
ಪ್ರಧಾನಿ ಮೋದಿ ಏಳು ರಾಜ್ಯಗಳ ಸಿಎಂಗಳಿಗೆ ನೀಡಿದ ಸಲಹೆ ಏನು ಗೊತ್ತಾ..?
ಕೊರೊನಾವನ್ನು ಲಘುವಾಗಿ ಪರಿಗಣಿಸಬೇಡಿ, ಕಿರಿಕಿರಿ ಅನ್ನಿಸಿದರೂ ಮಾಸ್ಕ್ ಮರೆಯಬೇಡಿ ಎಂದು ಪ್ರಧಾನಿ ಮೋದಿ ಅವರು ಏಳು ರಾಜ್ಯಗಳ ಸಿಎಂಗಳಿಗೆ ಸಲಹೆ ನೀಡಿದ್ದಾರೆ. ಕೊರೊನಾ ಹೆಚ್ಚಿರುವ ಈ ಏಳು ರಾಜ್ಯಗಳ ಸಿಎಂಗಳ ಜತೆ ಅವರು ಬುಧವಾರ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿದರು.
ಪರೀಕ್ಷೆ, ಶೋಧ ಮತ್ತು ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡುವಂತೆಯೂ ಪ್ರಧಾನಿ ಸೂಚಿಸಿ ದರು. ಕೆಲವು ಕಡೆಗಳಲ್ಲಿ ಜನರು ಕೊರೊನಾವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಬಗ್ಗೆ ಸರಕಾರಗಳು ಅರಿವು ಮೂಡಿಸಬೇಕು. ಕಿರಿಕಿರಿ ಯಾಗುತ್ತಿದ್ದರೂ ಮಾಸ್ಕ್ ಧರಿಸುವುದನ್ನು ಬಿಡಬಾರದು ಎಂದು ಪ್ರಧಾನಿ ಜನರಲ್ಲಿ ಮನವಿ ಮಾಡಿದ್ದಾರೆ.
ಪರೀಕ್ಷೆ ಕೆಟ್ಟದಲ್ಲ
ಜನರಲ್ಲಿ ಕೊರೊನಾ ಪರೀಕ್ಷೆ ಬಗ್ಗೆ ತಪ್ಪು ಅಭಿಪ್ರಾಯಗಳಿವೆ. ಕೆಲವರು ಕೊರೊನಾದ ತೀವ್ರತೆಯನ್ನೇ ತಪ್ಪಾಗಿ ಗ್ರಹಿಸಿದ್ದಾರೆ. ಯಾವುದೇ ಕಾರಣಕ್ಕೂ ಕೊರೊನಾವನ್ನು ಲಘುವಾಗಿ ಪರಿಗಣಿಸಬಾರದು ಎಂದು ಹೇಳಿದರು. ಹೆಚ್ಚು ಪರೀಕ್ಷೆ ನಡೆಸುವಂತೆ ಕರೆ ನೀಡಿದರು.
ವೆಚ್ಚ ಮಿತಿ ಹೆಚ್ಚಳ
ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯಗಳು ವೆಚ್ಚ ಮಾಡುವ ರಾಜ್ಯ ವಿಪತ್ತು ನಿರ್ವಹಣ ನಿಧಿ (ಎಸ್‌ಡಿಆರ್‌ಎಫ್)ಯ ಮಿತಿಯನ್ನು ಶೇ.35ರಿಂದ ಶೇ.50ಕ್ಕೆ ಹೆಚ್ಚಳ ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿದೆ.
ಭಾಗವಹಿಸಿದ ರಾಜ್ಯಗಳು
ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ಉತ್ತರ ಪ್ರದೇಶ, ತಮಿಳುನಾಡು, ದಿಲ್ಲಿ ಮತ್ತು ಪಂಜಾಬ್ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ಜತೆಗಿನ ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ರಾಜ್ಯಗಳೇ ಶೇ. 65ರಷ್ಟು ಸಕ್ರಿಯ ಪ್ರಕರಣಗಳನ್ನು ಹೊಂದಿವೆ. ಹಾಗೆಯೇ ಒಟ್ಟಾರೆ ಸಾವಿನಲ್ಲಿ ಈ ರಾಜ್ಯಗಳ ಪಾಲು ಶೇ.77ರಷ್ಟಿದೆ.
ಪರೀಕ್ಷೆ ಹೆಚ್ಚಳ: ಬಿಎಸ್‌ವೈ
ಸಭೆಯಲ್ಲಿ ಭಾಗಿಯಾಗಿದ್ದ ಸಿಎಂ ಬಿಎಸ್‌ವೈ, ಕರ್ನಾಟಕದಲ್ಲಿ ಪರೀಕ್ಷೆ ಹೆಚ್ಚಿಸಲಾಗಿದೆ. ಪಾಸಿಟಿವ್ ಬಂದಿರುವ ಪ್ರಕರಣದಲ್ಲಿ ರೋಗ ಲಕ್ಷಣವಿದ್ದವರನ್ನು ತತ್‌ಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. 24 ತಾಸುಗಳಲ್ಲಿ ಎಲ್ಲ ಪಾಸಿಟಿವ್ ಪ್ರಕರಣಗಳ ಸಂಪರ್ಕಿತರನ್ನು ಗುರುತಿಸಲು ಮತ್ತು 48 ತಾಸುಗಳೊಳಗೆ ಕ್ವಾರಂಟೈನ್ ಮಾಡುವ ಗುರಿ ಇದೆ ಎಂದು ಮಾಹಿತಿ ನೀಡಿದರು.