ಭಾರತದಲ್ಲಿ ಹೆಚ್ಚಾಗುತ್ತಿರುವ ಕೊರೋನಾ ಸೋಂಕಿಗೆ ಹೆದರಿತಾ ಚೀನಾ: ಇದಕ್ಕೆ ಚೀನಾ ಮಾಡಿದ್ದಾದರೂ ಏನು.. ?
ಕೊರೋನಾ ಸೋಂಕಿನ ತವರು ದೇಶವಾದ ಚೀನಾಕ್ಕೆ ಭಾರತದ ಮೇಲೆ ಭಯ ಹೆಚ್ಚಾಗಿದೆ ಅದಕ್ಕೆ ಕಾರಣ ಭಾರತದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕು. ಈ ಮಾತು ಕೇಳಲು ತಮಾಷೆಯಾದರೂ, ಇದು ಸತ್ಯ. ಕೇಲವ ನಾಲ್ಕು ತಿಂಗಳ ಹಿಂದೆ ಚೀನಾದಲ್ಲಿದ್ದ ಭಾರತೀಯರನ್ನು ಹಿಂದಕ್ಕೆ ಕರೆಸಿಕೊಂಡಿತ್ತು ಭಾರತ ಆದರೆ ಈಗ ಕೊರೋನಾ ಕೂಪದಲ್ಲಿ ಬಿದ್ದು ನರಳಾಡುತ್ತಿರುವ ಭಾರತಕ್ಕೆ ಕೊರೋನಾನದಿಂದ ಸುಧಾರಿಸಿಕೊಂಡ ಚೀನಾ ಭಾರತದಲ್ಲಿರುವ ಚೀನೀಯರನ್ನು ಕಳುಹಿಸಿ ಕೊಡುವಂತೆ ಮನವಿಯನ್ನು ಮಾಡಿದೆ.
ಹೌದು. ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಚೀನಾ ವಿದ್ಯಾರ್ಥಿಗಳನ್ನು ಪರೀಕ್ಷೆ ಮುಗಿಸಿದ ತಕ್ಷಣ ತವರಿಗೆ ಕಳುಹಿಸಿಕೊಡುವಂತೆ ಚೀನಾ ಉನ್ನತ ಶಿಕ್ಷಣ ಇಲಾಖೆಯು ಮೈಸೂರು ವಿವಿ ಉಪಕುಲಪತಿಗಳಿಗೆ ದೂರವಾಣಿ ಮೂಲಕ ಮನವಿ ಮಾಡಿದೆ.
ಇದನ್ನು ಖಚಿತಪಡಿಸಿದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅವರು, ಪ್ರಸ್ತುತ ವಿವಿಯಲ್ಲಿ 80 ರಿಂದ 90 ಮಂದಿ ಚೀನಾ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ಜೂ.10 ರಿಂದ ಜೂನ್ 15 ವರೆಗೆ ಪರೀಕ್ಷೆಗಳು ನಿಗದಿಯಾಗಿತ್ತು. ಆದರೆ ಚೀನಾ ಉನ್ನತ ಶಿಕ್ಷಣ ಇಲಾಖೆ ತನ್ನ ರಾಯಭಾರಿ ಕಚೇರಿಯ ಮೂಲಕ ನನಗೆ ಕರೆ ಮಾಡಿ, ಶೀಘ್ರವೇ ಪರೀಕ್ಷೆ ಮುಗಿಸಿ ನಮ್ಮ ವಿದ್ಯಾರ್ಥಿಗಳನ್ನು ತವರಿಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದೆ ಎಂದು ತಿಳಿಸಿದರು. ಅಲ್ಲದೆ ಇತರ ವಿದೇಶಗಳಲ್ಲಿರುವ ಚೀನೀ ವಿದ್ಯಾರ್ಥಿಗಳನ್ನೂ ಕರೆಸಿಕೊಳ್ಳಲಾಗುತ್ತಿದೆ ಎಂದೂ ತಿಳಿಸಿದರು.
ಚೀನಾದ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಮೈಸೂರು ವಿವಿಯನ್ನು ಸಂಪರ್ಕಿಸಿ ಚೀನಾ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಬೇಗ ನಡೆಸಿ ಅವರನ್ನು ಸ್ವದೇಶಕ್ಕೆ ವಾಪಸ್ ಕಳುಹಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಚೀನಾ ವಿದ್ಯಾರ್ಥಿಗಳಿಗೆ ಮೈಸೂರು ವಿವಿಯಲ್ಲಿ ಪರೀಕ್ಷೆಗಳನ್ನು ಮುಂಚಿತವಾಗಿ ನಡೆಸಿ ಸ್ವದೇಶಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನೂರಕ್ಕೂ ಹೆಚ್ಚು ಮಂದಿ ಚೀನಾ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜೂ.15ಕ್ಕೆ ನಿಗದಿಯಾಗಿದ್ದ ಪರೀಕ್ಷೆಯನ್ನು ಜೂ.1ರಿಂದ ಆರಂಭಿಸಿ ಜೂ.6ಕ್ಕೆ ಮುಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವಿ ಕುಲಪತಿ ಪ್ರೊ .ಹೇಮಂತ್ಕುಮಾರ್ ತಿಳಿಸಿದ್ದಾರೆ.
6ಕ್ಕೆ ಪರೀಕ್ಷೆ ಪೂರ್ಣಗೊಂಡ ನಂತರ 7 ಅಥವಾ 8ರಂದು ಮೈಸೂರಿನಿಂದ ಚೀನಾಕ್ಕೆ ಕಳುಹಿಸಲಾಗುವುದು. ಮಾಹಿತಿ-ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಈ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
80 ರಿಂದ 90 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸುವುದರಿಂದ ಸಾರ್ವಜನಿಕ ಅಂತರ ಕಾಯ್ದುಕೊಳ್ಳಲಾಗುತ್ತದೆ. ಪರೀಕ್ಷಾ ಕೊಠಡಿಗೆ ಬರುವ ಮುನ್ನ ವಿದ್ಯಾರ್ಥಿಗಳು ಕಡ್ಡಾಯ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಪ್ರತಿ ಪರೀಕ್ಷಾ ಕೊಠಡಿಯಲ್ಲೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುವುದು ಎಂದರು.