ಮುಂಬಯಿ: ಕ್ರಿಕೇಟ್ ದೇವರು ಸಚಿನ್ ತೆಂಡುಲ್ಕರ್ ಅವರನ್ನು ಭಾರತೀಯ ಕ್ರಿಕೆಟಿಗರು ಮಾತ್ರವಲ್ಲದೇ ವಿಶ್ವ ಕ್ರಿಕೆಟಿಗರು ಗೌರವದಿಂದಲೇ ಕಾಣುತ್ತಾರೆ. ಸಚಿನ್ ತುಂಬಾ ಹಾಸ್ಯಪ್ರವೃತ್ತಿಯ ವ್ಯಕ್ತಿಯೂ ಅಲ್ಲದಿರುವುದರಿಂದ ಅವರ ಕಾಲೆಳೆಯುವುದು ಅಷ್ಟು ಸುಲಭದ ಮಾತೂ ಅಲ್ಲ. ಆದರೆಸಚಿನ್ ಅವರ ಕಾಲನ್ನೂ ಎಳೆಯುವ ಸಲಿಗೆಯಾರಿಗಾದರೂ ಇದ್ದರೆ ಅದು ಭಾರತೀಯ ಕ್ರಿಕೆಟ್ ತಂಡದ ಯಶಸ್ವೀ ಮಾಜೀ ಕಪ್ತಾನ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಮಾತ್ರವೇ ಸರಿ. ಹೌದು, ಅದು ಯಾಕೆ ಗೊತ್ತಾ!? ಇಲ್ಲಿದೆ ನೋಡಿ ಮಾಹಿತಿ.
ಕ್ರಿಕೇಟ್ ದೇವರೆಂದೇ ಖ್ಯಾತಿ ಪಡೆದಿರುವ ಸಚಿನ್ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಅವರದ್ದು ದೇಶೀ ಕ್ರಿಕೆಟ್ ನಿಂದ ಹಿಡಿದು ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದವರೆಗೂ ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಸಂಬಂಧ ಮತ್ತು ಸಲುಗೆ. ಒಂದು ಕಾಲದಲ್ಲಿ ಇವರಿಬ್ಬರದ್ದು ವಿಶ್ವ ಕ್ರಿಕೆಟ್ ನಲ್ಲಿ ಯಶಸ್ವೀ ಓಪನಿಂಗ್ ಜೋಡಿಯೂ ಹೌದು. ಇಂತಿಪ್ಪ ಸಚಿನ್-ಸೌರವ್ ಮಧುರ ಬಾಂಧವ್ಯದ ಪರಿಚಯ ಇದೀಗ ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳಿಗೆ ಉಂಟಾಗಿದೆ. ಸಚಿನ್ ಅವರು ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ಅಲ್ಲಿ ಕಾಡ್ಗಿಚ್ಚು ಸಂತ್ರಸ್ತರಿಗಾಗಿ ಆಯೋಜಿಸಲಾಗಿದ್ದ ಸಹಾಯಾರ್ಥ ಪಂದ್ಯದಲ್ಲಿ ರಿಕಿ ಪಾಟಿಂಗ್ ತಂಡದ ಕೋಚ್ ಆಗಿ ತಮ್ಮ ಅನುಭವವನ್ನು ಧಾರೆ ಎರೆದಿದ್ದರು ಮತ್ತು ಒಂದು ಓವರ್ ಬ್ಯಾಟಂಗ್ ಸಹ ಮಾಡಿದ್ದರು.
ಇದಕ್ಕೆ ಕಮೆಂಟ್ ಮಾಡಿದ್ದ ಸೌರವ್, ‘ಕಿಸಿ ಕಿಸಿ ಕಾ ಕಿಸ್ಮತ್ ಅಚ್ಚಾ ಹೈ (ಕೆಲವರ ಅದೃಷ್ಟ ನೋಡಿ)… ಚುಟ್ಟಿ ಮನಾತೆ ರಹೋ (ರಜೆಯ ಮಜಾ ಅನುಭವಿಸುತ್ತಿದ್ದಾರೆ) ಎಂದು ಕಮೆಂಟ್ ಮಾಡುವ ಮೂಲಕ ತಮ್ಮ ಗೆಳೆಯನ ಕಾಲೆಳೆದಿದ್ದರು. ಇದೀಗ ಸಚಿನ್ ಅವರು ಜರ್ಮನಿ ಪ್ರವಾಸದಲ್ಲಿದ್ದಾರೆ. ತಾವು ಬರ್ಲಿನ್ ನಲ್ಲಿ ಸುತ್ತಾಡುತ್ತಿರುವ ಕೆಲವೊಂದು ಚಿತ್ರಗಳನ್ನು ಸಚಿನ್ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ‘ಲಾರೆಸ್ ಸ್ಪೋರ್ಟ್ ವರ್ಲ್ಡ್ ಸ್ಪೋರ್ಟ್ ಅವಾರ್ಡ್ಸ್ 2020ಗಾಗಿ ಬರ್ಲಿನ್ ನಲ್ಲಿದ್ದೇನೆ, ಖುಷಿಯಾಗುತ್ತಿದೆ’ ಎಂದು ಬರೆದುಕೊಂಡಿದ್ದರು. ಇದಕ್ಕೆ ಇಂದು ಮತ್ತೆ ಕಮೆಂಟ್ ಮಾಡಿರುವ ಸೌರವ್ ಗಂಗೂಲಿ ಅವರು, ‘ತೆಂಡುಲ್ಕರ್, ನಾನು ಹೇಳಿದ್ದು ಸುಳ್ಳಲ್ಲ…’ ಎಂದು ಮತ್ತೆ ಸಚಿನ್ ಕಾಲೆಳೆದಿದ್ದಾರೆ.