ಮೌಂಟ್ ಮಾಂಗ್ನುಯಿ: ಹಿಟ್ ಮ್ಯಾನ್ ಖ್ಯಾತಿಯ ಭಾರತ ಕ್ರಿಕೆಟ್ ತಂಡದ ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕಿವೀಸ್ ವಿರುದ್ಧದ 5ನೇ ಟೀಟ್ವಂಟಿ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14000 ರನ್ ಗಳ ಮೈಲುಗಲ್ಲು ತಲುಪಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಈ ಮಹಾನ್ ದಾಖಲೆಯನ್ನು ಬರೆದರು. ಅಲ್ಲದೆ ಮಾಜಿ ಐಕಾನ್‌ಗಳಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಮುಂತಾದವರ ಜೊತೆಗೆ ಎಲೈಟ್ ಪಟ್ಟಿಗೆ ಸೇರಿರುವ ರೋಹಿತ್ ಶರ್ಮಾ, ಈ ಸಾಧನೆ ಮಾಡಿದ ಭಾರತದ ಎಂಟನೇ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಭಾಜನವಾದರು.
ಭಾರತದ ಪರ ಮಾಜಿ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್, ವೀರೇಂದ್ರ ಸೆಹ್ವಾಗ್, ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14000ಕ್ಕೂ ಹೆಚ್ಚು ರನ್‌ಗಳ ಮೈಲುಗಲ್ಲು ಬರೆದಿದ್ದಾರೆ. ಈ ಪೈಕಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಮಕಾಲೀನ ಆಟಗಾರರಾಗಿದ್ದಾರೆ.
ಒಟ್ಟಾರೆಯಾಗಿ ಟಿ20ನಲ್ಲಿ ರೋಹಿತ್ ಶರ್ಮಾ 21ನೇ ಅರ್ಧಶತಕದ ಸಾಧನೆ ಮಾಡಿದ್ದಾರೆ. 35 ಎಸೆತಗಳಲ್ಲೇ ಅರ್ಧಶತಕ ಬಾರಿಸಿದ ರೋಹಿತ್ ಮಿಂಚಿನಾಟ ಪ್ರದರ್ಶಿಸಿದರು. ಆದರೆ ಬಳಿಕ ಗಾಯದ ಸಮಸ್ಯಗೊಳಗಾಗಿ ನಿವೃತ್ತಿ ಘೋಷಿಸಿದರು. 41 ಎಸೆತಗಳನ್ನು ಎದುರಿಸಿದ ರೋಹಿತ್ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್‌ಗಳಿಂದ 60 ರನ್ ಗಳಿಸಿದರು. ಇದೇ ಸರಣಿಯ ಮೂರನೇ ಪಂದ್ಯದಲ್ಲೂ ರೋಹಿತ್ 23 ಎಸೆತಗಳಲ್ಲೇ ಫಿಫ್ಟಿ ಬಾರಿಸಿದ್ದರು. ಸೂಪರ್ ಒವರ್ ನಲ್ಲಿ ಗೆಲ್ಲಿಸಿದ್ದರು. ಹಾಗೆಯೇ ಆರಂಭಿಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10000 ರನ್‌ಗಳ ಸಾಧನೆ ಮೆರೆದಿದ್ದರು.
ಸಚಿನ್ ತೆಂಡೂಲ್ಕರ್ (34,357)
ರಾಹುಲ್ ದ್ರಾವಿಡ್ (24,208)
ವಿರಾಟ್ ಕೊಹ್ಲಿ (21,777 *),
ಸೌರವ್ ಗಂಗೂಲಿ (18,575),
ಮಹೇಂದ್ರ ಸಿಂಗ್ ಧೋನಿ (17,266 *),
ವೀರೇಂದ್ರ ಸೆಹ್ವಾಗ್ (17,253),
ಮೊಹಮ್ಮದ್ ಅಜರುದ್ದೀನ್ (15,593),
ರೋಹಿತ್ ಶರ್ಮಾ (14,000*)