ಪ್ರಧಾನಿ ಮೋದಿ ದೇಶದ ರೈತರ ಖಾತೆಗೆ ಜಮಾವಣೆಯನ್ನು ಮಾಡಿದ ಹಣವೆಷ್ಟು..?
ಬಲರಾಂ ಜಯಂತಿ ಹಾಗೂ ದಾವು ಜನ್ಮೋತ್ಸವ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ ನರೇಂದ್ರ ಮೋದಿ ಮಹತ್ವದ ಕೃಷಿ ಮೂಲಸೌಕರ್ಯ ನಿಧಿ ಯೋಜನೆಗೆ ಚಾಲನೆ ನೀಡಿದರು. ಕೃಷಿಕ ಸಮುದಾಯಕ್ಕೆ ಹಣಕಾಸು ನೆರವು ಕಲ್ಪಿಸಲು ಹೊಸ ಕೃಷಿ ಮೂಲಸೌಕರ್ಯ ನಿಧಿ ಯೋಜನೆಗೆ ₹ 1 ಲಕ್ಷ ಕೋಟಿ ರೂಪಾಯಿ ನೀಡಲಾಗಿದೆ ಎಂದರು.
ಈ ಹಣಕಾಸು ನೆರವಿನಿಂದ ಕೃಷಿ-ಉದ್ಯಮಿಗಳು, ಕೃಷಿ-ತಂತ್ರಜ್ಞಾನಿಗಳು, ರೈತ ಗುಂಪುಗಳಿಗೆ ಸಹಾಯವಾಗಲಿದೆ ಎಂದು ಮೋದಿ ಹೇಳಿದರು. ಈ ವಿಡಿಯೊ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ಮತ್ತು ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಕೋವಿಡ್-19 ಆರ್ಥಿಕ ಸಂಕಷ್ಟದಿಂದ ಹೊರಬರಲು ಕೇಂದ್ರ ಸರ್ಕಾರ 20 ಲಕ್ಷ ಸಾವಿರ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಅನ್ನು ಘೋಷಣೆ ಮಾಡಿತ್ತು. ಇದರ ಭಾಗವಾಗಿ ಕೃಷಿ ಮೂಲಸೌಕರ್ಯ ನಿಧಿಯ ಮೂಲಕ ರೈತರಿಗೆ ಹಣಕಾಸು ನೆರವು ನೀಡಲಾಗುತ್ತಿದೆ. ಬೆಳೆಗಳ ಕಟಾವು, ಮಾರಾಟ, ಸಂಗ್ರಹ, ಆಧುನಿಕ ಕೃಷಿ ಉಪಕರಣಗಳನ್ನು ಖರೀದಿಸಲು ರೈತರಿಗೆ ಈ ಯೋಜನೆ ನೆರವಾಗಲಿದೆ. ಈ ನಿಧಿಯಿಂದ ರೈತರು ಸಾಲ ಪಡೆಯಬಹುದು. ಇದಕ್ಕಾಗಿ ಪ್ರತಿ ವರ್ಷ 10 ಸಾವಿರ ಕೋಟಿಯನ್ನು ಬಿಡುಡೆ ಮಾಡಲಾಗುವುದು. ರೈತರು ತಾವು ಪಡೆದ ಸಾಲವನ್ನು 2 ವರ್ಷಗಳಲ್ಲಿ ಮರು ಪಾವತಿ ಮಾಡಬಹುದು.
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಪ್ರಧಾನಿ ಮೋದಿ ಭಾನುವಾರ ದೇಶದ 8.5 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ₹ 17,100 ಕೋಟಿ ರೂಪಾಯಿಗಳನ್ನು 6ನೇ ಕಂತಿನ ಭಾಗವಾಗಿ ವರ್ಗಾವಣೆ ಮಾಡಿದರು. 2018ರ ಡಿಸೆಂಬರ್ ನಲ್ಲಿ ಆರಂಭವಾದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಿಂದ ಸುಮಾರು 9 ಕೋಟಿ ರೈತರು ಹಣಕಾಸು ನೆರವು ಪಡೆಯುತ್ತಿದ್ದಾರೆ. ಇಲ್ಲಿಯವರೆಗೂ ₹ 75 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ರೈತರಿಗೆ ನೀಡಲಾಗಿದೆ.