
ಕೊರೋನಾ ಟೆಸ್ಟ್ ಜೊತೆಗೆ ಕ್ಷಯರೋಗದ ಟೆಸ್ಟೂ ಮಾಡಿಸಬೇಕಂತೆ..!!
ಹೌದು ಕೊರೋನಾ ಮತ್ತು ಕ್ಷಯ ರೋಗ ಈ ಎರಡೂ ಖಾಯಿಲೆಗಳು ಶ್ವಾಸಕೋಶದ ಮೇಲೆ ದಾಳಿ ನಡೆಸುವಂತಹದ್ದು. ಇವೆರೆಡರ ರೋಗ ಲಕ್ಷಣಗಳಲ್ಲೂ ಸಾಮ್ಯತೆಯಿರುವ ಇದೆ. ಇದೇ ಕಾರಣಕ್ಕೆ ಇನ್ಮೇಲೆ ಕೊರೋನಾ ಪರೀಕ್ಷೆಗೆ ಒಳಗಾಗುವವರು ಕಡ್ಡಾಯವಾಗಿ ಕ್ಷಯರೋಗ ಪರೀಕ್ಷೆಯನ್ನೂ ಮಾಡಿಸಲೇಬೇಕು ಎಂಬ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ.
ಇತರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಕ್ಷಯರೋಗದಿಂದ ಮೃತಪಡುವವರ ಸಂಖ್ಯೆ ಅಧಿಕವಾಗಿಯೇ ಇದೆ. ಇದೇ ಕಾರಣಕ್ಕೆ ದಶಕಗಳಿಂದ ಕೇಂದ್ರ ಸರ್ಕಾರ ಈ ರೋಗಕ್ಕೆ ಉಚಿತ ಚಿಕಿತ್ಸೆ ನೀಡುತ್ತಿದೆ ಮತ್ತು ಈ ಕುರಿತು ವ್ಯಾಪಕ ಅರಿವು ಮೂಡಿಸುವ ಕೆಲಸಕ್ಕೂ ಮುಂದಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕ್ಷಯ ರೋಗಿಗಳ ಪತ್ತೆಯಲ್ಲಿ ಶೇ.36ರಷ್ಟು ಕುಸಿತವಾಗಿದೆ. ಕ್ಷಯ ರೋಗ ಪತ್ತೆ ಕಡಿಮೆಯಾಗಿರುವುದರಿಂದ ಈ ಕಾಯಿಲೆಯಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಬಹುದು ಹಾಗೂ ಕ್ಷಯ ರೋಗ ಹರಡಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಈ ರೋಗ ಪತ್ತೆಗೆ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಅನೇಕ ಕ್ಷಯ ರೋಗಿಗಳು ಕೊರೋನಾ ಭಯಕ್ಕೆ ಮನೆಯಲ್ಲೇ ಉಳಿಯುತ್ತಿದ್ದಾರೆ. ಇದರಿಂದ ಮನೆಯ ಉಳಿದ ಸದಸ್ಯರಿಗೂ ಕಾಯಿಲೆ ಹರಡುತ್ತದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಸಂಬಂಧಿತ ರೋಗಲಕ್ಷಣ ಇರುವ ಎಲ್ಲರಿಗೂ ಟಿಬಿ ಸೋಂಕಿನ ಪರೀಕ್ಷೆಯೂ ಕಡ್ಡಾಯವಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಎಲ್ಲಾ ಕೊರೋನಾ ರೋಗಿಗಳನ್ನು ಕ್ಷಯ ರೋಗ ಲಕ್ಷಣಗಳಿಗಾಗಿ ಪರೀಕ್ಷೆ ನಡೆಸಬೇಕು ಮತ್ತು ಎಲ್ಲ ಕ್ಷಯ ರೋಗಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಮತ್ತು ಹತ್ತು ದಿನಗಳನ್ನು ಮೀರಿ ಇನ್‌ಫ್ಲುಯೆಂಜಾ ರೀತಿಯ ಕಾಯಿಲೆ (ಐಎಲ್‌ಐ), ತೀವ್ರ ಉಸಿರಾಟದ ತೊಂದರೆ (ಸಾರಿ) ಇದ್ದವರಿಗೆ ಕ್ಷಯ ರೋಗ ಪರೀಕ್ಷೆಗೆ ಒಳಪಡಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಾವೇದ್ ಅಖ್ತರ್ ರಾಜ್ಯದ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಕ್ಷಯರೋಗ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಅದರ ಸಂಬಂಧಿತ ಚಿಕಿತ್ಸೆ ಮುಂದುವರಿಸಲಾಗುತ್ತದೆ. ಕೊರೊನಾ ಮತ್ತು ಟಿಬಿ ಎರಡೂ ಪಾಸಿಟಿವ್ ಬಂದರೆ ಎರಡಕ್ಕೂ ಒಟ್ಟಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದು ಸಾವಿನ ಪ್ರಮಾಣ ತಗ್ಗಿಸುವ ಜೊತೆಗೆ ಸೋಂಕಿನ ತೀವ್ರತೆಯನ್ನು ಆರಂಭದಲ್ಲೇ ಪತ್ತೆ ಹಚ್ಚಲು ಸಹಕಾರಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.