ರೈಲುಗಳ ಕಾರ್ಯಾಚರಣೆ ಖಾಸಗೀ ವಲಯಕ್ಕೆ ವರ್ಗಾವಣೆ : ಎಷ್ಟು ರೈಲುಗಳು ಖಾಸಗೀ ವಲಯಕ್ಕೆ ಸೇರಲಿವೆ..?

Soma shekhar

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಲವು ಸರ್ಕಾರಿ ವಲಯಗಳಲ್ಲಿ ಖಾಸಗೀ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿ ಕೊಡಲಾಗುತ್ತಿದೆ. ಈ ಗಾಗಲೇ ಸಾಕಷ್ಟು ವಲಯಗಳಲ್ಲಿ ಖಾಸಗೀಯವರ ಬಂಡವಾಳ ಇದ್ದು ಮತ್ತಷ್ಟು ವಲಯಗಳಲ್ಲಿ ಖಾಸಗೀಯವರು ಹೂಡಿಕೆಯನ್ನು ಮಾಡುವಂತೆ ಆಹ್ವಾನವನ್ನು ನೀಡಲಾಗುತ್ತಿದೆ. ಇದರಂತೆ ಖಾಸಗೀ ವಲಯ ರೈಲ್ವೆ ವಲಯದ ಮೇಲೆ ಬಂಡವಾಳವನ್ನು ಹೂಡಿಕೆಯನ್ನು ಮಾಡುವಂತಹ ಇಚ್ಚೆಯನ್ನು ವ್ಯಕ್ತ ಪಡಿಸಿರುವುದರಿಂದ ಕೇಂದ್ರ ಸರ್ಕಾರ  ಇದಕ್ಕೆ ಅನುಮತಿಯನ್ನು ನೀಡಿದೆ.

 

ಹೌದು, ಪ್ರಯಾಣಿಕ ರೈಲುಗಳ ಕಾರ್ಯಾಚರಣೆಯನ್ನು ಖಾಸಗಿ ವಲಯಕ್ಕೆ ವಹಿಸಿಕೊಡುವ ಯೋಜನೆಗೆ ರೈಲ್ವೆ ಇಲಾಖೆ ವಿಧ್ಯುಕ್ತವಾಗಿ ಚಾಲನೆ ನೀಡಿದ್ದು, 109 ಜೋಡಿ ಮಾರ್ಗಗಳ 151 ರೈಲುಗಳ ಕಾರ್ಯಾಚರಣೆಗೆ ಖಾಸಗಿ ವಲಯದಿಂದ ಅರ್ಹತಾ ಮನವಿ (ರಿಕ್ವೆಸ್ಟ್ ಫಾರ್ ಕ್ವಾಲಿಫಿಕೇಷನ್-ಆರ್‌ಎಫ್‌ಕ್ಯೂ) ಆಹ್ವಾನಿಸಿದೆ. ಈ ಯೋಜನೆಯು ಖಾಸಗಿ ವಲಯದಿಂದ ಸುಮಾರು ₹ 30 ಸಾವಿರ ಕೋಟಿ ಹೂಡಿಕೆ ತರುವ ನಿರೀಕ್ಷೆ ಇದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

 

ಕಳೆದ ವರ್ಷ ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಲಖನೌ-ದೆಹಲಿ ಮಾರ್ಗದಲ್ಲಿ ಮೊದಲ ಖಾಸಗಿ ಸಹಭಾಗಿತ್ವದ ತೇಜಸ್ ರೈಲಿಗೆ ಚಾಲನೆ ನೀಡುವ ಮೂಲಕ ಪೈಲಟ್ ಯೋಜನೆಗೆ ಚಾಲನೆ ನೀಡಿತ್ತು. ದೇಶದಲ್ಲಿ ಸದ್ಯ ವಾರಾಣಸಿ-ಇಂದೋರ್ ಮಾರ್ಗದಲ್ಲಿನ ಕಾಶಿ-ಮಹಾಕಾಲ ಎಕ್ಸ್‌ಪ್ರೆಸ್, ಅಹಮದಾಬಾದ್-ಮುಂಬೈ ಮಾರ್ಗದಲ್ಲಿನ ತೇಜಸ್ ಎಕ್ಸ್‌ಪ್ರೆಸ್ ರೈಲುಗಳನ್ನು ಐಆರ್‌ಸಿಟಿಸಿ ಸಹಭಾಗಿತ್ವದಲ್ಲಿ ಖಾಸಗಿವಲಯ ನಿರ್ವಹಿಸುತ್ತಿದೆ. ಆಧುನಿಕ ತಂತ್ರಜ್ಞಾನ, ಕಡಿಮೆ ನಿರ್ವಹಣೆ, ಉದ್ಯೋಗ ಸೃಷ್ಟಿ ಹೆಚ್ಚಳ, ಸುರಕ್ಷತೆಯನ್ನು ಒದಗಿಸುವುದು ಹಾಗೂ ಪ್ರಯಾಣಿಕರಿಗೆ ವಿಶ್ವ ದರ್ಜೆಯ ಪ್ರಯಾಣದ ಅನುಭವ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

 

ಖಾಸಗಿ ವಲಯಕ್ಕೆ ನೀಡಲಾಗುತ್ತಿರುವ 109 ಮಾರ್ಗಗಳನ್ನು 12 ಕ್ಲಸ್ಟರ್‌ಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ರೈಲು 16 ಬೋಗಿಗಳನ್ನು ಹೊಂದಿರಲಿದೆ. ಇದರಲ್ಲಿ ಬಹುತೇಕ ರೈಲುಗಳು ಮೇಕ್ ಇನ್ ಇಂಡಿಯಾ ಯೋಜನೆಯಡಿ ದೇಶೀಯವಾಗಿ ತಯಾರಿಸಲಾಗಿದ್ದು, ಇವುಗಳ ಹಣಕಾಸು, ಕಾರ್ಯಾಚರಣೆ ಹಾಗೂ ನಿರ್ವಹಣೆ ಜವಾಬ್ದಾರಿ ಖಾಸಗಿ ವಲಯಕ್ಕಿರುತ್ತದೆ. ಈ ರೈಲುಗಳು ಗರಿಷ್ಠ 160 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, ಪ್ರಯಾಣದ ಸಮಯದಲ್ಲಿ ಗಣನೀಯ ಇಳಿಕೆ ಕಂಡುಬರುತ್ತದೆ. ಈ ರೈಲುಗಳನ್ನು ರೈಲ್ವೆ ಇಲಾಖೆ ಚಾಲಕ ಮತ್ತು ಸಿಬ್ಬಂದಿಯೇ ನಿರ್ಕ್ಷಿಹಿಸುತ್ತಾರೆ.

 

ಆದರೆ ಖಾಸಗಿ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ರೈಲ್ವೆ ಇಲಾಖೆ ನಿರ್ದಿಷ್ಟಪಡಿಸಿದ ಮಾನದಂಡಗಳಿಂದ ನಿಯಂತ್ರಿಸಲಾಗುತ್ತದೆ. ಕರೊನಾ ಬಿಕ್ಕಟ್ಟು ಆರಂಭವಾಗುವ ಮೊದಲಿನಿಂದಲೂ ಖಾಸಗಿ ರೈಲುಗಳ ನಿರ್ವಹಣೆಗೆ ಆರ್.ಕೆ.ಕ್ಯಾಟರಿಂಗ್, ಅದಾನಿ ಪೋರ್ಟ್ಸ್ ಮತ್ತು ಮೇಕ್ ಮೈಟ್ರಿಪ್ ಮತ್ತು ಇಂಡಿಗೊ, ವಿಸ್ತಾರ್, ಸ್ಪೈಸ್ ಜೆಟ್ ಸೇರಿದಂತೆ ಅನೇಕ ಸಂಸ್ಥೆಗಳು ಆಸಕ್ತಿ ಹೊಂದಿವೆ ಎಂದು ಮೂಲಗಳು ತಿಳಿಸಿವೆ. ಮುಂಬೈ ಸೆಂಟ್ರಲ್-ನವದೆಹಲಿ, ನವದೆಹಲಿ- ಪಟನಾ, ಅಲಹಾಬಾದ್-ಪುಣೆ ಮತ್ತು ದಾದರ್-ವಡೋದರಾ ಸೇರಿದಂತೆ 100 ಮಾರ್ಗಗಳನ್ನು ಖಾಸಗಿ ವಲಯಕ್ಕೆ ವಹಿಸಲು ಪಟ್ಟಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

 

Find Out More:

Related Articles: