ರಾಮಮಂದಿರದ ಶಂಕುಸ್ಥಾಪನೆಯಲ್ಲಿ ಪ್ರಧಾನಿ ಮೋದಿ ದೇಶದ ಜನರಿಗೆ ಹೇಳಿದ್ದೇನು..?
'ಈ ಮಹತ್ವದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಾಗಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ನಾನು ಹೃದಯಪೂರ್ವಕ ಆಭಾರಿಯಾಗಿದ್ದಾನೆ. ಭಾರತವು ಇಂದು ಸೂರ್ಯನ ಸನ್ನಿಧಿಯಲ್ಲಿ, ಸರಯೂ ನದಿಯ ತೀರದಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ. ಪೂರ್ಣ ದೇಶವು ಇಂದು ರಾಮಮಯವಾಗಿದೆ. ಇಡೀದೇಶ ರೋಮಾಂಚಿತವಾಗಿದೆ. ಪ್ರತಿ ಮನಸ್ಸಿನಲ್ಲಿಯೂ ಜ್ಯೋತಿ ಬೆಳಗುತ್ತಿದೆ. ಪೂರ್ತಿ ಭಾರತ ಭಾವುಕವಾಗಿದೆ' ಎಂದು ಮೋದಿ ಹೇಳಿದರು.
ಹಲವು ವರ್ಷಗಳ ಕಾಯುವಿಕೆ ಇಂದು ಅಂತ್ಯವಾಗಿದೆ. ಕೋಟ್ಯಂತರ ಜನರು ಈ ಪವಿತ್ರ ದಿನ ನೋಡಲೆಂದು ಉಸಿರು ಬಿಗಿ ಹಿಡಿದಿದ್ದರು. ನಮ್ಮ ರಾಮಲಲ್ಲಾನಿಗಾಗಿ ಒಂದು ಭವ್ಯ ಮಂದಿರ ನಿರ್ಮಾಣವಾಗಲಿದೆ ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಕೆ: 'ಸ್ವಾತಂತ್ರ್ಯ ಹೋರಾಟದ ಸಂದರ್ಭ ಸಾಕಷ್ಟು ಜನರು ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ್ದರು. ದೇಶದ ಎಲ್ಲ ಭೂಭಾಗಗಳಲ್ಲಿಯೂ ಹೋರಾಟ ನಡೆದಿತ್ತು. ಆಗಸ್ಟ್ 15 ಎನ್ನುವುದು ಇಂಥ ಲಕ್ಷಾಂತರ ಬಲಿದಾನಗಳ ಪ್ರತೀಕ. ಸ್ವಾತಂತ್ರ್ಯ ಗಳಿಸಬೇಕೆನ್ನುವ ಭಾವನೆಗಳ ಪ್ರತೀಕ. ಇದೂ ಅಷ್ಟೇ. ರಾಮಮಂದಿರಕ್ಕಾಗಿ ಹಲವು ಪೀಳಿಗೆಗಳು ಅಖಂಡವಾಗಿ ಪ್ರಯತ್ನಿಸಿದ್ದವು. ಈ ದಿನವು ಅವರ ತ್ಯಾಗ ಮತ್ತು ಸಂಕಲ್ಪದ ಪ್ರತೀಕ. ರಾಮ ಮಂದಿರಕ್ಕಾಗಿ ನಡೆದ ಆಂದೋಲನದಲ್ಲಿ ಅರ್ಪಣೆ ಮತ್ತು ತರ್ಪಣ ಇತ್ತು. ಸಂಘರ್ಷ ಮತ್ತು ಸಂಕಲ್ಪ ಇತ್ತು. ಅವರ ತ್ಯಾಗ ಮತ್ತು ಬಲಿದಾನ ಮತ್ತು ಸಂಘರ್ಷದಿಂದ ಈ ಕನಸು ಇಂದು ನನಸಾಗುತ್ತಿದೆ. ಅವರ ಬದುಕು ರಾಮಮಂದಿರದ ಕನಸಿನೊಂದಿಗೆ ಬೆಸೆದುಕೊಂಡಿತ್ತು. ಅವರೆಲ್ಲರಿಗೂ ದೇಶದ 130 ಕೋಟಿ ದೇಶವಾಸಿಗಳ ಪರವಾಗಿ ಕೈಮುಗಿದು ನಮಿಸುತ್ತೇನೆ' ಎಂದು ಮೋದಿ ಹೇಳಿದರು.
ಸಂಪೂರ್ಣ ಸೃಷ್ಟಿಯ ಶಕ್ತಿ ರಾಮಜನ್ಮಭೂಮಿಯ ಪವಿತ್ರ ಆಂದೋಲನದೊಂದಿಗೆ ಜೋಡಿಸಿಕೊಂಡಿತ್ತು. ಬದುಕಿನ ಪ್ರೇರಣೆಗಾಗಿ ಇಂದಿಗೂ ನಾವು ರಾಮನತ್ತ ನೋಡುತ್ತೇವೆ. ಇತಿಹಾಸ ಪುಟಗಳಲ್ಲಿ ಏನೆಲ್ಲಾ ಆಗಿದ್ದರೂ ರಾಮ ಇಂದಿಗೂ ನಮ್ಮ ಮನದಲ್ಲಿ ವಿರಾಜಮಾನನಾಗಿದ್ದಾನೆ, ನಮ್ಮ ಸಂಸ್ಕೃತಿಯ ಆಧಾರವಾಗಿದ್ದಾನೆ. ರಾಮನ ಭವ್ಯದಿವ್ಯ ಮಂದಿರಕ್ಕಾಗಿ ಇಂದು ಭೂಮಿಪೂಜೆ ಆಗಿದೆ. ಇಲ್ಲಿಗೆ ಬರುವ ಮೊದಲು ನಾನು ಹನುಮಂತನ ಗುಡಿಗೆ ಹೋಗಿದ್ದೆ. ರಾಮನ ಕೆಲಸಗಳನ್ನು ಹನುಮ ಶ್ರದ್ಧೆಯಿಂದ ಮಾಡುತ್ತಿದ್ದ. ರಾಮನ ಮಂದಿರ ನಿರ್ಮಾಣದಿಂದ ಅಯೋಧ್ಯೆಯ ಭವ್ಯತೆ ಹೆಚ್ಚಾಗುವುದಷ್ಟೇ ಅಲ್ಲ. ಇಲ್ಲಿನ ವಾತಾವರಣವೇ ಬದಲಾಗಲಿದೆ. ಇಡೀ ಜಗತ್ತಿನಿಂದ ಜನರು ಪ್ರಭು ರಾಮ ಮತ್ತು ಜಾನಕಿಯ ದರ್ಶನಕ್ಕಾಗಿ ಇಲ್ಲಿಗೆ ಬರ್ತಾರೆ. ರಾಮ ಮಂದಿರ ನಿರ್ಮಾಣ ಪ್ರಕ್ರಿಯೆಯು ದೇಶವನ್ನು ಜೋಡಿಸುವ ಯತ್ನ. ಇದು ವಿಶ್ವಾಸವನ್ನು ವಿದ್ಯಮಾನದೊಂದಿಗೆ ಜೋಡಿಸುವ ಯತ್ನ ಎಂದು ಮೋದಿ ಹೇಳಿದರು.