ಡೆಲ್ಲಿ ಕ್ಯಾಪಿಟಲ್ಸ್ ಎದುರು ಮಂಡಿಯೂರಿದ ಚೆನ್ನೈ ಸೂಪರ್ಸ್ ಕಿಂಗ್ಸ್
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 176 ರನ್ಗಳ ಗುರಿ ಬೆನ್ನತ್ತಿದ ಚೆನ್ನೈ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 131 ರನ್ ಕಲೆಹಾಕಿತು. ಆರಂಭಿಕರಾಗಿ ಕಣಕ್ಕಿಳಿದ ಮುರುಳಿ ವಿಜಯ್ (10) ಮತ್ತು ಶೇನ್ ವ್ಯಾಟ್ಸನ್ (14) ಬಹುಬೇಗ ವಿಕೆಟ್ ಒಪ್ಪಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ ರುತುರಾಜ್ ಗಾಯಕ್ವಾಡ್ (5) ಸಹ ಡಗೌಟ್ ಸೇರಿದರು. ಕೇವಲ 44 ರನ್ಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಚೆನ್ನೈ ತಂಡ ಸಂಕಷ್ಟಕ್ಕೆ ಸಿಲುಕಿತು.
ಕೇದರ್ ಜಾಧವ್ (26) ಹಾಗೂ ಫಾಫ್ ಡುಪ್ಲೆಸಿಸ್ (43) ಕೆಲವೊತ್ತು ಕ್ರೀಸ್ನಲ್ಲಿ ನಿಲ್ಲುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರಾದರೂ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದ್ದು ಚೆನ್ನೈ ಸೋಲು ಬಹುತೇಕ ಖಚಿತವಾಯಿತು. ನಾಯಕ ಧೋನಿ (15) ಬಹು ಬೇಗ ಔಟಾಗಿ ಹೊರ ನಡೆದರು. ರವೀಂದ್ರ ಜಡೇಜಾ (12) ಸಹ ಧೋನಿಯನ್ನೇ ಹಿಂಬಾಲಿಸಿದರು. ಕೊನೆಯಲ್ಲಿ ಸ್ಯಾಮ್ ಕರನ್ 1 ರನ್ ಗಳಿಸಿ ಅಜೇಯರಾಗಿ ಉಳಿದರು.
ಡೆಲ್ಲಿ ಪರ ಕಾಗಿಸೋ ರಬಾಡ 3 ವಿಕೆಟ್ ಕಬಳಿಸಿ ಮಿಂಚಿದರು. ಉಳಿದಂತೆ ಆಯನ್ರಿಚ್ ನೊರ್ಟ್ಜೆ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 1 ವಿಕೆಟ್ಗೆ ತೃಪ್ತಿಪಟ್ಟರು.
ಪೃಥ್ವಿ ಷಾ ಆಕರ್ಷಕ ಅರ್ಧಶತಕ
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಮೊದಲ ವಿಕೆಟ್ಗೆ 94 ರನ್ ಜತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ವೇಳೆ 35 ರನ್ ಗಳಿಸಿದ್ದ ಧವನ್ ಎಲ್ಬಿ ಬಲೆಗೆ ಬಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ 64 ರನ್ ಗಳಿಸಿದ ಪೃಥ್ವಿ ಶಾ ಮುನ್ನುಗ್ಗಿ ಬಾರಿಸಲು ಹೋಗಿ ಸ್ಟಂಪೌಟ್ ಆದರು. ನಾಯಕ ಶ್ರೇಯಸ್ ಅಯ್ಯರ್ 26 ರನ್ಗಳ ಕಾಣಿಕೆ ನೀಡಿದರೆ, ರಿಷಬ್ ಪಂತ್ (35) ಮತ್ತು ಮಾರ್ಕಸ್ ಸ್ಟೋನಿಸ್ (5) ರನ್ ಗಳಿಸಿ ಅಜೇಯರಾಗಿ ಉಳಿದರು.