ರಾಜ್ಯ ರಾಜಧಾನಿಯ ಲಾಕ್ ಡೌನ್ ಕುರಿತಂತೆ ಸರ್ವಪಕ್ಷಗಳ ಸಭೆಯಲ್ಲಾದ ತೀರ್ಮಾನಗಳೇನು ಗೊತ್ತಾ..?
ಕೊರೋನಾ ವೈರಸ್ ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಕಾರಣದಿಂದ ಬೆಂಗಳೂರಿನಲ್ಲಿ ಆರೋಗ್ಯ ತುರ್ತುಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಬೆಂಗಳೂರಿನ ಜನ ಆತಂಕದಲ್ಲಿ ಜೀವನವನ್ನು ನಡೆಸುವಂತಹ ಸನ್ನಿವೇಶ ನಿರ್ಮಾಣವಾಗಿದೆ ಇದರಿಂದಾಗಿ ಪ್ರತಿಪಕ್ಷಗಳು ಬೆಂಗಳೂರನ್ನು ಲಾಕ್ ಡೌನ್ ಮಾಡುವಂತೆ ಸಲಹೆಯನ್ನು ನೀಡಲಾಗಿತ್ತು. ಈ ನಿಟ್ಟಿನಲ್ಲಿ ಹರಡುತ್ತಿರುವ ಮಹಾಮಾರಿ ಕೋವಿಡ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆದಿದ್ದು, ಜನಪ್ರತಿನಿಧಿಗಳು ಸರ್ಕಾರಕ್ಕೆ ಹಲವು ಸಲಹೆ ನೀಡಿದ್ದಾರೆ. ವಿಧಾನಸೌಧದಲ್ಲಿ ಬೆಂಗಳೂರಿನ ಸರ್ವಪಕ್ಷ ಮುಖಂಡರೊಂದಿಗೆ ಸಭೆ ನಡೆಸಿದ ಸಿಎಂ, ಕೋವಿಡ್ 19 ನಿಯಂತ್ರಣದ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ಸಲಹೆ ಸೂಚನೆಯನ್ನೂ ಆಲಿಸಿದರು. ಅಷ್ಟಕ್ಕೂ ಈ ಸಭೆಯಲ್ಲಿ ಆದ ಚರ್ಚೆಗಳೇನು ಗೊತ್ತಾ..?
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರವಾರು ಯಾವ್ಯಾವ ಕ್ಷೇತ್ರದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಸಿಎಂ ಮಾಹಿತಿ ಪಡೆದರು. ಬೆಂಗಳೂರಿನಲ್ಲಿ ಕೋವಿಡ್ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. ಮುಂದಿನ ಒಂದು ತಿಂಗಳಲ್ಲಿ ಪ್ರಕರಣಗಳ ನಿರ್ವಹಣೆಗೆ ತಾತ್ಕಾಲಿಕ ಮತ್ತು ದೂರದೃಷ್ಟಿಯ ಕ್ರಮಗಳನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ನಿಮ್ಮ ಸಲಹೆಗಳನ್ನೂ ಪರಿಗಣಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.
ಲಾಕ್ಡೌನ್ ಬೇಕು ಎಂದು ವಿಪಕ್ಷದ ಜನಪ್ರತಿನಿಧಿಗಳು ಆಗ್ರಸಿದರೂ ಇದಕ್ಕೆ ಸಿಎಂ ಮತ್ತು ಅವರ ಸಚಿವರು ಒಪ್ಪಲಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ವೆಚ್ಚ ದುಬಾರಿ ಆಗ್ತಿದೆ, ಹಣ ಕಟ್ಟಲಾಗದೆ ಹೆಣ ತರಲೂ ಆಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೊಬ್ಬರು, ಮೂರ್ನಾಲ್ಕು ದಿನಗಳ ಹಿಂದೆ ಓರ್ವ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಹಣ ಕಟ್ಟಲಾಗದೆ ಅನುಭವಿಸಿದ ಪರಿಸ್ಥಿತಿಯನ್ನು ಪ್ರಸ್ತಾಪಿಸಿದರು.
ರವಿಶಂಕರ್ ಗೂರೂಜಿ ಆಶ್ರಮದಲ್ಲಿ ಕೋವಿಡ್ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು, ಕೋವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ವಿಚಾರದಲ್ಲಿ ಯಾವುದೇ ಜಾತಿಯ ಭೇದಭಾವ ಬೇಡ, ಮಾರ್ಕೆಟ್ ಏರಿಯಾಗಳಲ್ಲಿ ಸೋಂಕು ನಿಯಂತ್ರಿಸಲು ಸರ್ಕಾರ ಹೆಚ್ಚು ನಿಗಾವಹಿಸಬೇಕು, ಬೆಂಗಳೂರಿನ ಸ್ಲಂಗಳಿಗೆ ಸೋಂಕು ಹರಡದಂತೆ ಜಾಗ್ರತೆ ವಹಿಸಬೇಕು, ಆಶಾ ಕಾರ್ಯಕರ್ತೆಯರ ಸಂಖ್ಯೆ ಹೆಚ್ಚಿಸಬೇಕು, ಬೆಡ್ಗಳ ಮಾಹಿತಿ ಪಡೆಯಲು ವೆಬ್ಸೈಟ್ ಓಪನ್ ಮಾಡಬೇಕು, ಬೆಂಗಳೂರನ್ನು ಸಂಪೂರ್ಣವಾಗಿ ಸ್ಯಾನಿಟೈಜರ್ ಮಾಡಬೇಕು… ಎಂಬ ಸಲಹೆ ವಿಪಕ್ಷದ ಜನಪ್ರತಿನಿಧಿಗಳಿಂದ ಕೇಳಿಬಂತು.
ಲಾಕ್ಡೌನ್ ಇಲ್ಲ. ಸೀಲ್ಡೌನ್ ಅನ್ನು ಸ್ಟ್ರಿಕ್ಟ್ ಆಗಿ ಮಾಡುವುದಾಗಿ ಆಡಳಿತ ಪಕ್ಷ ಹೇಳಿತು. ಸಭೆ ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು, ಕರೊನಾ ರೋಗಿಗಳಿಗೆ ಊಟದ ವ್ಯವಸ್ಥೆ ಸರಿಯಿಲ್ಲ ಎಂದು ಸಭೆಯಲ್ಲಿ ಕಾಂಗ್ರೆಸ್ನವರು ಆರೋಪ ಮಾಡಿದ್ರು. ರೋಗಿಗಳಿಗೆ ಉತ್ತಮ ಆಹಾರವನ್ನೇ ನೀಡಲಾಗುತ್ತಿದೆ. ಈ ಬಗ್ಗೆ ಸಿಎಂ ಈಗಾಗಲೇ ಖಡಕ್ ಸೂಚನೆ ನೀಡಿದ್ದಾರೆ ಎಂದು ಶ್ರೀರಾಮುಲು ಸಮರ್ಥಿಸಿಕೊಂಡರು.
ಸರ್ವ ಪಕ್ಷ ಸಭೆಯಲ್ಲಿ ಶ್ರೀರಾಮುಲು, ಆರ್.ಅಶೋಕ್, ಬೈರತಿ ಬಸವರಾಜ್, ಬಸವರಾಜ ಬೊಮ್ಮಾಯಿ, ಸುರೇಶ್ ಕುಮಾರ್, ತೇಜಸ್ವಿ ಸೂರ್ಯ, ಎಂ.ಕೃಷ್ಣಪ್ಪ, ಹ್ಯಾರಿಸ್, ಉದಯ್ ಗರುಡಾಚಾರ್, ರಘು, ವಿಶ್ವನಾಥ್, ಜೆಡಿಎಸ್ ಎಂಎಲ್ಸಿ ಶರವಣ, ರಮೇಶ್ ಗೌಡ, ಕಾಂಗ್ರೆಸ್ನ ಜಮೀರ್ ಅಹ್ಮದ್, ನಾಸೀರ್ ಹುಸೇನ್, ಸಂಸದ ಡಿ.ಕೆ ಸುರೇಶ್, ಎನ್.ಎ. ಹ್ಯಾರಿಸ್, ದಿನೇಶ್ ಗುಂಡೂರಾವ್, ರಿಜ್ವಾನ್ ಹರ್ಷದ್ ಪಾಲ್ಗೊಂಡಿದ್ದರು.