ಕಳೆದ 24ಗಂಟೆಯಲ್ಲಿ ಕೊರೋನಾದಿಂದ ಚೇತರಿಸಿಕೊಂಡವರ ಸಂಖ್ಯೆ ಎಷ್ಟು ಗೊತ್ತಾ..?
ಹೌದು ಕೋವಿಡ್-19 ಹಾವಳಿ ತೀವ್ರಗೊಂಡಿರುವ ನಡುವೆಯೇ ರೋಗಿಗಳ ಚೇತರಿಕೆ ಪ್ರಮಾಣದಲ್ಲಿ ಎರಡನೇ ದಿನವೂ ದಾಖಲೆ ನಿರ್ಮಾಣವಾಗಿದೆ. ಕೇವಲ ಒಂದೇ ದಿನದಲ್ಲಿ ಸುಮಾರು 95.000 ಮಂದಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಮೊನ್ನೆ ಸುಮಾರು 96,000 ರೋಗಿಗಳು ಗುಣಮುಖರಾಗಿದ್ದರು. ಕಳೆದ 24 ತಾಸುಗಳ ಅವಧಿಯಲ್ಲಿ ಸೋಂಕು ಪ್ರಕರಣಕ್ಕಿಂತ ಚೇತರಿಕೆ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿರುವುದು ಮತ್ತು ಎರಡನೇ ದಿನವೂ ಅದು ಮುಂದುವರಿದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಕಿಲ್ಲರ್ ಕೊರೊನಾ ದಾಳಿಯ ಎರಡನೇ ಅಲೆ ಆತಂಕದ ನಡುವೆಯೇ, ವೈರಾಣು ಸೋಂಕು ಮತ್ತು ಸಾವು ಪ್ರಕರಣಗಳಲ್ಲಿ ಏರಿಳಿತದ ಆಟ ಮುಂದುವರಿದಿದ್ದು, ಭಾರತೀಯರನ್ನು ಮತ್ತಷ್ಟು ಭಯಭೀತಗೊಳಿಸಿದೆ. ಒಂದೇ ದಿನ 92,605 ಮಂದಿಗೆ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆ. ಇದೇ ವೇಳೆ, 94.612 ರೋಗಿಗಳು ಚೇತರಿಸಿಕೊಂಡಿರುವುದು ದಾಖಲೆಯಾಗಿದೆ.
ಒಂದೇ ದಿನ 1,133 (ಮೊನ್ನೆ 1,247) ರೋಗಿಗಳನ್ನು ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಸತತ 16ನೆ ದಿನ 1,000ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಇದರೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 86,752 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಭಾರತದಲ್ಲಿ 20 ದಿನಗಳಿಂದಲೂ ಸರಾಸರಿ 90,000 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ನಿನ್ನೆ 92,609 ಸೋಂಕು ಪ್ರಕರಣಗಳೊಂದಿಗೆ. ಒಟ್ಟು ರೋಗಿಗಳ ಸಂಖ್ಯೆ 54,00,619ಕ್ಕೇರಿದ್ದು, ನಾಳೆ ವೇಳೆಗೆ 55 ಲಕ್ಷ ಮೀರುವ ಸಾಧ್ಯತೆ ಇದೆ. ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷ ದಾಟಿತ್ತು.
ಕೇವಲ 11 ದಿನಗಳಲ್ಲಿ ಅಂದರೆ ಸೆ.15ರಂದು 50 ಲಕ್ಷ ದಾಟಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಅಕ್ಟೋಬರ್ ವೇಳೆಗೆ ದೇಶದಲ್ಲಿ 80 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ದಾಖಲಾಗುವ ಆತಂಕವಿದೆ. ಇದರ ನಡುವೆಯೂ ಚೇತರಿಕೆ ಪ್ರಮಾಣದಲ್ಲಿ ಶೇ.79.68ರಷ್ಟು ವೃದ್ದಿ ಕಂಡುಬಂದಿದ್ದು, ಈವರೆಗೆ ದೇಶದಲ್ಲಿ ಸುಮಾರು 6.37 ಕೋಟಿ ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡುಂದಿದ್ದರೂ, ಮತ್ತೊಂದೆಡೆ 10.10 ಲಕ್ಷ ಸಕ್ರಿಯ ಪ್ರಕರಣಗಳ ಹೆಚ್ಚಳವೂ ಸಹ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆಯೂ ಸುಮಾರು 43.63 ಲಕ್ಷ ಮಂದಿ ಹೆಮ್ಮಾರಿಯ ಬಿಗಿಹಿಡಿತದಿಂದ ಪಾರಾಗಿದ್ದಾರೆ. ದೇಶದಲ್ಲಿ ಈಗ 10,10,824 ಆಕ್ಟಿವ್ ಕೇಸ್‍ಗಳಿವೆ. 43,63,643 ಮಂದಿ ಚೇತರಿಸಿಕೊಂಡಿದ್ದು, ಗುಣಮುಖ ಪ್ರಕರಣ ಶೇ.79.68ಕ್ಕೇರಿದ್ದು, ಮರಣ ಪ್ರಮಾಣ ಶೇ.1.61ಕ್ಕೆ ಇಳಿದಿದೆ.