ಕೋವಿಡ್ ಸಂಕಷ್ಟಕ್ಕೆ ಸಂಸದರ ವೇತನದಿಂದ ಕಡಿತವಾಗುವ ಹಣ ಎಷ್ಟು..?

Soma shekhar
ಕೊರೋನಾ ವೈರಸ್ ಇಂದಾಗಿ ಇಡೀ ದೇಶವೇ ತತ್ತರಿಸಿರುವಂತಹ ಈ ಸಂದರ್ಭದಲ್ಲಿ ದೇಶವನ್ನೇ ಎರಡು ತಿಂಗಳುಗಳ ಕಾಲ ಬಂದ್ ಮಾಡಲಾಗಿತ್ತು. ಇಂತಹ ಸಂದರ್ಭದಲ್ಲಿ ದೇಶದಲ್ಲಿ ಸಾಕಷ್ಟು ಆರ್ಥಿಕ ಸಮಸ್ಯೆಗಳು ಉದ್ಭವಿಸಿತು. ಇಂತಹ ಸಂದರ್ಭದಲ್ಲಿ ಅನೇಕ ಮಂದಿ ಪ್ರಧಾನಿ ಕೇರ್ ಫಂಡ್ ಗೆ ಸಾಕಷ್ಟು ಹಣ ಸಹಾಯವನ್ನು ಮಾಡುವುದು ಮೂಲಕ ದೇಶದ ಸಂಕಷ್ಟಕ್ಕೆ ಸ್ಪಂದಿಸಿದರು. ಇನ್ನು ಸರ್ಕಾರಿ ನೌಕರರು ಮಂತ್ರಿಗಳ ವೇತನದಲ್ಲಿ ಕೂಡ ಕಡಿತವನ್ನು ಮಾಡಲಾಯಿತು.. ಅದರಂತೆ  ಇಂದು ಸಂಸತ್ತಿನಲ್ಲಿ ಸಂಸದರು ತಮ್ಮ ವೇತನದಲ್ಲಿ 30ರಷ್ಟನ್ನು ಕಡಿತಗೊಳಿಸುವುದಕ್ಕೆ ಸರ್ವಾನುಮತಿಯನ್ನು ನೀಡಲಾಯಿತು.



ಹೌದು ಪ್ರತೀ ಬಾರಿಯೂ ಯಾವುದೇ ಚರ್ಚೆ ಇಲ್ಲದೇ, ಗದ್ದಲ-ಗಲಾಟೆಗಳಿಲ್ಲದೇ ಸರ್ವಾನುಮತದಿಂದ ಸಂಸತ್ತಿನಲ್ಲಿ ಪಾಸ್ ಆಗುತ್ತಿದ್ದ ಮಸೂದೆ ಎಂದರೆ ಅದು ಸಂಸದರ ವೇತನ ಮತ್ತು ಭತ್ಯೆ ಏರಿಕೆಯ ಮಸೂದೆ!ಆದರೆ ಕೋವಿಡ್ 19 ಸಂಕಷ್ಟಕ್ಕೆ ಈ ಬಾರಿ ಸಂಸದರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದರ ಪರಿಣಾಮವಾಗಿ ತಮ್ಮ ಒಂದು ವರ್ಷದ ಅವಧಿಯ ವೇತನದಿಂದ 30% ಕಡಿತ ಮಾಡಲು ಸಂಸತ್ ಸದಸ್ಯರು ಇಂದು ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ.



ಈ ಕುರಿತಾಗಿ ಸಂಸತ್ತಿನಲ್ಲಿ ಮಂಡಿಸಲಾಗಿದ್ದ ಸಂಸತ್ ಸದಸ್ಯರ ವೇತನ, ಭತ್ಯೆಗಳು ಮತ್ತು ಪಿಂಚಣಿ (ತಿದ್ದುಪಡಿ) ಮಸೂದೆ, 2020ಕ್ಕೆ ಅಂಗೀಕಾರ ದೊರೆತಿದೆ. ಸೋಮವಾರದಂದು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಈ ವರ್ಷದ ಪ್ರಾರಂಭದಲ್ಲಿ ಕೇಂದ್ರ ಸರಕಾರವು 'ಸಚಿವರ ವೇತನ ಮತ್ತು ಭತ್ಯೆಗಳು (ತಿದ್ದುಪಡಿ) ಸುಗ್ರೀವಾಜ್ಞೆ, 2020ರ ಮೂಲಕ ಪ್ರತೀ ಕೇಂದ್ರ ಸಚಿವರ ಒಂದು ವರ್ಷದ ವೇತನದಲ್ಲಿ 30% ಕಡಿತ ಮಾಡುವ ನಿರ್ಧಾರವನ್ನು ಮಾಡಿತ್ತು ಮತ್ತು ಈ ಕಡಿತ ಕಳೆದ ಎಪ್ರಿಲ್ 01ರಿಂದ ಜಾರಿಗೆ ಬರುವಂತೆ ಅನ್ವಯಗೊಳಿಸಲಾಗಿತ್ತು.



ಎಪ್ರಿಲ್ 5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಸಂಸತ್ ಸದಸ್ಯರು ಮತ್ತು ಸಚಿವರ ವೇತನ ತಿದ್ದುಪಡಿ ಮಾಡುವ ಸುಗ್ರೀವಾಜ್ಞೆಗೆ ಒಪ್ಪಿಗೆ ನಿಡಲಾಗಿತ್ತು. ಇದರ ಪ್ರಕಾರ ಸಂಸತ್ ಸದಸ್ಯರು ಹಾಗೂ ಕೇಂದ್ರ ಸಚಿವರ ಭತ್ಯೆ ಹಾಗೂ ಪಿಂಚಣಿ ಮೊತ್ತದಲ್ಲಿ 30% ಕಡಿತ ಮಾಡುವ ನಿರ್ಧಾರಕ್ಕೆ ಬರಲಾಗಿತ್ತು. ಮತ್ತು ಇದೇ ಸಂಪುಟ ಸಭೆಯಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯನ್ನೂ ಸಹ ಮುಂದಿನ ಎರಡು ವರ್ಷಗಳ ಕಾಲ ರದ್ದು ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಮತ್ತು ಈ ಮೊತ್ತವನ್ನು ಸರಕಾರದ ಸಮಗ್ರ ನಿಧಿಗೆ ವರ್ಗಾಯಿಸುವ ನಿರ್ಧಾರವನ್ನೂ ಸಹ ಈ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿತ್ತು.




ಸಂಸದರ ವೇತನ ಕಡಿತ ಮಸೂದೆಗೆ ಕೆಳಮನೆಯ ಅನುಮೋದನೆ ದೊರೆತ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾಬ್ಡೇಕರ್ ಅವರು, ರಾಷ್ಟ್ರಪತಿ ರಮಾನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಎಲ್ಲಾ ರಾಜ್ಯಗಳ ರಾಜ್ಯಪಾಲರೂ ಸಹ ತಮ್ಮ ತಮ್ಮ ವೇತನದ 30% ಕಡಿತಗೊಳಿಸುವಂತೆ ಕೇಳಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು.

Find Out More:

Related Articles: