ಹಾಥರಸ್ನ ಅತ್ಯಾಚಾರ ಪ್ರಕರಣ ಕುರಿತು ಸುಪ್ರಿಕೋರ್ಟ್ ತಿಳಿಸಿದ್ದೇನು..?
ಘಟನೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಸತ್ಯಂ ದುಬೆ ಎಂಬುವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಕೋರ್ಟ್, ಸಾಕ್ಷಿಗಳಿಗೆ ರಕ್ಷಣೆ ನೀಡುವ ವಿಚಾರವಾಗಿ ಮತ್ತು ಸಂತ್ರಸ್ತೆಯ ಕುಟುಂಬದವರು ವಕೀಲರನ್ನು ಆಯ್ಕೆ ಮಾಡಿಕೊಂಡಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ.
'ಪಟ್ಟಭದ್ರ ಹಿತಾಸಕ್ತಿಗಳು ಘಟನೆಯ ಸುತ್ತ ಸುಳ್ಳುಗಳನ್ನು ಹೆಣೆಯುತ್ತಿವೆ. ಇದನ್ನು ತಡೆಯಬೇಕಾಗಿದೆ. ಸಿಬಿಐ ಅಥವಾ ಎಸ್‌ಐಟಿ ತನಿಖೆಯನ್ನು ಸರ್ಕಾರ ವಿರೋಧಿಸುವುದಿಲ್ಲ. ಘಟನೆಯ ನಿಷ್ಪಕ್ಷಪಾತ ತನಿಖೆ ನಡೆಯಬೇಕಾಗಿದೆ. ಪ್ರಕರಣವನ್ನು ಸಿಬಿಐಗೆ ಶಿಫಾರಸು ಮಾಡಿದರೆ ಇಂಥ ಸುಳ್ಳು ನಿರೂಪಣೆಗಳಿಗೆ ಕಡಿವಾಣ ಬೀಳಲಿದೆ' ಎಂದು ಉತ್ತರಪ್ರದೇಶ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಪ್ರಕರಣವನ್ನು ಸಿಬಿಐಗೆ ಶಿಫಾರಸು ಮಾಡಲು ಸರ್ಕಾರದ ಪರವಾಗಿ ಒಪ್ಪಿಗೆ ಸೂಚಿಸಿದರಲ್ಲದೆ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದು ಮನವಿ ಮಾಡಿದರು.
ಮಹಿಳಾ ವಕೀಲರನ್ನು ಪ್ರತಿನಿಧಿಸಿದ ವಕೀಲರಾದ ಇಂದಿರಾ ಜೈಸಿಂಗ್ ಅವರು 'ಸಂತ್ರಸ್ತೆಯ ಕುಟುಂಬದವರಿಗೆ ರಕ್ಷಣೆ ನೀಡಲು ವ್ಯವಸ್ಥೆ ಮಾಡಬೇಕು, ವಿಚಾರಣೆಯನ್ನು ಬೇರೆಕಡೆಗೆ ಸ್ಥಳಾಂತರಿಸಬೇಕು ಮತ್ತು ಎಸ್‌ಐಟಿ ತನಿಖೆ ನಡೆಸಬೇಕು' ಎಂದು ಮನವಿ ಮಾಡಿದರು.'ತನಿಖೆಯನ್ನು ಸಿಬಿಐಗೆ ಒಪ್ಪಿಸಿದರೆ ತನಿಖೆಯು ಸುಸೂತ್ರವಾಗಿ ನಡೆಯುತ್ತದೆ ಎಂಬುದು ಖಾತರಿಯಾಗುತ್ತದೆ' ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಪೀಠ ಹೇಳಿತು.
ಮೂವರಿಗೆ ನೋಟಿಸ್
ತಮ್ಮ ಟ್ವಿಟರ್ ಖಾತೆಗಳಲ್ಲಿ ಹಾಥರಸ್ ಅತ್ಯಾಚಾರ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸುವ ಚಿತ್ರ ಹಾಗೂ ವಿಡಿಯೊಗಳನ್ನು ಪೋಸ್ಟ್ ಮಾಡಿರುವುದಕ್ಕೆ ಸ್ಪಷ್ಟನೆಯನ್ನು ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗವು ಬಿಜೆಪಿಯ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ, ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹಾಗೂ ನಟಿ ಸ್ವರಾ ಭಾಸ್ಕರ್ ಅವರಿಗೆ ಮಂಗಳವಾರ ನೋಟಿಸ್ ನೀಡಿದೆ. ಟ್ವಿಟರ್ ಖಾತೆಯಲ್ಲಿ ಹಾಕಿರುವ ಪೋಸ್ಟ್‌ಗಳನ್ನು ಕೂಡಲೇ ಅಳಿಸುವಂತೆ ಮತ್ತು ಭವಿಷ್ಯದಲ್ಲಿ ಇಂಥ ಪೋಸ್ಟ್‌ಗಳನ್ನು ಹಾಕದಂತೆ ಆಯೋಗವು ಇವರಿಗೆ ಸೂಚಿಸಿದೆ.