ಪಾಕಿಸ್ತಾನದ ಮೇಲೆ ಚೀನಾ ಹೇರಿರುವ ಒತ್ತಡ ಏನು ಗೊತ್ತಾ..?

frame ಪಾಕಿಸ್ತಾನದ ಮೇಲೆ ಚೀನಾ ಹೇರಿರುವ ಒತ್ತಡ ಏನು ಗೊತ್ತಾ..?

Soma shekhar

ಕಾಶ್ಮೀರ ಕಣಿವೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಉಗ್ರಗಾಮಿಗಳಿಗೆ ಪೂರೈಸಿ ಶಾಂತಿ ಕದಡಲು ಪಾಕಿಸ್ತಾನಕ್ಕೆ ಕುಮ್ಮಕ್ಕು ನೀಡುತ್ತಿರುವ ಚೀನಾದ ಮತ್ತೊಂದು ಆಘಾತಕಾರಿ ಕುತಂತ್ರ ಬಹಿರಂಗಗೊಂಡಿದೆ. ಭಾರತಕ್ಕೆ ಸೇರಬೇಕಾಗಿರುವ ಪ್ರದೇಶವಾದ ಗಿಲ್ಗಿಟ್-ಬಲ್ಟಿಸ್ತಾನ್‍ಗಳನ್ನು(ಜಿ-ಬಿ ರೀಜನ್) ದೇಶದ ಮುಖ್ಯ ಪ್ರದೇಶದಲ್ಲಿ ವಿಲೀನಗೊಳಿಸುವಂತೆ ಪಾಕಿಸ್ತಾನದ ಮೇಲೆ ಚೀನಾ ಭಾರೀ ಒತ್ತಡ ಹೇರುತ್ತಿದೆ. ಇದು ಭಾರತಕ್ಕೆ ಮತ್ತೊಂದು ಆತಂಕಕಾರಿ ಸಂಗತಿಯಾಗಿದೆ.





ಭಾರತದ ವಿರುದ್ಧ ಏಷ್ಯಾದ ಈ ಎರಡು ಪ್ರಬಲ ವೈರಿ ದೇಶಗಳು ಸದಾ ಹಗೆತನದ ವಿಷ ಕಾರುತ್ತಿದ್ದು, ಈಗ ಗಿಲ್ಗಿಟ್-ಬಲ್ಟಿಸ್ತಾನ್ ಪ್ರದೇಶಗಳ ವಿಷಯದಲ್ಲಿ ಮತ್ತೆ ದೊಡ್ಡ ಕ್ಯಾತೆ ತೆಗೆಯಲು ಸಜ್ಜಾಗಿವೆ.ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆ ತ್ವರಿತವಾಗಿ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಜಿ-ಬಿ ಪ್ರಾಂತ್ಯಗಳನ್ನು ಪಾಕ್‍ನ ಮುಖ್ಯ ಪ್ರದೇಶದೊಳಗೆ ವಿಲೀನ ಮಾಡುವುದು ಅನಿವಾರ್ಯವಾಗಿದೆ ಎಂದು ಕಮ್ಯೂನಿಸ್ಟ್ ರಾಷ್ಟ್ರವು ಇಸ್ಲಾಂ ದೇಶಕ್ಕೆ ದುರ್ಬೋಧನೆ ಮಾಡಿದೆ.





ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಪದೇ ಪದೇ ತಗಾದೆ ತೆಗೆಯುತ್ತಿರುವ ಪಾಕಿಸ್ತಾನ ಈಗ ಚೀನಾದ ಈ ಒತ್ತಡದಿಂದ ಮತ್ತಷ್ಟು ಪ್ರಲೋಭನೆಗೊಂಡಿದೆ.  ಕಾಶ್ಮೀರ ಮತ್ತು ಗಿಲ್ಗಿಟ್-ಬಲ್ಟಿಸ್ತಾನ್ ವ್ಯವಹಾರಗಳ ಸಚಿವ ಅಲಿ ಅಮಿನ್ ಗಂಡಾಪುರ್ ನೀಡಿರುವ ಹೇಳಿಕೆಯೊಂದು ಇದಕ್ಕೆ ಪುಷ್ಟಿ ನೀಡಿದೆ.ಜಿ-ಬಿ ಸ್ಥಾನಮಾನಗಳನ್ನು ಸಂಪೂರ್ಣವಾಗಿ ಬದಲಿಸಿ ಅದನ್ನು ಪೂರ್ಣಪ್ರಮಾಣದ ಪ್ರಾಂತ್ಯವನ್ನಾಗಿ ಮಾಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಸದ್ಯದಲ್ಲೇ ಈ ಪ್ರದೇಶಗಳಿಗೆ ತೆರಳಿ ಈ ಬಗ್ಗೆ ಅಕೃತ ಘೋಷಣೆ ಹೊರಡಿಸಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.




ಇದೇ ಸಂದರ್ಭದಲ್ಲಿ ಜಿ-ಬಿ ಪ್ರದೇಶಗಳನ್ನು ಪಾಕಿಸ್ತಾನದ ಮುಖ್ಯ ಪ್ರದೇಶಕ್ಕೆ ಸೇರಿಸಬೇಕೆಂದು ಚೀನಾ ಒತ್ತಡ ಹೇರುತ್ತಿರುವುದು ಭಾರತಕ್ಕೆ ಮತ್ತೊಂದು ಆತಂಕದ ಸಂಗತಿಯಾಗಿದೆ. ಗಿಲ್ಗಿಟ್-ಬಲ್ಟಿಸ್ತಾನ್ ಏಷ್ಯಾದ ಅತ್ಯಂತ ಪ್ರಮುಖ ಭಾಗ. ಇದು ಈ ಖಂಡದ ಮೂರು ಅಣ್ವಸ್ತ್ರ ಶಕ್ತಿಶಾಲಿ ದೇಶಗಳಾದ ಭಾರತ, ಚೀನಾ ಮತ್ತು ಪಾಕಿಸ್ತಾನಕ್ಕೆ ಅತ್ಯಂತ ಮುಖ್ಯ ಪ್ರದೇಶವಾಗಿದೆ.ಚೀನಾ ಈಗಾಗಲೇ ಈ ಪ್ರಾಂತ್ಯದಲ್ಲಿರುವ ಅತ್ಯಂತ ಅಮೂಲ್ಯ ಖನಿಜ ಸಂಪತ್ತನ್ನು ಲೂಟಿ ಮಾಡಿದೆ. ಸಿಪಿಇಸಿ ಯೋಜನೆ ನೆಪದಲ್ಲಿ ಚೀನಾ ಮತ್ತು ಪಾಕ್ ಈ ಪ್ರದೇಶದಲ್ಲಿ ಅಭಿವೃದ್ದಿ ಕಾಮಗಾರಿಗಳ ಮೂಲಕ ಪರಿಸರವನ್ನು ಹಾಳು ಮಾಡಿವೆ.





ವಾಸ್ತವವಾಗಿ ಭಾರತಕ್ಕೆ ಸೇರಬೇಕಾದ ಜಿ-ಬಿ ಪ್ರದೇಶಗಳನ್ನು ಕಬಳಿಸಲು ಪಾಕಿಸ್ತಾನ ನಡೆಸುತ್ತಿರುವ ಹುನ್ನಾರಕ್ಕೆ ಅದರ ಪರಮಾಪ್ತ ಮಿತ್ರ ದೇಶ ಚೀನಾ ಕುಮ್ಮಕ್ಕು ನೀಡುತ್ತಿರುವುದು ಆಘಾತಕಾರಿ ವಿದ್ಯಮಾನವಾಗಿದೆ.  



Find Out More:

Related Articles: