ಇಂಗ್ಲೆಂಡ್ ವಿರುದ್ಧ ನ್ಯೂಜಿಲ್ಯಾಂಡಿಗೆ 1-0 ಸರಣಿ ಗೆಲುವು

Soma shekhar
ಹ್ಯಾಮಿಲ್ಟನ್‌: ಕಿವೀಸ್ ಇದೀಗ ಕ್ರಿಕೆಟ್ ಜನಕರಾದ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ನೂತನ  ಖಲೆಯೊಂದನ್ನು ಬರೆದಿದೆ. ಅದರಲ್ಲೂ ವಿಲಿಯಮ್ಸನ್ ಮತ್ತು ಟೇಲರ್ ಅಮೋಘ ಶತಕ ಸಿಡಿಸಿದ್ದಾರೆ. 
 
ನಾಯಕ ಕೇನ್‌ ವಿಲಿಯಮ್ಸನ್‌ (ಅಜೇಯ 104), ರಾಸ್‌ ಟೇಲರ್‌ (ಅಜೇಯ 105) ಅವರ ವೈಭವದ ಶತಕದಾಟದ ನೆರವಿನಿಂದ ಪ್ರವಾಸಿ ಇಂಗ್ಲೆಂಡ್‌ ಎದುರಿನ ಹ್ಯಾಮಿಲ್ಟನ್‌ ಟೆಸ್ಟ್‌ ಪಂದ್ಯ ಡ್ರಾದಲ್ಲಿ ಅಂತ್ಯಕಂಡಿದೆ. ಈ ಫ‌ಲಿತಾಂಶದಿಂದಾಗಿ ನ್ಯೂಜಿಲ್ಯಾಂಡ್‌ ತಂಡವು ಇಂಗ್ಲೆಂಡ್‌ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ. ನಾಲ್ಕನೇ ದಿನದಾಟಕ್ಕೆ 96 ರನ್ನಿಗೆ 2 ವಿಕೆಟ್‌ ಕಳೆದುಕೊಂಡಿದ್ದ ಕಿವೀಸ್‌ ಅಂತಿಮ ದಿನ ಪ್ರಚಂಡ ಬ್ಯಾಟಿಂಗ್‌ ನಡೆಸಿತು. ಯಾವುದೇ ವಿಕೆಟ್‌ ಕಳೆದು ಕೊಳ್ಳದೆ 241ರನ್‌ ಗಳಿಸಿದ ವೇಳೆ ಮಳೆ ಸುರಿದಿದ್ದರಿಂದ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಲಾಯಿತು.
 
ಸಂಕ್ಷಿಪ್ತ ಸ್ಕೋರ್‌
 
ನ್ಯೂಜಿಲ್ಯಾಂಡ್‌ ದ್ವಿತೀಯ ಇನ್ನಿಂಗ್ಸ್‌ 241ಕ್ಕೆ 2 (ವಿಲಿಯಮ್ಸನ್‌ ಅಜೇಯ 104, ಟೇಲರ್‌ ಅಜೇಯ 105, ವೋಕ್ಸ್‌ 12ಕ್ಕೆ 1, ಕರನ್‌ 56ಕ್ಕೆ 1). ಇಂಗ್ಲೆಂಡ್‌-476 (ರೂಟ್‌ 226, ಬರ್ನ್ಸ್ 101, ಪೋಪ್‌ 75, ವ್ಯಾಗ್ನರ್‌ 124ಕ್ಕೆ 5, ಸೌಥಿ 90ಕ್ಕೆ 2). ಪಂದ್ಯ ಶ್ರೇಷ್ಠ: ಜೋ ರೂಟ್‌; ಸರಣಿಶ್ರೇಷ್ಠ: ನೀಲ್‌ ವ್ಯಾಗ್ನರ್‌.
 
ರಾಸ್ ಟೇಲರ್ ದಾಖಲೆ:- 
 
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ರಾಸ್‌ ಟೇಲರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 7ಸಾವಿರ ರನ್‌ ಪೂರ್ತಿಗೊಳಿಸಿದ ನ್ಯೂಜಿಲ್ಯಾಂಡಿನ ಎರಡನೇ ಆಟಗಾರ ಎಂದೆನಿಸಿಕೊಂಡಿದ್ದಾರೆ. ಟೇಲರ್‌ ಈ ಮೈಲುಗಲ್ಲು ಸ್ಥಾಪಿಸಲು 169 ಇನ್ನಿಂಗ್ಸ್‌ ಬ್ಯಾಟ್ ಬೀಸಿದ್ದಾರೆ. ಒಟ್ಟಾರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೇಲರ್‌ ಈ ಸಾಧನೆಗೈದ 51ನೇ ಕ್ರಿಕೆಟಿಗರಾಗಿದ್ದಾರೆ. ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಅತೀವೇಗವಾಗಿ ಈ ಸಾಧನೆಗೈದ ಆಟಗಾರರಾಗಿದ್ದಾರೆ. ಅವರು ಪಾಕಿಸ್ಥಾನ ವಿರುದ್ಧದ ಟೆಸ್ಟ್‌ನಲ್ಲಿ ಈ ಸಾಧನೆ ದಾಖಲಿಸಿದ್ದರು. ಅದು ಅವರ 126ನೇ ಇನ್ನಿಂಗ್ಸ್‌ ಆಗಿತ್ತು. ಭಾರತದ ವೀರೇಂದ್ರ ಸೆಹವಾಗ್‌ ಮತ್ತು ಸಚಿನ್‌ ತೆಂಡುಲ್ಕರ್‌ ಅನುಕ್ರಮವಾಗಿ 134ನೇ ಮತ್ತು 136ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದು ಕ್ರಿಕೇಟ್ ನಲ್ಲಿ ಇತಿಹಾಸದ ಪುಟಗಳಲ್ಲಿ ಸೇರಿದೆ.

Find Out More:

Related Articles: