ವಿಧಾನಸಭೆಯ ಅಧಿವೇಶನದಲ್ಲಿ ಅಂಗೀಕಾರವಾದ ಮಸೂದೆಗಳಾವುವು..?
ಬುಧವಾರದ ವಿಧಾನಸಭೆ ಕಲಾಪದ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ಆರೋಗ್ಯ ಚೇತರಿಕೆ ಕಾಣಲಿ. ಅವರು ದೀರ್ಘಾಯುಷ್ಯ ಆಗಲಿ ಎಂದು ಪ್ರಾರ್ಥನೆ ಮಾಡುವೆ ಎಂದರು.
ಬಿ. ನಾರಾಯಣರಾವ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೋವಿಡ್ ಸೋಂಕು ತಗುಲಿದ ಬಳಿಕ ಶಾಸಕರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಾಸಕರಿಗೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಮಾಡಲಾಗಿದೆ. ಇಂದಿನ ಕಲಾಪದಲ್ಲಿ ಕರ್ನಾಟಕ ಲೋಕಾಯುಕ್ತ ತಿದ್ದುಪಡಿ ವಿಧೇಯಕ 2020, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಅಧಿನಿಯಮ ತಿದ್ದುಪಡಿ ವಿಧೇಯಕ, ಸಾಂಕ್ರಾಮಿಕ ರೋಗಗಳ ಕಾಯಿದೆ ತಿದ್ದುಪಡಿ ವಿಧೇಯಕ 2020ಕ್ಕೆ ಅಂಗೀಕಾರ ಪಡೆಯಲಾಗಿದೆ.
ವಿಧೇಯಕಗಳ ಅಂಗೀಕಾರ
ಬುಧವಾರ ವಿಧಾನಸಭೆಯಲ್ಲಿ ಕರ್ನಾಟಕ ಲೋಕಾಯುಕ್ತ ತಿದ್ದುಪಡಿ ವಿಧೇಯಕ 2020, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಅಧಿನಿಯಮ ತಿದ್ದುಪಡಿ ವಿಧೇಯಕಗಳು ಯಾವುದೇ ಚರ್ಚೆ ಇಲ್ಲದೇ ಅನುಮೋದನೆ ಗೊಂಡವು. ವಿಧೇಯಕ ಮಂಡನೆ ಮಾಡಿದಾಗ ಯಾವುದೇ ವಿರೋಧ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸಾಂಕ್ರಾಮಿಕ ರೋಗಗಳ ಕಾಯಿದೆ ತಿದ್ದುಪಡಿ ವಿಧೇಯಕ 2020 ಮಂಡನೆ ಮಾಡಿದಾಗ ಸದನದಲ್ಲಿ ಚರ್ಚೆ ನಡೆಯಿತು. ಕೋವಿಡ್ ನಂತಹ ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ ಕೊಡುವ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯೆ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬರಲಿದೆ. "ಕಾಯ್ದೆಯಡಿಯಲ್ಲಿ ಕೆಲವೊಂದು ತಿದ್ದುಪಡಿ ಮಾಡುವ ಅಗತ್ಯ ಇದೆ. ಜಂಟಿ ಪರಿಶೀಲನಾ ಸಮಿತಿಗೆ ವಹಿಸುವಂತೆ ಸೂಚಿಸಿ. ಆನಂತರ ಬೇಕಾದರೆ ಸುಗ್ರೀವಾಜ್ಞೆ ತನ್ನಿ" ಎಂದು ಕಾಂಗ್ರೆಸ್ ಸದಸ್ಯ ಎಚ್. ಕೆ. ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು.
ಕಾನೂನು ಸಚಿವ ಮಾಧುಸ್ವಾಮಿ ಅವರು ಮಾತನಾಡಿ, "ಈಗ ತಿದ್ದುಪಡಿ ಮಾಡುವುದು ಕಷ್ಟ. ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ಆಸ್ತಿ-ಪಾಸ್ತಿ ಹಾನಿ ಮಾಡಿದ್ದಾರೆ. ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದಿದೆ. ಕೆಲವು ಕಡೆ ಕೂಡಿ ಹಾಕಿದ್ದಾರೆ. ಈಗಾಗಲೇ ಸುಗ್ರೀವಾಜ್ಞೆ ತರಲಾಗಿದೆ, ಹೀಗಾಗಿ ಈ ಬಿಲ್ ಪಾಸ್ ಮಾಡಿಕೊಡಿ" ಎಂದು ಮನವಿ ಮಾಡಿದರು.