ಬೆಂಗಳೂರಿನಲ್ಲಿ ಕೊರೋನಾ ಸೋಂಕು ನಿರ್ವಹಣೆಗೆ ಮುಖ್ಯ ಮಂತ್ರಿಗಳು ಕೈಗೊಂಡ ನಿರ್ಧಾರ ಏನು ಗೊತ್ತಾ..?
ಕೊರೋನಾ ಸೋಂಕು ದಿನದಿಂದ ರಾಜ್ಯದಲ್ಲಿ ಹೆಚ್ಚಾಗುತ್ತಿರುವುದರಿಂದ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗಿತ್ತು, ನೆನ್ನೆಗೆ ಬೆಂಗಳೂನ ಲಾಕ್ ಡೌನ್ ಅನ್ನು ತೆಗೆಯಲಾಗಿದೆ. ಈ ಲಾಕ್ ಡೌನ್ ಸಮಯದಲ್ಲೂ ಕೂಡ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರದಿರುವುದರಿಂದ ಮುಖ್ಯಮಂತ್ರಿಗಳೇ ಬೆಂಗಳೂರಿನ ಕೊರೋನಾ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಹೌದು ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲಾಕ್ಡೌನ್ ಹೊರತಾಗಿಯೂ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡಬರುತ್ತಿರುವ ಹಿನ್ನಲೆಯಲ್ಲಿ ಖುದ್ಧು ಸಿಎಂ ಬಿಎಸ್ ಯಡಿಯೂರಪ್ಪ ಅವರು ಬೆಂಗಳೂರು ಕೊರೋನಾ ನಿರ್ವಹಣೆಯ ಮೇಲ್ವಿಚಾರಣೆ ನಡೆಸಲಿದ್ದಾರೆ.
ಈ ಹಿಂದೆ ಕೊರೋನಾ ನಿಯಂತ್ರಣದಲ್ಲಿ ದೇಶಕ್ಕೇ ಮಾದರಿಯಾಗಿದ್ದ ಬೆಂಗಳೂರಿನಲ್ಲಿ ದಿಢೀರ್ ಸೋಂಕಿತರ ಸಂಖ್ಯೆ ಗಗನದತ್ತ ಮುಖ ಮಾಡಿತ್ತು. ಇದರಿಂದ ಬೆಂಗಳೂರು ಕೂಡ ದೇಶದ ಇತರೆ ಪ್ರಮುಖ ನಗರಗಳಂತೆ ಕೊರೋನಾ ನಿಯಂತ್ರಣದಲ್ಲಿ ವಿಫಲವಾಗಿದೆ ಎಂದು ಅಪಖ್ಯಾತಿಗೆ ತುತ್ತಾಗಿತ್ತು. ಇದೇ ಕಾರಣಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಬೆಂಗಳೂರಿನ ಕುರಿತಂತೆ ವಿಶೇಷ ಕಾಳಜಿ ವಹಿಸಿದ್ದು, ಇಂದಿನಿಂದಲೇ ಬೆಂಗಳೂರು ಕೊರೋನಾ ನಿರ್ವಹಣೆ ಕುರಿತು ಸೂಕ್ಷ್ಮ ಮೇಲ್ವಿಚಾರಣೆ ನಡೆಸಲಿದ್ದಾರೆ. ಝೋನ್, ವಾರ್ಡ್ ಮಟ್ಟದಲ್ಲಿ ಬಿಎಸ್ ಯಡಿಯೂರಪ್ಪ ಅವರು ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದು, ನಗರದ 8 ವಲಯಗಳ ಉಸ್ತುವಾರಿಗಳಿಂದ ಆಗಾಗ್ಗೆ ಮಾಹಿತಿ ಪಡೆಯಲಿದ್ದಾರೆ. ಅಲ್ಲದೆ ಇಂದು ವಲಯ ಉಸ್ತುವಾರಿಗಳೊಂದಿಗೆ ಖುದ್ಧು ಸಭೆ ನಡೆಸಲಿದ್ದು, ಮಾಹಿತಿ ಪಡೆಯಲಿದ್ದಾರೆ.
ಬೆಂಗಳೂರಿನ ಮೈಸೂರು ರಸ್ತೆ ಪಶ್ಚಿಮ ಬೆಂಗಳೂರಿನಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದ್ದು, ಬೆಳಗ್ಗೆ 10ಗಂಟೆಗೆ ಈ ವಲಯದ ಉಸ್ತುವಾರಿಗಳೊಂದಿಗೆ ಸಿಎಂ ಸಭೆ ನಡೆಸಲಿದ್ದಾರೆ. ಬಳಿಕ ದಾಸರಹಳ್ಳಿ ಮತ್ತು ತುಮಕೂರು ರಸ್ತೆ ವಲಯದ ಉಸ್ತುವಾರಿಗಳು, ಬಳಿಕ ಬೊಮ್ಮನಹಳ್ಳಿ, ಹೊಸೂರು ರಸ್ತೆ, ಅಂತಿಮವಾಗಿ ಬೆಂಗಳೂರು ಪೂರ್ವವಲಯದ ಮಹಾದೇವಪುರ ಮತ್ತು ವೈಟ್ ಫೀಲ್ಡ್ ಕುರಿತು ಸಿಎಂ ಮಾಹಿತಿ ಪಡೆಯಲಿದ್ದಾರೆ.
ಈ ಸಭೆ ಇನ್ನೂ 2 ದಿನಗಳ ಕಾಲ ಮುಂದುವರೆಯಲಿದ್ದು, ನಾಳೆ ಸಿಎಂ ಬೆಂಗಳೂರು ಪೂರ್ವ ವಲಯದ ಗೋವಿಂದರಾಜನಗರ, ಶುಕ್ರವಾರ ಪಶ್ಚಿಮ ವಲಯ ಮತ್ತು ದಕ್ಷಿಣ ವಲಯ, ಯಲಹಂಕ ಕ್ಷೇತ್ರಗಳ ಮಾಹಿತಿ ಪಡೆಯಲಿದ್ದಾರೆ. ಈ ಎಲ್ಲ 10 ಸಭೆಗಳ ಮುಖ್ಯ ಉದ್ದೇಶ ರಾಜಧಾನಿಯಲ್ಲಿ ಕೊರೋನಾ ವೈರಸ್ ನಿಯಂತ್ರಣ. ಕೊರೋನಾ ನಿಯಂತ್ರಣ್ಕಕೆ ತೊಡಕಾಗಿರುವ ಸಮಸ್ಯೆಗಳನ್ನು ಮೊದಲು ಪರಿಶೀಲಿಸಿ ಅವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಮತ್ತು ಆ ಮೂಲಕ ಸೋಂಕು ನಿಯಂತ್ರಿಸುವುದು ಮುಖ್ಯ ಗುರಿಯಾಗಿದೆ.
ರಾತ್ರಿ ಕರ್ಫ್ಯೂ, ಭಾನುವಾರ ಲಾಕ್‌ಡೌನ್ ಮುಂದುವರಿಕೆ
ಇಂದಿನಿಂದ ಲಾಕ್‌ಡೌನ್ ತೆರವಾಗಲಿದೆ. ಸದ್ಯ ಲಾಕ್‌ಡೌನ್ ತೆರವಾದರೂ ಸಹ ಜನರ ಮುಕ್ತ ಸಂಚಾರಕ್ಕೆ, ಬೇಕಾಬಿಟ್ಟಿ ವರ್ತನೆಗೆ ಸರ್ಕಾರ ಅವಕಾಶ ನೀಡಿಲ್ಲ. ಈ ಸಂಬಂಧ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ ಇಡೀ ರಾತ್ರಿ ಕರ್ಫ್ಯೂ, ಭಾನುವಾರ ಲಾಕ್ಡೌನ್ ಮುಂದುರಿಸಿದೆ. ಜನ ಸಮೂಹ ನಿಯಂತ್ರಣಕ್ಕಾಗಿ ಜನ ವಸತಿ ಪ್ರದೇಗಳಲ್ಲಿ ಫುಟ್ ಪಾತ್ ಮತ್ತು ತಳ್ಳುವ ಗಾಡಿಗಳಲ್ಲಿ ಹಣ್ಣು ತರಕಾರಿ ವ್ಯಾಪಾರಕ್ಕೆ ಷರತ್ತುಬದ್ಧ ಅನುವು ಮಾಡಿಕೊಡಲಾಗಿದೆ. ಪಾರ್ಕ್ ಗಳ ಪ್ರವೇಶ, ಜಿಮ್ ಗಳ ಪ್ರವೇಶ ನಿಯಂತ್ರಿಸಲಾಗಿದೆ.