ಕೃಷಿ ಮಸೂದೆಗೆ ವ್ಯಕ್ತವಾಗಿರುವ ಆರೋಪಗಳಿಗೆ ಪ್ರಧಾನಿಯ ಪ್ರತಿಕ್ರಿಯೆ ಏನು..?
ಕೇಂದ್ರ ಸರ್ಕಾರ ಎರಡೂ ಸದನಗಳಲ್ಲಿ ಅನುಮೋದನೆಯನ್ನು ಪಡೆದು ಅಂಗೀಕಾರವಾಗಿರುವವ ಕೃಷಿ ಮಸೂದೆಗೆ ವಿರೋಧ ಪಕ್ಷಗಳ ವಿರೋಧ ಸಾಕಷ್ಟಿತ್ತು, ಇದರ ಜೊತೆಗೆ ಇಡೀ ದೇಶದಾಧ್ಯಂತ ಈ ಕೃಷಿ ಮಸೂದೆಯನ್ನು ವಿರೋಧಿಸಿ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿದೆ. ಈ ಕುರಿತು ಪ್ರಧಾನಿ ಮೋದಿಯವರು ಪ್ರತಿಕ್ರಿಯೆಯೊಂದನ್ನು ನೀಡಿದ್ದಾರೆ
ಹೌದು ಹಿಂದಿನ ಸರ್ಕಾರಗಳು ತಂದಿದ್ದ ಹಲವು ಭರವಸೆಗಳು, ಕಾನೂನುಗಳು ಜಟಿಲವಾಗಿದ್ದವು, ರೈತರಿಗೆ ಅರ್ಥವಾಗುತ್ತಿರಲಿಲ್ಲ. ಆದರೆ ನಮ್ಮ ಎನ್ ಡಿಎ ಸರ್ಕಾರ ಸತತವಾಗಿ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದು ರೈತರ ಕಲ್ಯಾಣಕ್ಕಾಗಿ ಹಲವು ಸುಧಾರಣೆಗಳನ್ನು ತರುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಇಂದು ದೆಹಲಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯ ಸ್ಥಾಪನೆ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕಳೆದ ಕೆಲ ವರ್ಷಗಳಲ್ಲಿ ಎನ್ ಡಿಎ ಸರ್ಕಾರ ಬ್ಯಾಂಕುಗಳ ಜೊತೆ ರೈತರನ್ನು ನಿರಂತರವಾಗಿ ಸಂಪರ್ಕಿಸುವ ಸಂಪೂರ್ಣ ಪ್ರಯತ್ನ ಮಾಡಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ 10 ಕೋಟಿಗೂ ಅಧಿಕ ರೈತರ ಖಾತೆಗಳಿಗೆ 1 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು ಅತಿ ಹೆಚ್ಚು ರೈತರಿಗೆ ನೀಡುವ ಮೂಲಕ ಅವರಿಗೆ ಸುಲಭವಾಗಿ ಸಾಲ ದೊರಕುವಂತೆ ಮಾಡುವುದು ನಮ್ಮ ಪ್ರಯತ್ನವಾಗಿದೆ ಎಂದು ಪ್ರಧಾನಿ ಹೇಳಿದರು.
ತಳಮಟ್ಟದಲ್ಲಿ ರೈತರನ್ನು ತಲುಪುವ ಕೆಲಸವನ್ನು ಎಲ್ಲಾ ಬಿಜೆಪಿ ಕಾರ್ಯಕರ್ತರು ಮಾಡಬೇಕು, ನೂತನ ಕೃಷಿ ಮಸೂದೆ, ಅದರ ಅಗತ್ಯದ ಬಗ್ಗೆ, ಮಸೂದೆಯಲ್ಲಿ ಏನಿದೆ ಎಂದು ರೈತರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಿ ಹೇಳಬೇಕು. ಕೃಷಿ ಮಸೂದೆ ಬಗ್ಗೆ ಹಬ್ಬಿಸುತ್ತಿರುವ ವದಂತಿಗಳು, ಸುಳ್ಳು ಆರೋಪಗಳನ್ನು ಹೊಸಕಿ ಹಾಕಬೇಕಾಗಿದೆ ಎಂದು ಪ್ರಧಾನಿ ಹೇಳಿದರು.
ಹೊಸ ಭೂ ಸುಧಾರಣಾ ಕಾಯ್ದೆಯಿಂದ ನಮ್ಮ ಕಾರ್ಮಿಕ ವರ್ಗದ ಜೀವನ ಬದಲಾಗಲಿದೆ. ಇದುವರೆಗೆ ಶೇಕಡಾ 30ರಷ್ಟು ಮಾತ್ರ ಕಾರ್ಮಿಕರು ದೇಶಾದ್ಯಂತ ಕನಿಷ್ಠ ವೇತನ ಖಾತ್ರಿ ಯೋಜನೆಯಡಿ ಭಾಗಿಯಾಗುತ್ತಿದ್ದರು, ಅಂದರೆ ಅಷ್ಟು ಜನರಿಗೆ ಮಾತ್ರ ಸೌಲಭ್ಯ ತಲುಪುತ್ತಿತ್ತು. ಇದೀಗ ಅಸಂಘಟಿತ ವಲಯದ ಎಲ್ಲಾ ಉದ್ಯಮಗಳು, ಕೈಗಾರಿಕೆಗಳ ಕಾರ್ಮಿಕರಿಗೆ ವಿಸ್ತರಣೆಯಾಗಲಿದೆ ಎಂದರು.