ಕ್ರಿಕೆಟಿಗರು ಎನ್.ಸಿ.ಎ ಗೆ ಒಳಪಟ್ಟಿರಬೇಕಾ ಇಲ್ಲವಾ ಎಂಬುದು ಇದೀಗ ಗೊಂದಲಕಾರಿಯಾಗಿದೆ. ಈ ಎನ್. ಸಿ ಎ ಏನು, ಅದರ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದೇನು ಎಂಬ ಮಾಹಿತಿ ಇಲ್ಲಿದೆ ನೋಡಿ.
ಕ್ರಿಕೆಟ್ ತಂಡದ ಪ್ರತಿಯೊಬ್ಬ ಆಟಗಾರನೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಒಳಪಟ್ಟಿರಬೇಕು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಈ ಮೊದಲು ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸದ ಜಸ್ಪ್ರೀತ್ ಬುಮ್ರಾಗೆ ಫಿಟ್ನೆಸ್ ಪ್ರಮಾಣ ಪತ್ರ ನೀಡಲು ಎನ್‌ಸಿಎ ನಿರಾಕರಿಸಿತ್ತು. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ವಿಶಾಖಪಟ್ಟಣದಲ್ಲಿ ನಡೆದ 2ನೇ ಏಕದಿನ ಪಂದ್ಯದ ಪೂರ್ವದಲ್ಲಿ ನೆಟ್‌ನಲ್ಲಿ ಕಾಣಿಸಿಕೊಂಡು ತಾವು ಗಾಯದ ಸಮಸ್ಯೆಯಿಂದ ಮುಕ್ತಿ ಹೊಂದಿರುವುದಾಗಿ ತೋರಿಸಿಕೊಟ್ಟ ಹೊರತಾಗಿಯೂ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಪ್ರಮಾಣ ಪತ್ರಕ್ಕಾಗಿ ಇನ್ನಷ್ಟು ದಿನ ಕಾಯುವಂತಾಗಿದೆ.
ಸ್ಟ್ರೆಸ್ ಫ್ರಾಕ್ಚರ್‌ಗೆ ಚಿಕಿತ್ಸೆ ಪಡೆದ ಬಳಿಕ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಪುನಶ್ಚೇತನ ಕೇಂದ್ರಕ್ಕೆ ಬರುವ ಬದಲು ತಮ್ಮದೇ ಖಾಸಗಿ ತರಬೇತುದಾರರ ಮೂಲಕ ಅಭ್ಯಾಸ ನಡೆಸಿರುವ ಬುಮ್ರಾಗೆ ಫಿಟ್ನೆಸ್ ಟೆಸ್ಟ್ ನಡೆಸಲು ಸಾಧ್ಯವಿಲ್ಲಎಂದು ಎನ್‌ಸಿಎ ಹೇಳಿದೆ. ಎನ್‌ಸಿಎ ನಿರ್ಧಾರ ಗೊಂದಲದ ವಿಚಾರವಾಗಿ ಮಾರ್ಪಟ್ಟಿದ್ದು, ಬಿಸಿಸಿಐ ಅಧ್ಯಕ್ಷ ಗಂಗೂಲಿ ಸೇರಿದಂತೆ ಬಿಸಿಸಿಐಗೆ ಸಂಬಂಧಿಸಿದ ಪ್ರಮುಖರು ಎನ್‌ಸಿಎ ಮುಖ್ಯಸ್ಥ ದ್ರಾವಿಡ್ ಮನವೊಲಿಕೆಗೆ ಮುಂದಾಗಿದ್ದಾರೆ.
ನಮ್ಮ ಶಿಬಿರದಲ್ಲಿ ಪುನಶ್ಚೇತನ ಕ್ರಮಕ್ಕೆ ಒಳಗಾಗದ ಬುಮ್ರಾಗೆ ನಾವು ಹೇಗೆ ಫಿಟ್ನೆಸ್ ಟೆಸ್ಟ್ ನಡೆಸಲು ಸಾಧ್ಯ ಎಂದು ಎನ್.ಸಿ.ಎ ಮುಖ್ಯಸ್ಥ ದ್ರಾವಿಡ್ ಹಾಗೂ ಫಿಸಿಯೋ ಆಶಿಶ್ ಕೌಶಿಕ್ ಪ್ರಶ್ನಿಸಿದ್ದಾರೆ. ವಿಶಾಖಪಟ್ಟಣದಲ್ಲಿ ನೆಟ್‌ನಲ್ಲಿ ಬೌಲಿಂಗ್ ಮಾಡಿದ್ದ ಬುಮ್ರಾ ಅಲ್ಲಿಂದ ನೇರ ಬೆಂಗಳೂರಿಗೆ ಬಂದು ಪರೀಕ್ಷೆಗೊಳಗಾಗಲು ಮುಂದಾಗಿದ್ದರು. ಆದರೆ, ಅವರಿಗೆ ಪರೀಕ್ಷೆ ನಡೆಸಲು ಒಪ್ಪದ ಎನ್‌ಸಿಎ, ಅನ್ಯ ತರಬೇತುದಾರರ ಮೂಲಕ ಸುಧಾರಣೆ ಕಂಡುಕೊಂಡಿರುವ ಬುಮ್ರಾಗೆ ಪರೀಕ್ಷೆ ನಡೆಸಿ ಪ್ರಮಾಣಪತ್ರ ನೀಡಿದ್ದೇ ಆದಲ್ಲಿ, ಆ ಬಳಿಕ ಅವರಿಗೇನಾದರೂ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎನ್ನುವ ಸರಳ ತರ್ಕ ಮುಂದಿಟ್ಟಿದೆ. ಗಂಗೂಲಿ ಎನ್.ಸಿ.ಎ ಗೆ ಒಳಪಟ್ಟಿರಬೇಕಾ ಎಂದು ಹೇಳಿದ್ದಾರೆ.