿಯುತ್ತಾರಾ ಮೋದಿ ಎಂಬ ಸುಳ್ಳು ಸುದ್ದಿ ಪ್ರಕಟಿಸಿದ ಕನ್ನಡದ ಪಬ್ಲಿಕ್ ಟಿವಿಗೆ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ನೋಟಿಸ್ ನೀಡಿದೆ.

 

 

ಈ ಸುದ್ದಿಯು ಸುಳ್ಳು ಸುದ್ದಿಯಾಗಿದ್ದು, ಜನರನ್ನು ತಪ್ಪು ದಾರಿಗೆಳೆಯಲಿದೆ ಮಾತ್ರವಲ್ಲದೇ ಉದ್ದೇಶಪೂರ್ವಕವಾದ, ಕುಚೇಷ್ಟೆಯ ಮತ್ತು ಸ್ಪಷ್ಟವಾದ ಕೇಬಲ್ ಟೆಲಿವಿಷನ್ ನೆಟ್ವರ್ಕ್ (ನಿಯಂತ್ರಣ) ಕಾಯ್ದೆ ಮತ್ತು ಸಂಕೇತಗಳ ಉಲ್ಲಂಘನೆಯಾಗಿದೆ ಎಂದು ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ನೋಟಿಸ್ನಲ್ಲಿ ತಿಳಿಸಿದೆ.

 

ಕೇಬಲ್ ಟೆಲಿವಿಷನ್ ನೆಟ್ವರ್ಕ್ (ನಿಯಂತ್ರಣ) ಕಾಯ್ದೆ 1995ರ ಹಲವು ನಿಯಮಗಳನ್ನು ಉಲ್ಲಂಘಿಸಿದಕ್ಕಾಗಿ ಏಕೆ ನಿಮ್ಮ ಚಾನೆಲ್ ಪ್ರಸಾರವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬಾರದು ಎಂದು ಪಿಐಬಿ ಕೇಳಿದ್ದು ಈ ನೋಟಿಸ್ಗೆ 10 ದಿನಗಳ ಒಳಗಾಗಿ ಸ್ಪಷ್ಟೀಕರಣ ನೀಡುವಂತೆ ತಾಕೀತು ಮಾಡಿದೆ.

 

ಈ ಕುರಿತು ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ರವರಿಗೆ ಅಡಿಷನಲ್ ಡೈರೆಕ್ಟರ್ ಜನರಲ್ ಎಂ.ನಾಗೇಂದ್ರ           ಸ್ವಾಮಿಯವರು ನೋಟಿಸ್ ನೀಡಿದ್ದು ಏಕೆ ನಿಮ್ಮ ಚಾನೆಲ್ ಪ್ರಸಾರವನ್ನು ಕೂಡಲೇ ನಿಲ್ಲಿಸಬಾರದು ಎಂದು ಪ್ರಶ್ನಿಸಿದ್ದಾರೆ.

 

ಈ ಹಿಂದೆ ನರೇಂದ್ರ ಮೋದಿಯವರು ನೋಟು ಅಮಾನ್ಯೀಕರಣ ಘೋಷಿಸಿದ ಸಂದರ್ಭದಲ್ಲಿ ಇದೇ ಪಬ್ಲಿಕ್ ಟಿವಿಯು ಮೋದಿಯವರನ್ನು ಹೊಗಳುವ ಭರದಲ್ಲಿ 2000 ರೂ ನೋಟಿನಲ್ಲಿ ನ್ಯಾನೋ ಜಿಪಿಎಸ್ ಚಿಪ್ಪು ಇದೆ ಎಂದು ಸ್ವತಃ ಎಚ್.ಆರ್.ರಂಗನಾಥ್ ಪದೇ ಪದೇ ಹೇಳಿದ್ದರು. ತದನಂತರ ಅದು ಸುಳ್ಳೆಂದು ಸಾಬೀತಾಗಿ ರಂಗನಾಥ್ ಬಹಳ ಲೇವಡಿಗೊಳಗಾಗಿದ್ದನ್ನು ನಾವು ಮರೆಯುವಂತಿಲ್ಲ.

 

ಇನ್ನು ಮುಂದಾದರೂ ಸುದ್ದಿಮಾಧ್ಯಮಗಳು ಅವಸರಕ್ಕೆ ಬೀಳದೆ ಸುದ್ದಿಯನ್ನು ಪರಿಶೀಲಿಸಿ ಸತ್ಯಾ ಸತ್ಯತೆಯನ್ನು ತಿಳಿದುಕೊಂಡು ಆನಂತರ ಸುದ್ದಿಯನ್ನು ಬಿತ್ತರಿಸಿ  ಜನರನ್ನು ಸರಿದಾರಿಗೆ ತೆಗೆದುಕೊಂಡು ಹೋಗಿ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಪ್ರತಿಯೊಂದು ಮಾಧ್ಯಮಗಳ ಕರ್ತವ್ಯವಾಗಿದೆ.

Find Out More:

Related Articles: