ಸುಧಾರಣಾ ಕ್ರಮಗಳತ್ತ ಗಮನ ಹರಿಸಿದ ನಿರ್ಮಲಾ ಸೀತಾರಾಮ್: ಯಾವ್ಯಾವ ಕ್ಷೇತ್ರಗಳಿಗೆ ಎಷ್ಟು ಪಾಲು ಘೋಷಿಸಿದ್ದಾರೆ ಗೊತ್ತಾ..?
ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನ ಬಗ್ಗೆ ಕಳೆದ ಮೂರು ದಿನಗಳಿಂದ ಹಂತಹಂತವಾಗಿ ವಿವರಣೆ ನೀಡುತ್ತಿರುವ ನಿರ್ಮಲಾ ಸೀತರಾಮನ್ ಅವರು ಇಂದು ನಾಲ್ಕನೇ ಸುದ್ದಿಗೋಷ್ಠಿಯಲ್ಲಿ ರಚನಾತ್ಮಕ ಸುಧಾರಣೆ ಕ್ರಮಗಳತ್ತ ಗಮನ ಹರಿಸಿದ್ಧಾರೆ. ಅಷ್ಟಕ್ಕೂ ಇಂದು ಯಾವ ಯಾವ ಸುಧಾರಣಾ ಕ್ರಮಗಳತ್ತ ನಿರ್ಮಲಾ ಸೀತಾರಾಮ್ ಗಮನ ಹರಿಸಿದ್ದಾರೆ. ಇಲ್ಲಿದೆ ನೋಡಿ..
'ಇವತ್ತು ರಚನಾತ್ಮಕ ಸುಧಾರಣೆ ಕ್ರಮಗಳನ್ನ ಘೋಷಿಸುತ್ತೇವೆ. ಇವತ್ತಿನ ಸುಧಾರಣಾ ಕ್ರಮಗಳಿಂದ ಹೆಚ್ಚೆಚ್ಚು ಬಂಡವಾಳ ಹರಿದುಬರುವ ನಿರೀಕ್ಷೆ ಇದೆ. ಹೆಚ್ಚು ಉತ್ಪನ್ನಗಳು ಹಾಗೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ' ಎಂದು ತಿಳಿಸಿದರು. ಮೇಕ್ ಇನ್ ಇಂಡಿಯಾ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣ ಮಾಡಲಾಗುವುದು. ರಕ್ಷಣಾ ಸಾಮಾಗ್ರಿಗಳನ್ನು ದೇಶದಲ್ಲಿಯೇ ಖರೀದಿಸಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಹೇಳಿದ್ದಾರೆ.
ನಿರ್ಭರ್ ಭಾರತ್ ಯೋಜನೆಯ ಭಾಗವಾಗಿ ಕಲ್ಲಿದ್ದಲು, ಖನಿಜ ಸಂಪತ್ತು, ರಕ್ಷಣಾ ಉತ್ಪಾದನೆ, ವೈಮಾನಿಕ ಕ್ಷೇತ್ರ, ಸಾಮಾಜಿಕ ಮೂಲ ಸೌಲಭ್ಯ ಅಭಿವೃದ್ಧಿ, ಬಾಹ್ಯಾಕಾಶ ಮತ್ತು ಅಣುಶಕ್ತಿ ಇಂಧನ ಕ್ಷೇತ್ರಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಒತ್ತು ನೀಡಿ ಸಂಪನ್ಮೂಲ ಸಂಗ್ರಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಪ್ರಮುಖವಾಗಿ ಇಸ್ರೋ, ರಕ್ಷಣೆ, ಅಣು ಇಂಧನ, ಇಂಧನ, ನಾಗರಿಕ ವಿಮಾನ ಯಾನ ಕ್ಷೇತ್ರದಲ್ಲಿ ಖಾಸಗಿ ಪಾಲುದಾರಿಕೆ ಹೆಚ್ಚಿಸುವ ಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುತ್ತಿದ್ದು, ಇಸ್ರೋದಲ್ಲಿರುವ ವಿಶ್ವಮಟ್ಟದ ಮೂಲ ಸೌಲಭ್ಯಗಳನ್ನು ಬಳಸಿಕೊಳ್ಳಲು ಖಾಸಗಿ ವಲಯಕ್ಕೆ ಅವಕಾಶ ಕಲ್ಪಿಸಲಾಗುವುದು. ಈ ಮೂಲಕ ಇಸ್ರೋದ ಸಾಮರ್ಥ್ಯ ವೃದ್ಧಿಗೆ ಗಮನಹರಿಸಲಾಗುವುದು. ಈ ಕ್ಷೇತ್ರದ ಮತ್ತಷ್ಟು ಸುಧಾರಣಾ ಕ್ರಮಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದರು.
ಸಂಪೂರ್ಣವಾಗಿ ಸರ್ಕಾರಿ ವಲಯದಲ್ಲಿರುವ ಅಣು ಇಂಧನ ಕ್ಷೇತ್ರದ ಸುಧಾರಣೆ ಮತ್ತು ಸಾರ್ವಜನಿಕ ಖಾಸಗಿ ಸಹಭಾಗಿತ್ವಕ್ಕೆ ಒಳಪಡಿಸಲಾಗುವುದು. ಮಾನವೀಯ ನೆಲೆಯಲ್ಲಿ ಕ್ಯಾನ್ಸರ್ ಹಾಗೂ ಇತರ ವ್ಯಾದಿಗಳಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ದೊರಕಿಸುವ, ಆಹಾರ ಸಂಸ್ಕರಣೆಯಲ್ಲಿ ವಿಕಿರಣ ತಂತ್ರಜ್ಞಾನ ಬಳಕೆಗೆ ಖಾಸಗಿ, ಸಾರ್ವಜನಿಕ ಸಹಭಾಗಿತ್ವ ಮಾದರಿ ಅಳವಡಿಕೆ, ಕೃಷಿ ಕ್ಷೇತ್ರದ ಸುಧಾರಣೆ ಜೊತೆಗೆ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕ್ರಮಗಳನ್ನು ಅಳವಡಿಸಲಾಗುವುದು. ಅಣು ಇಂಧನ ಕ್ಷೇತ್ರದಲ್ಲಿ ಪರಿಸರ ಸ್ನೇಹಿ ನವೋದ್ಯಮಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಸಂಶೋಧನಾ ಸೌಲಭ್ಯ ಮತ್ತು ತಂತ್ರಜ್ಞಾನದಲ್ಲಿ ಉದ್ಯಮ ಶೀಲತೆ ಬೆಳಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕಲ್ಲಿದ್ದಲು ವಲಯದಲ್ಲಿ ಭಾರತ 3ನೇ ಸ್ಥಾನದಲ್ಲಿದ್ದು, ಈ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ 50 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು. ಕಲ್ಲಿದ್ದಲು ಗಣಿಗಳ ಮುಕ್ತ ಬಿಡ್‌ಗೆ ಅವಕಾಶ ಕಲ್ಪಿಸುತ್ತಿದ್ದು, ಮೊದಲ ಹಂತದಲ್ಲಿ 50 ಕಲ್ಲಿದ್ದಲು ಗಣಿಗಳನ್ನು ಮುಂಗಡ ಹಣ ಪಾವತಿಸುವ ಖಾಸಗಿಯವರಿಗೆ ಅವಕಾಶ ನೀಡಲಾಗುವುದು. ಒಟ್ಟು 500 ಕಲ್ಲಿದ್ದಲು ಗಣಿಗಳ ಬಿಡ್‌ಗೆ ಅನುವು ಮಾಡಿಕೊಡಲಾಗುವುದು ಎಂದರು.
ಇದೇ ರೀತಿ ಖನಿಜ ವಲಯದಲ್ಲೂ 500 ಗಣಿಗಳ ಮುಕ್ತ ಮತ್ತು ಪಾರದರ್ಶಕ ಹರಾಜಿಗೆ ಅವಕಾಶ ನೀಡುತ್ತಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಖನಿಜಗಳ ಉತ್ಪಾದನೆ, ಖನಿಜ ಕ್ಷೇತ್ರದ ಖಾಸಗಿ ಹೂಡಿಕೆಯನ್ನು ಉತ್ತೇಜಿಸಲಾಗುವುದು ಎಂದರು.
ರಕ್ಷಣಾ ಕ್ಷೇತ್ರದಲ್ಲಿ ಮೇಕ್‌ಇನ್ ಇಂಡಿಯಾಗೆ ಆದ್ಯತೆ ನೀಡುತ್ತಿದ್ದು, ದೇಶೀಯ ಉತ್ಪನ್ನಗಳನ್ನು ಹೆಚ್ಚಿಸಿ ಆಮದು ವೆಚ್ಚ ತಗ್ಗಿಸಲಾಗುವುದು. ಕೆಲವು ನಿರ್ಧಿಷ್ಟ ಶಸ್ತ್ರಾಸ್ತ್ರಗಳ ಆಮದಿಗೆ ನಿಷೇಧ ಹೇರುವ ಜತೆಗೆ ರಕ್ಷಣಾ ಉತ್ಪಾದನಾ ನೀತಿಯಲ್ಲಿ ಬದಲಾವಣೆ ತರಲಾಗುವುದು. ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣವನ್ನು ಶೇಕಡ 49ರಿಂದ ಶೇಕಡ 74 ಕ್ಕೆ ಹೆಚ್ಚಿಸಿ, ರಕ್ಷಣಾ ವಲಯದ ಕಂಪನಿಗಳು ಷೇರು ಮಾರುಕಟ್ಟೆ ಪ್ರವೇಶಿಸಲು ಅವಕಾಶ ನೀಡಲಾಗುವುದು. ದೇಶೀಯ ರಕ್ಷಣಾ ಸಾಮಗ್ರಿಗಳ ಖರೀದಿಗೆ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಸುಧಾರಣೆ ತರುತ್ತಿದ್ದು, ಭಾರತೀಯ ವಾಯುಯಾನ ಕ್ಷೇತ್ರದ ಬಳಕೆ ಮೇಲಿನ ನಿರ್ಬಂಧ ಸಡಿಲಗೊಳಿಸಿ ಖಾಸಗಿ ಸಾರ್ವಜನಿಕ ಸಹಭಾಗಿತ್ವಕ್ಕೆ ಒತ್ತು ನೀಡಲಾಗುವುದು, 12 ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವಕ್ಕೆ ಒಳಪಡಿಸುತ್ತಿದ್ದು, ಇದರಿಂದ ೧೩ ಸಾವಿರ ಕೋಟಿ ರೂಪಾಯಿ ಸಂಪನ್ಮೂಲ ಸಂಗ್ರಹಿಸಲಾಗುವುದು ಎಂದರು.
ಇಂಧನ ಕ್ಷೇತ್ರದ ದರ ನೀತಿಯಲ್ಲಿ ಸುಧಾರಣೆ ಜೊತೆಗೆ ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣ ಮಾಡಲಾಗುವುದು. ಮೊದಲ ಹಂತದಲ್ಲಿ ಕೇಂದ್ರಾಡಳಿತ ಪ್ರದೇಶಗಳ ವಿದ್ಯುತ್ ಕಂಪನಿಗಳು ಖಾಸಗಿ ವಲಯಕ್ಕೆ ಒಳಪಡಲಿವೆ. ಗ್ರಾಹಕರ ಹಕ್ಕುಗಳ ರಕ್ಷಣೆ, ಇಂಧನ ಕೈಗಾರಿಕೆಗಳಿಗೆ ಉತ್ತೇಜನ ಮತ್ತು ಈ ಕ್ಷೇತ್ರದ ಸುಸ್ಥಿರತೆಗೆ ಆದ್ಯತೆ ನೀಡಲಾಗುವುದು. ದಕ್ಷತೆ ಸ್ಥಿತಿ ಹೆಚ್ಚಿಸಿ ನಿಗದಿತ ವಿದ್ಯುತ್ ಪೂರೈಸದಿದ್ದರೆ, ಲೋಡ್‌ಶೆಡ್ಡಿಂಗ್ ಜಾರಿ ಮಾಡಿದರೆ ದಂಡ ವಿಧಿಸುವ, ವಿದ್ಯುತ್ ಸಬ್ಸಿಡಿಯನ್ನು ಡಿಬಿಟಿ ಮೂಲಕ ವರ್ಗಾಯಿಸುವ ಸುಧಾರಣಾ ಕ್ರಮಗಳು ಸೇರಿವೆ ಎಂದು ಮಾಹಿತಿ ನೀಡಿದರು.
ಸಾಮಾಜಿಕ ಮೂಲಸೌಕರ್ಯ ವಲಯದಲ್ಲಿ ಖಾಸಗಿ ಹೂಡಿಕೆಗೆ ಆದ್ಯತೆ ನೀಡುತ್ತಿದ್ದು, ಈ ಕ್ಷೇತ್ರದ ಯೋಜನೆಗಳಿಗೆ 8 ಸಾವಿರದ 100 ಕೋಟಿ ರೂಪಾಯಿ ಒದಗಿಸಲಾಗುವುದು. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಸೂಚಿಸುವ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಲಾಗುವುದು ಎಂದರು.