ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಘಟಕ ಭಾರತ್ಕೆ ನೀಡಿದ ಎಚ್ಚರಿಕೆ ಏನು..?
ಕೋವಿಡ್-19 ಸಾಂಕ್ರಾಮಿಕದಿಂದಾಗಿ ಉಂಟಾದ ವ್ಯತ್ಯಯಗಳ ಪರಿಣಾಮವಾಗಿ ಭಾರತದ ಆರ್ಥಿಕತೆಯು 2020ರಲ್ಲಿ ಶೇ.5.9ರಷ್ಟು ಸಂಕುಚಿತಗೊಳ್ಳಲಿದೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಘಟಕ (ಅಂಕ್ಟಾಡ್)ದ ವರದಿಯು ಅಂದಾಜಿಸಿದೆ. ಆರ್ಥಿಕ ಬೆಳವಣಿಗೆಯು 2021ರಲ್ಲಿ ಚೇತರಿಸಿಕೊಳ್ಳಲಿದೆಯಾದರೂ ಈ ವರ್ಷದ ಕುಸಿತವು ಶಾಶ್ವತ ಆದಾಯ ನಷ್ಟವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಯಿದೆ ಎಂದು ಅದು ಎಚ್ಚರಿಕೆ ನೀಡಿದೆ.
ಇನ್ನೂ ನಿಯಂತ್ರಣಕ್ಕೆ ಬಾರದ ಕೊರೋನ ವೈರಸ್ ಸಾಂಕ್ರಾಮಿಕದ ನಡುವೆ ವಿಶ್ವ ಆರ್ಥಿಕತೆಯು ತೀವ್ರ ಹಿಂಜರಿತಕ್ಕೊಳಗಾಗಿದೆ ಎಂದು ವ್ಯಾಪಾರ ಮತ್ತು ಅಭಿವೃಧ್ಧಿ ವರದಿ-2020 ಹೇಳಿದೆ.
ಈ ವರ್ಷ ಜಾಗತಿಕ ಆರ್ಥಿಕತೆಯು ಶೇ.4.3ರಷ್ಟು ಕ್ಷೀಣಿಸಲಿದೆ ಮತ್ತು ಇದರೊಂದಿಗೆ ವರ್ಷಾಂತ್ಯದ ವೇಳೆಗೆ ಜಾಗತಿಕ ಉತ್ಪನ್ನದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ಹರಡುವಿಕೆ ಆರಂಭಗೊಳ್ಳುವ ಮುನ್ನ ಆರ್ಥಿಕ ತಜ್ಞರು ನಿರೀಕ್ಷಿಸಿದ್ದಕ್ಕಿಂತ ಆರು ಲಕ್ಷ ಕೋಟಿ ಅಮೆರಿಕನ್ ಡಾಲರ್‌ಗಳ ಕೊರತೆಯಾಗಲಿದೆ ಎಂದು ಹೇಳಿರುವ ವರದಿಯು, ಬ್ರೆಝಿಲ್,ಭಾರತ ಮತ್ತು ಮೆಕ್ಸಿಕೋದ ಆರ್ಥಿಕತೆಗಳು ತೀವ್ರ ಹದಗೆಟ್ಟಿರುವುದರ ಬಿಸಿಯು ಇಡೀ ವಿಶ್ವಕ್ಕೇ ತಟ್ಟಿದೆ. ದೇಶೀಯ ಆರ್ಥಿಕ ಚಟುವಟಿಕೆಗಳು ಕುಗ್ಗಿದಾಗ ಅಂತರರಾಷ್ಟ್ರೀಯ ಆರ್ಥಿಕ ಚಟುವಟಿಕೆಗಳೂ ಕುಗ್ಗುತ್ತವೆ. ಈ ವರ್ಷ ವ್ಯಾಪಾರವು ಶೇ.20ರಷ್ಟು ಮತ್ತು ವಿದೇಶಿ ನೇರ ಹೂಡಿಕೆಗಳು ಶೇ.40ರವರೆಗೆ ಕುಸಿಯಲಿವೆ ಮತ್ತು ಹಣಕಾಸು ರವಾನೆಗಳು 100 ಶತಕೋಟಿ ಡಾ.ಗೂ ಹೆಚ್ಚಿನ ಇಳಿಕೆಯನ್ನು ಕಾಣಲಿವೆ ಎಂದು ತಿಳಿಸುವ ಮೂಲಕ ಜಾಗತಿಕ ಆರ್ಥಿಕತೆಯ ಕರಾಳ ಚಿತ್ರಣವನ್ನು ನೀಡಿದೆ.
ದಕ್ಷಿಣ ಏಶ್ಯಾದ ಆರ್ಥಿಕತೆಯು 2020ರಲ್ಲಿ ಶೇ.4.8ರಷ್ಟು ಸಂಕುಚಿತಗೊಳ್ಳಲಿದೆ ಮತ್ತು 2021ರಲ್ಲಿ ಶೇ.3.9ರಷ್ಟು ಚೇತರಿಸಿಕೊಳ್ಳಲಿದೆ. 2020ರಲ್ಲಿ ಭಾರತದ ಜಿಡಿಪಿಯು ಶೇ.5.9ರಷ್ಟು ಕ್ಷೀಣಿಸುವ ನಿರೀಕ್ಷೆಯಿದ್ದು,2021ರಲ್ಲಿ ಶೇ.3.9ರಷ್ಟು ಚೇತರಿಕೆಯನ್ನು ಕಾಣಲಿದೆ ಎಂದು ಅಂಕ್ಟಾಡ್ ತನ್ನ ವರದಿಯಲ್ಲಿ ಹೇಳಿದೆ.
ಭಾರತದಲ್ಲಿ ಕೊರೋನ ವೈರಸ್ ಪ್ರಸರಣವನ್ನು ತಡೆಯಲು ಹೇರಲಾಗಿದ್ದ ಕಠಿಣ ಲಾಕ್‌ಡೌನ್ ಕ್ರಮಗಳು ದೇಶಾದ್ಯಂತ ಹಲವಾರು ಉತ್ಪಾದಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದರಿಂದ 2020ರಲ್ಲಿ ತೀವ್ರ ಆರ್ಥಿಕ ಹಿಂಜರಿತವುಂಟಾಗಿದೆ ಎಂದಿರುವ ವರದಿಯು,ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಆರ್ಥಿಕತೆಯು ಪ್ರಗತಿ ದರಗಳಿಗೆ ಅನುಗುಣವಾಗಿ 2021ರಲ್ಲಿ ದೇಶದ ಆರ್ಥಿಕತೆಯು ಪುಟಿದೇಳಲಿದೆ ಎಂದಿದೆ.
2020ರಲ್ಲಿ ಅಮೆರಿಕದ ಆರ್ಥಿಕತೆಯು ಶೇ.5.4ರಷ್ಟು ಕುಸಿತವನ್ನು ಕಾಣಲಿದೆ ಮತ್ತು 2021ರಲ್ಲಿ ಶೇ.2.8ರಷ್ಟು ಚೇತರಿಸಿಕೊಳ್ಳಲಿದೆ. ಚೀನಾ ಈ ವರ್ಷ ಶೇ.1.3ರಷ್ಟು ಮತ್ತು 2021ರಲ್ಲಿ ಶೇ.8.1ರಷ್ಟು ಬೃಹತ್ ಆರ್ಥಿಕ ಬೆಳವಣಿಗೆಯನ್ನು ದಾಖಲಿಸುವ ನಿರೀಕ್ಷೆಯಿದೆ ಮತ್ತು ಇದು ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಪ್ರಗತಿದರವಾಗಲಿದೆ ಎಂದು ವರದಿಯು ತಿಳಿಸಿದೆ.