ಕೊರೋನಾ ನಿಯಂತ್ರಣಕ್ಕೆ ಇಂದು ನಡೆದ ಟಾಸ್ಕ್ ಪೋರ್ಸ್ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳೇನು..?
ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಕೊರೋನಾ ವೈರಸ್ ಇಂದಾಗಿ ನಿಜವಾಗಿಯೂ ಬೆಂಗಳೂರು ಬೆಚ್ಚಿ ಬಿದ್ದಿದೆ, ಕೊರೋನಾವನ್ನು ತಡೆಯಲು ಸರ್ಕಾರ ಏನೇ ಕ್ರಮವನ್ನು ಕೈಗೊಂಡರೂ ಕೂಡ ಎಲ್ಲವೂ ಕೂಡ ನೀರಿನಲ್ಲಿ ಹೋಮ ಮಾಡಿದಂತಾಗಿಹೋಗಿದೆ. ಹಾಗಾಗಿ ಈ ಕೊರೋನಾ ವೈರಸ್ ನನ್ನು ನಿಯಂತ್ರಿಸುವ ಉದ್ದೇಶದಿಂದ ಇಂದು ಟಾಸ್ಕ್ ಪೋರ್ಸ್ ಸಭೆಯನ್ನು ಮಾಡಲಾಯಿತು. ಅಷ್ಟಕ್ಕೂ ಈ ಟಾಸ್ಕ್ ಪೋರ್ಸ್ ನಲ್ಲಿ ಮಾಡಲಾದ ಚರ್ಚೆಗಳೇನು..?
ಬೆಂಗಳೂರು: ಕೋವಿಡ್-19 ನಿಯಂತ್ರಣವನ್ನು ಮಾಡುವುದಕ್ಕೆ ಏನೇನು ಮಾಡಬೇಕು? ಪರೀಕ್ಷೆಗಳ ಸಾಮರ್ಥ್ಯ ಹೆಚ್ಚಿಗೆ ಹೇಗೆ ಮಾಡಬೇಕು? ಕೋವಿಡ್ ನಿಯಂತ್ರಣಕ್ಕೆ ಅಗತ್ಯವಿರುವ ಏನೇನು ಔಷಧಿ, ಉಪಕರಣಗಳನ್ನು ಖರೀದಿಸಬೇಕೆಂದು ಇಂದಿನ ಟಾಸ್ಕ್ ಪೋರ್ಸ್ ಸಭೆಯಲ್ಲಿ ಚೆರ್ಚೆ ನಡೆಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಇಂದು ವಿಧಾನ ಸೌಧದಲ್ಲಿ ನಡೆದ ಟಾಸ್ಕ್ ಪೋರ್ಸ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 5 ಲಕ್ಷ ರ್ಯಾಪಿಡ್ ಆಯಂಟಿಜೆನ್ ಟೆಸ್ಟಿಂಗ್ ಕಿಟ್ ಗಳನ್ನು ಖರೀದಿಸಲು, ರೋಗ ಲಕ್ಷಣಗಳಿಲ್ಲದವರ ಚಿಕಿತ್ಸೆಗಾಗಿ ರೆಮೆಡಿಸ್ ಸಿಬಿ ಎಂಬ ಔಷಧಿ ಖರೀದಿ ಒಪ್ಪಿಗೆ ನೀಡಲಾಗಿದೆ ಎಂದರು.
ರೋಗಿಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಔಷಧಿಗಳ ಕಿಟ್ ಗಳ ಖರೀದಿಗಾಗಿ ಆಯುಷ್ ಇಲಾಖೆಯಿಂದ ಪ್ರಸ್ತಾವನೆ ಬಂದಿತ್ತು. ಈ ಪ್ರಸ್ತಾವನೆಯನ್ನು ಉನ್ನತ ಮಟ್ಟದ ಸಮಿತಿಗೆ ನೀಡಲಾಗಿದೆ. ಮುಂದಿನ ವಾರ ಸಮಿತಿ ವರದಿ ನೀಡಲಿದೆ ಎಂದು ಅವರು ತಿಳಿಸಿದರು.
ಆರೋಗ್ಯ ಹಾಗೂ ವೈದ್ಯಕೀಯ ಇಲಾಖೆಗಳಿಗೆ ಔಷಧಿ, ಉಪಕರಣಗ ಖರೀದಿಗಾಗಿ ಸುಮಾರು 500 ಕೋಟಿ ರೂ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ಈ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗಾಗಿ 4500/ ಶುಲ್ಕ ಪಡೆಯುತ್ತಿತ್ತು ಅದನ್ನು 3 ಸಾವಿರಕ್ಕೆ ಇಳಿಕೆ ಮಾಡಲಾಗಿದೆ. 3 ಸಾವಿರ ರೂ.ನಲ್ಲೇ ಎಲ್ಲಾ ಪರೀಕ್ಷೆಗಳು ಆಗಬೇಕು. ಅದನ್ನು ಬಿಟ್ಟು ಪಿಪಿಇ ಕಿಟ್ ಅಂತೆಲ್ಲಾ ಹಣ ಹಾಕಬಾರದು. ಅಂತೆಯೇ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ 2 ಸಾವಿರ ರೂಪಾಯಿ ನಿಗದಿಪಡಿ ಸಲಾಗಿದೆ ಎಂದು ಅವರು ತಿಳಿಸಿದರು.
ಮೆಡಿಕಲ್ ಕಾಲೇಜುಗಳಲ್ಲಿ ಆರ್‌ಟಿಪಿಸಿಆರ್ ಟೆಸ್ಟಿಂಗ್ ಗಳನ್ನು ಮತ್ತಷ್ಟು ಹೆಚ್ಚಳ ಮಾಡುವ ಮೂಲಕ ಪರೀಕ್ಷೆ ಸಂಖ್ಯೆ ಹೆಚ್ಚಳ ಮಾಡುವುದು. ಕೋವಿಡೇತರ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ತೀರ್ಮಾನ ಮಾಡಲಾಗಿದೆ. ಅವರಿಂದ ಒಪಿಡಿ ದರ 10 ರೂ. ಕೂಡ ಪಡೆಯದಿರಲು ತೀರ್ಮಾನ ಮಾಡಲಾಗಿದೆ. ಕೊರೋನಾ ವಾರಿಯರ್ಗಳಾಗಿ ದುಡಿಯುತ್ತಿರುವ ವೈದ್ಯರು, ನರ್ಸ್ಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಆಯುಷ್ ಮತ್ತು ಯುನಾನಿ ವೈದ್ಯರ ತಿಂಗಳ ಸಂಬಳವನ್ನು 48,000ಕ್ಕೆ ಏರಿಕೆ ಮಾಡಲಾಗಿದೆ. ಹಾಗೇ ತಿಂಗಳಿಗೆ 15 ಸಾವಿರ ರೂ.ಸಂಬಳ ಪಡೆಯುತ್ತಿದ್ದ ನರ್ಸ್ಗಳ ವೇತನವನ್ನು 30 ಸಾವಿರ ರೂ.ಗೆ ರದ್ವಿಗುಣಗೊಳಿಸಲು ತೀರ್ಮಾನಿಸಲಾಗಿದೆ.
ತಾತ್ಕಾಲಿಕವಾಗಿ ಕೋವಿಡ್ ಕಾರ್ಯನಿರ್ವಹಣೆಗೆ ನೇಮಕ ಮಾಡಿಕೊಳ್ಳುವ ಎಂಬಿಬಿಎಸ್ ವೈದ್ಯರಿಗೆ 80 ಸಾವಿರ ರೂ. ವೇತನ ನೀಡಲಾಗುವುದು. 6 ತಿಂಗಳ ಕಾಲ ಕರ್ನಾಟಕದ ನರ್ಸ್ಗಳ ವೇತನವನ್ನು 30 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಬಿಬಿಎಂಪಿ, ಆರೋಗ್ಯ, ಆಯುಷ್ ಎಲ್ಲ ನರ್ಸ್ಗಳಿಗೂ ಹೊಸ ವೇತನ ಅನ್ವಯವಾಗಲಿದೆ. ಇದುವರೆಗೂ 15 ಸಾವಿರ ರೂ.ವೇತನ ಪಡೆಯುತ್ತಿದ್ದ ನರ್ಸ್ ಗಳು ಇನ್ನುಮುಂದೆ 30 ಸಾವಿರ ರೂ. ವೇತನ ಪಡೆಯಲಿದ್ದಾರೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ವಸೂಲಿ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎನ್‌ಡಿಆರ್‌ಎಫ್ ಕೆಪಿಎಂಇ, ಎಪಿಡಮಿಕ್ ಕಾಯ್ದೆಗೆ ಅವಕಾಶವಿದೆ. ಖಾಸಗಿ ಆಸ್ಪತ್ರೆಗಳ ಜತೆ ಸಂಘರ್ಷದ ಹಾದಿ ಬೇಡ ಎಂದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಹೀಗಾಗಿ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕದ ಖಾಸಗಿ ಆಸ್ಪತ್ರೆಗಳಲ್ಲೂ ಆಯುಷ್ಮಾನ್ ಭಾರತ್ ಯೋಜನೆ ಅಡಿ ದರ ಪಡೆಯಬೇಕು. ಜಿಲ್ಲಾ ಸರಕಾರಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ನಿರ್ಣಯಿಸಲಾಗಿದೆ. ಜಿಲ್ಲಾ ಕೇಂದ್ರದ ಖಾಸಗಿ ಆಸ್ಪತ್ರೆಗಳು ನಾನ್ ಕೋವಿಡ್ ಸೇವೆಗೆ ಮೀಸಲಿರಲಿವೆ ಎಂದು ಅವರು ತಿಳಿಸಿದರು.